ಡಿಎಚ್‌ಒ ಕೆ.ಮೋಹನ್‌ಗೆ ಸೇವಾರತ್ನ ಪ್ರಶಸ್ತಿ: ರಾಜ್ಯಸರ್ಕಾರಿ ಮಹಿಳೆಯರ ನೌಕರ ಸಂಘದಿಂದ ಗೌರವ

Dho-Dr.Mohan_
Published on

ಮಂಡ್ಯ: ರಾಜ್ಯಸರ್ಕಾರಿ ಮಹಿಳೆಯರ ನೌಕರ ಸಂಘದಿಂದ ಕೊಡಮಾಡುವ ರಾಜ್ಯಮಟ್ಟದ ಸೇವಾರತ್ನ ಪ್ರಶಸ್ತಿಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್ ಭಾಜನರಾಗಿದ್ದಾರೆ.

ಆರೋಗ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಸೆ.12ರಂದು ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಪ್ರದಾನ ಮಾಡಲಾಗಿದೆ. ಇನ್ನು ಜಿಲ್ಲೆಯಲ್ಲಿ ವಿನೂತನ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಮೂಲಕ ಗಮನಸೆಳೆದಿದ್ದಾರೆ. ಮುಖ್ಯವಾಗಿ ದಂತ ಭಾಗ್ಯ ಯೋಜನೆಯಡಿ ಮುಗುಳ್ನಗೆಯ ಸಿಂಚನ ಕಾರ್ಯಕ್ರಮವನ್ನು ಪ್ರಾಥಮಿಕ ಆಸ್ಪತ್ರೆಯಲ್ಲಿಯೇ ಆಯೋಜಿಸಲಾಗಿತ್ತು. ಇದಕ್ಕೆಂದು ವಿಶೇಷವಾದ ವಾಹನ, ಯಂತ್ರೋಪಕರಣ ಖರೀದಿಸಲಾಗಿತ್ತು. ಅಂತೆಯೇ ಯೋಜನೆಯಡಿ ಈವರೆಗೆ ಸಾವಿರಾರೂ ಜನರು ಉಚಿತವಾಗಿ ದಂತ ತಪಾಸಣೆ ಶಿಬಿರದ ಲಾಭ ಪಡೆದುಕೊಂಡಿದ್ದಾರೆ.

ಇದಲ್ಲದೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೃದಯಕ್ಕೆ ಸಂಬಂಧಿಸಿದಂತೆ ಸಮಸ್ಯೆಯನ್ನು ತಪಾಸಣೆ ಮಾಡಿಸಿಕೊಳ್ಳಲು ನೆರವಾಗುವಂತೆ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಜಿಲ್ಲಾಧಿಕಾರಿ ಡಾ.ಕುಮಾರ ಅವರ ಮಾರ್ಗದರ್ಶನದಲ್ಲಿ ಜಾರಿಗೊಳಿಸಿದ ಹೃದಯ ವೈಶಾಲ್ಯ ಯೋಜನೆ ಜಿಲ್ಲೆಯಲ್ಲಿ ಯಶಸ್ವಿಯಾಗಿದೆ. ಖಾಸಗಿ ಸಂಸ್ಥೆಗಳ ಸಿಎಸ್‌ಆರ್ ಅನುದಾನದಲ್ಲಿ ಯಂತ್ರಗಳನ್ನು ಖರೀದಿಸಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವಿತರಿಸಲಾಗಿದೆ. ಇನ್ನು ಮುಖ್ಯವಾಗಿ ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆ ದಂಧೆ ಪ್ರಕರಣವನ್ನು ಪೊಲೀಸರ ಸಹಕಾರದೊಂದಿಗೆ ತಡೆಯುವಲ್ಲಿ ಶ್ರಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೆ.ಮೋಹನ್ ಅವರನ್ನು ಪ್ರಶಸ್ತಿಗೆ ಪರಿಗಣಿಸಲಾಗಿದೆ.

ಮಾಂಡವ್ಯ ಪ್ರಶಸ್ತಿ ಪುರಸ್ಕೃತ: ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್ ಅವರಿಗೆ ಅನನ್ಯ ಹಾರ್ಟ್ ಸಂಸ್ಥೆ ಹಾಗೂ ಸಂಗೀತ ನೃತ್ಯ ಕಲಾನಿಕೇತನ ಟ್ರಸ್ಟ್‌ನಿಂದ ನೀಡಲಾಗುವ ‘ರಾಜ್ಯಮಟ್ಟದ ಮಾಂಡವ್ಯಶ್ರೀ ಪ್ರಶಸ್ತಿ’ಗೂ ಆಯ್ಕೆಯಾಗಿದ್ದಾರೆ. ಟ್ರಸ್ಟ್‌ನಿಂದ ವೈದ್ಯಕೀಯ ಸೇವೆಗೆ ಕೊಡುವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net