

ಹಾಸನ: ಶುಕ್ರವಾರ ಬೆಳಗ್ಗೆಯಿಂದ ಮಂಗಳವಾರ ಬೆಳಗ್ಗೆ 5 ಗಂಟೆಯವರೆಗೆ 6,40,700 ಜನ ದರ್ಶನ ಪಡೆದಿದ್ದಾರೆ. ಮಂಗಳವಾರ ಬೆಳಗ್ಗೆಯಿಂದ ಇಲ್ಲಿಯವರೆಗೆ 1,22,600 ಭಕ್ತರು ದರ್ಶನ ಪಡೆದಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಮಾಹಿತಿ ನೀಡಿದರು.
ಐದುವರೆ ಕಿಲೋಮೀಟರ್ ಬ್ಯಾರಿಕೇಡ್ ವ್ಯವಸ್ಥೆ ಮಾಡಿದ್ದೇವೆ. ಮಾರನೇ ದಿನ ಒಂದು ಕಿಲೋಮೀಟರ್, ಮೂರನೇ ದಿನ ಮತ್ತೊಂದು ಕಿಲೋಮೀಟರ್ ಜಾಸ್ತಿ ಮಾಡಿದ್ದೇವೆ. ಏಳುವರೆ ಕಿಲೋಮೀಟರ್ ಬ್ಯಾರಿಕೇಡ್ ವ್ಯವಸ್ಥೆ ಮಾಡಿದ್ದೇವೆ. ಆದರೂ ಸಾಲುತ್ತಿಲ್ಲ. ಅದನ್ನು ಮೀರಿ ಜನ ಬಂದಿದ್ದಾರೆ. ಸೋಮವಾರ 1,10,1000 ಜನರನ್ನು ನಿರೀಕ್ಷೆ ಮಾಡಿದ್ದೆವು. ಆದರೆ 2,29,000 ಜನ ಬಂದು ದರ್ಶನ ಮಾಡಿದ್ದಾರೆ. ಬುಧವಾರ ಬೆಳಗ್ಗೆ 5 ಗಂಟೆಯವರೆಗೆ ಒಂದೂವರೆ ಲಕ್ಷ ಜನ ದರ್ಶನ ಮಾಡುವ ಸಾಧ್ಯತೆ ಇದೆ. ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ ಹೆಚ್ಚು ಜನ ಬಂದಿದ್ದಾರೆ ಎಂದರು.
ಸ್ವಚ್ಛತೆ, ಕುಡಿಯುವ ನೀರು, ಪ್ರಸಾದ, ಮಜ್ಜಿಗೆ ವ್ಯವಸ್ಥೆ ಮಾಡಿದ್ದೇವೆ. ಇಂದು ದೇವಿ ದರ್ಶನಕ್ಕೆ 4 ಗಂಟೆಗೂ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ. ಬರುವವರು ಮಾನಸಿಕವಾಗಿ ಸಿದ್ಧರಾಗಿ ಬರಬೇಕು. ಬರುವವರ ಸಂಖ್ಯೆ ನಂಬರ್‌ಗಿಂತ ಡಬಲ್ ಆಗಿದೆ. ನಿನ್ನೆ ಮೂರೂವರೆ ಗಂಟೆಯಲ್ಲಿ ದರ್ಶನ ಆಗಿದೆ. ಅದನ್ನು ಬಿಟ್ಟರೆ ಸುಗಮವಾಗಿ ನಡೆದಿದೆ. ಜಿಲ್ಲಾಡಳಿತ ಹಗಲು-ರಾತ್ರಿ ಕೆಲಸ ಮಾಡುತ್ತಿದೆ.
ಅರ್ಚಕರನ್ನು ಮನವಿ ಮಾಡಿ ನಿನ್ನೆ ರಾತ್ರಿ 3 ರಿಂದ 5 ಗಂಟೆಯವರೆಗೆ ಗರ್ಭಗುಡಿ ಬಾಗಿಲು ಮುಚ್ಚದೆ ದರ್ಶನ ಮಾಡಿಸಿದ್ದೇವೆ. ಇಂದು ಬೆಳಗ್ಗೆ ಐದು ಗಂಟೆಯವರೆಗೆ ದರ್ಶನ ಕಲ್ಪಿಸಿದ್ದೆವು. ಜನ ತುಂಬಾ ಸಂತೋಷದಿಂದ ದರ್ಶನ ಪಡೆಯುತ್ತಿದ್ದಾರೆ. ನಮ್ಮ ದೇವಿ ನಮಗೆ ವಾಪಾಸ್ ಬಂದಿದೆ ಎಂದು ಸಂತಸ ಪಡುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು, ರೈತರು, ದುಡಿಯವ ವರ್ಗದವರು ದೇವಿ ದರ್ಶನಕ್ಕೆ ಬರುತ್ತಿದ್ದಾರೆ.
ನಿನ್ನೆ ಮತ್ತು ಇವತ್ತು ಬಂದಿರುವ ಜನ ನೋಡಿದರೆ ಇನ್ನು ಮುಂದೆ ಶೇ.50 ರಿಂದ 100ರಷ್ಟು ಹೆಚ್ಚಿಗೆ ಜನ ಬರುವ ಸಾಧ್ಯತೆ ಇದೆ. ಇದು ನಮಗೆ ಸವಾಲ್ ಆಗುತ್ತದೆ. ಇನ್ನೂ ಎಂಟು ದಿನಕ್ಕೆ ನಾವು ಸಜ್ಜಾಗಿದ್ದೇವೆ. ಶುಕ್ರವಾರ ಬೆಳಗ್ಗೆ 5ಗಂಟೆಯವರೆಗೆ 1000 ರೂ. ಹಾಗೂ 300 ರೂ. ವಿಶೇಷ ದರ್ಶನದ ಟಿಕೆಟ್, ಲಾಡು ಪ್ರಸಾದ ಮಾರಾಟದಿಂದ 4,21,73,760 ಹಣ ಬಂದಿದೆ.
ಮಂಗಳವಾರ ಮಧ್ಯಾಹ್ನಕ್ಕೆ 1000 ರೂ.ನ 3,600 ಟಿಕೆಟೆ ಮಾರಾಟ ಆಗಿದೆ. 300 ರೂ.ನ 6000 ಟಿಕೆಟ್ ಮಾರಾಟ ಆಗಿದೆ. ಆದಾಯ ಬರಲಿ ಬಿಡಲಿ, ನಮಗೆ ಜನರಿಗೆ ಶೀಘ್ರ ದರ್ಶನ ಮುಖ್ಯ ಎಂದರು.
ಮಾಜಿ ಸಚಿವ ಎಚ್.ಡಿ.ರೇವಣ್ಣ ದೇವಾಲಯಕ್ಕೆ ಬಂದ ವಿಚಾರದಲ್ಲಿ ಎಸ್ಕಾರ್ಟ್ ವಾಹನದಿಂದ ನಮಗೆ ಕಮ್ಯೂನಿಕೇಷನ್ ಇತ್ತು. ನಾವು ಗೆಸ್ಟ್‌ಹೌಸ್‌ಗೆ ಕರೆದುಕೊಂಡು ಬನ್ನಿ ಅಂತ ಹೇಳಿದ್ದೆವು. ಆದರೆ, ಅವರು ಬರಲಿಲ್ಲ. ಅದು ಅವರವರ ಧರ್ಮ. ಎಲ್ಲರೂ ಹೋಗುವಾಗ ನಾವು ಅಲ್ಲಿಯೇ ಹೋಗಬೇಕು ಎನ್ನುವುದು ಧರ್ಮ. ಅವರಿಗೆ ಹಾಸನಾಂಬೆ ಮೇಲೆ ವಿಶೇಷ ಭಾವನೆ, ಪ್ರತೀತಿ ಇಟ್ಟುಕೊಂಡು ಬಂದಿದ್ದಾರೆ. ಇದು ದೊಡ್ಡ ವಿಷಯ ಅಲ್ಲ, ಅದನ್ನು ದೊಡ್ಡದು ಮಾಡಲು ಹೋಗಲ್ಲ ಎಂದರು.