ಸೇವಾಸಿಂಧು ತಂತ್ರಾಂಶ ತೊಡಕು. ಬದಲಾದ ಖಾತೆಗೆ ಸಬ್ಸಿಡಿ, ಸಹಾಯಧನ.

IMG-20230328-WA0011
Published on

ಶಿವಾನಂದ ಹಿರೇಮಠ ಗದಗ
ಸೇವಾಸಿಂಧು ತಂತ್ರಾಂಶದಲ್ಲಿ ತಾಂತ್ರಿಕ ತೋಡಕು ಉದ್ಭವಿಸಿದ ಪರಿಣಾಮ ಲಾನುಭವಿಗಳ ಸಬ್ಸಿಡಿ, ಪರಿಹಾರ, ಅನುದಾನವು ಲಾನುಭವಿಗಳ ಮತ್ತೊಂದು ಖಾತೆಗೆ ಅಥವಾ ಸಾಲದ ಖಾತೆಗೆ ಜಮೆಯಾಗುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಆಧಾರ್​ ಸಂಖ್ಯೆಯು ಲಾನುಭವಿಗಳ ಹಲವು ಬ್ಯಾಂಕ್​ ಖಾತೆಗಳಿಗೆ ಲಿಂಕ್​ ಆದ ಪರಿಣಾಮ ಇಂತಹ ಪ್ರಕರಣಗಳು ಜರುಗುತ್ತಿವೆ ಎಂದು ಹಲವು ಇಲಾಖಾ ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ. ಖಾತೆ ಬದಲಾಗಿ ಇತರೆ ಖಾತೆಗೆ ಜಮೆಯಾದ ಸಹಾಯಧನವನ್ನು ಜಿಲ್ಲಾ ಅಧಿಕಾರಿಗಳು ವಿಚಾರಣೆ ನಡೆಸಿ ಹಿಂಪಡೆದ ಪ್ರಕರಣಗಳೂ ಬೆಳಕಿಗೆ ಬರುತ್ತಿದ್ದು, ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳು ಬೆಂಗಳೂರು ಕೇಂದ್ರ ಕಚೇರಿಗೆ ಮನವಿ ಮಾಡುತ್ತಿದ್ದಾರೆ. ಪ್ರಮುಖವಾಗಿ ಅಂಬೇಡ್ಕರ ಅಭಿವೃದ್ಧಿ ನಿಗಮ, ಸಾಯಿ ಕರ್ಮಚಾರಿ, ಬೋವಿ, ತಾಂಡಾ ಅಭಿವೃದ್ಧಿ ನಿಗಮದಡಿ ಜಾರಿಗೊಳ್ಳುವ ಸಾಲ ಸೌಲಭ್ಯ ಸಹಾಯಧನ ಯೋಜನೆಯಲ್ಲಿ ಇಂತಹ ಪ್ರಕರಣಗಳನ್ನು ಇಲಾಖಾ ಅಧಿಕಾರಿಗಳು ಬೇಧಿಸುತ್ತಿದ್ದಾರೆ.

ಪ್ರಕರಣ 1:
ಸ್ವಯಂ ಉದ್ಯೋಗ ನೆರವು ಯೋಜನೆಯಡಿ ಜಿಲ್ಲೆಯ ನರಗುಂದ ತಾಲೂಕಿನ ಸಾವಿತ್ರಿ ಎಂಬುವರ ಸಾಲ ಸೌಲಭ್ಯಕ್ಕೆ ಅಜಿರ್ ಸಲ್ಲಿಸಿದ್ದರು. ಅಂಬೇಡ್ಕರ ಅಭಿವೃದ್ಧಿ ನಿಗಮದಿಂದ ದಾಖಲೆ ಪರಿಶೀಲಿಸಿ, ಸ್ಥಳ ಪರೀವಿಕ್ಷಣೆ ನಡೆಸಲಾಗಿತ್ತು. ಜಿಪಿಎಸ್​ ಪೊಟೋಗಳನ್ನು ಸೇವಾಸಿಂಧು ತಂತ್ರಾಂಶದಲ್ಲಿ ಅಪ್​ಲೋಡ್​ ಮಾಡಲಾಗಿತ್ತು. ತದನಂತರ ನಿಗಮದಿಂದ 1 ಲಕ್ಷ ರೂ, ಅನುದಾನ ನೇರವಾಗಿ ಲಾನುಭವಿ ಖಾತೆಗೆ ಜಮೆ ಮಾಡಲಾಗುತ್ತದೆ. ಆದರೆ, ಸಾಲದ ನೆರವು ಬಾರದ ಕುರಿತು ಇಲಾಖೆಯಲ್ಲಿ ಸಾವಿತ್ರಿ ವಿಚಾರಿಸಿ, ತನ್ನ ಖಾತೆಗೆ ಜಮೆ ಆಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ ನಂತರ ಇಲಾಖಾ ಅಧಿಕಾರಿಗಳು ಪ್ರಕರಣದ ತನಿಖೆ ಆರಂಭಿಸುತ್ತಾರೆ. ಮೂಲತಃ ಸಾವಿತ್ರಿ ಮತ್ತು ಸವಿತಾ ಹೆಸರುಗಳು ಒಂದೇ ಮಹಿಳೆಯದ್ದಾಗಿದ್ದು, ತವರು ಮನೆ ಬಾದಾಮಿಯಲ್ಲಿ ಇರುವ ಎಸ್​ಬಿಐ ಖಾತೆಗೆ ಹಣ ಜಮೆಯಾಗಿದೆ ಎಂದು ತಿಳಿದು ಬಂದಿದೆ. ಇಂತದ್ದೇ ಕೆಲವು ಪ್ರಕರಣಗಳನ್ನು ತನಿಖಾಧಿಕಾರಿಗಳು ತನಿಖೆಗೆ ಒಳಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಕರಣ 2:
ಸಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದಲ್ಲೂ ಇಂತಹ ಅವಾಂತರಗಳು ನಡೆದು ಅರ್ಹ ಲಾನುಭವಿಗಳಿಗೆ ನೆರವು ಸಿಗುತ್ತಿಲ್ಲ. ಗೂಡ್ಸ್​ ವಾಹನ ಖರೀದಿಗೆ ನಿಗಮದಿಂದ ಕೊಡಮಾಡುವ 3.25 ಸಾಲ ಸೌಲಭ್ಯ, 3.50 ಲಕ್ಷ ಸಬ್ಸಿಡಿ ಯೋಜನೆಯಲ್ಲೂ ಯಾರದ್ದೋ ಅಜಿರ್ಗೆ? ಯಾರದ್ದೋ ಖಾತೆ ಲಿಂಕ್​ ಆಗಿ ಆನ್​ಲೈನ್​ ಮೂಲಕ ಅಜಿರ್ ವಿಲೇವಾರಿ ಮಾಡಲು ಸಾಧ್ಯವಾಗುತ್ತಿಲ್ಲ. ಗದಗ ನಗರದ ಒಬಳೇಶ ಯಶವಂತಪುರ ಎಂಬುವರು ಗೂಡ್ಸ್​ ವಾಹನ ಖರೀದಿಗೆ ಅಜಿರ್ ಸಲ್ಲಿಸಿದ್ದರು. ಆನ್​ಲೈನ್​ ಮೂಲಕ ಅಜಿರ್ ವಿಲೇವಾರಿ ಮಾಡುವ ಸಂದರ್ಭದಲ್ಲಿ ಹಾವೇರಿಯ ಗಿರಿಜಮ್ಮ ಚಲವಾದಿ ಎಂಬುವರ ಹೆಸರು ಸೇವಾಸಿಂಧು ತಂತ್ರಾಂಶದಲ್ಲಿ ಅಡಕವಾಗಿದೆ. ಅದೇ ರೀತಿ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಕೃಷ್ಣ ಕಟ್ಟಿಮನಿ ಎಂಬುವರ ಅಜಿರ್ ವಿಲೇವಾರಿ ಮಾಡುವ ಸಂದರ್ಭದಲ್ಲಿ ಜಗದೀಶ ಮಾದರ ಎಂಬುವರ ಅಜಿರ್ಯನ್ನು ತಂತ್ರಾಂಶ ತೋರಿಸುತ್ತಿದೆ.

ಇಲಾಖಾ ಅಧಿಕಾರಿಗಳು ಹೈರಾಣು:
ಒಂದೇ ಆಧಾರ್​ ಸಂಖ್ಯೆ ಹಲವು ಖಾತೆಗಳಿಗೆ ಸಂಯೋಜನೆ ಆದ ಪರಿಣಾಮ ಇಂತಹ ಸಮಸ್ಯೆಗಳು ಉದ್ಭವಿಸುತ್ತಿವೆ ಎಂಬುದು ಸಿಬ್ಬಂದಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಕೇಂದ್ರ ಕಚೇರಿಗೂ ದೂರು ನೀಡಲಾಗಿದೆ. ತಂತ್ರಾಂಶದಲ್ಲಿ ಲೋಪದೋಷಗಳನ್ನು ತಾಂತ್ರಿಕ ವಿಭಾಗದ ಸಿಬ್ಬಂದಿ ದುರಸ್ತಿಗೊಳಿಸುತ್ತಿದ್ದಾರೆ ಎಂದು ಸಿಬ್ಬಂದಿ ಹೇಳುತ್ತಾರೆ.

ಕೋಟ್​:
ಸೇವಾ ಸಿಂಧು ತಂತ್ರಾಶದಲ್ಲಿ ಇರುವ ತಾಂತ್ರಿಕ ಸಮಸ್ಯೆಯನ್ನು ಬೆಂಗಳೂರು ಕೇಂದ್ರ ಕಚೇರಿಗೆ ತಿಳಿಸಲಾಗಿದೆ. ಖಾತೆ ಬದಲಾವಣೆ, ಒಂದೇ ಆಧಾರ ಸಂಖ್ಯೆ ಜೋಡಣೆ ಇರುವ ಮತ್ತೊಂದು ಖಾತೆಗೆ ಹಣ ಸಂದಾಯ ಆಗಿದ್ದನ್ನು ಮರಳಿ ಪಡೆಯಲಾಗಿದೆ. ತಂತ್ರಾಂಶ ಸರಿಪಡಿಸಲಾಗುವುದು.
- ರಂಗಪ್ಪ ನಾಯ್ಕರ್​
ಅಂಬೇಡ್ಕರ ಅಭಿವೃದ್ಧಿ ನಿಗಮ, ಜಿಲ್ಲಾ ಅಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net