

ದೊಡ್ಡಬಳ್ಳಾಪುರ: ಮಕ್ಕಳಲ್ಲಿ ಶಿಸ್ತು ಹಾಗೂ ದೇಶಪ್ರೇಮ ಬೆಳೆಸುವಲ್ಲಿ ಸೇವಾದಳದ ಪಾತ್ರ ಮಹತ್ವದ್ದಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ ಅಭಿಪ್ರಾಯಪಟ್ಟರು.
ನಗರದ ಭಗತ್ ಸಿಂಗ್ ಮೈದಾನಲ್ಲಿ ಭಾರತ ಸೇವಾದಳ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಏರ್ಪಡಿಸಿರುವ ರಾಜ್ಯ ಮಟ್ಟದ ರಾಷ್ಟ್ರೀಯ ಭಾವೈಕ್ಯತೆ ಮಕ್ಕಳ ಮೇಳ 2020 ರ ಕಾರ್ಯಕ್ರಮದ ಅಂಗವಾಗಿ ಬುಧವಾರ ರಾಷ್ಟ್ರಧ್ವಜ ವಂದನೆ ಹಾಗೂ ಪ್ರಭಾತ್ ಫೇರಿಗೆ ಚಾಲನೆ ನೀಡಿ ಮಾತನಾಡಿದರು.
ಭಾರತ ಸೇವಾದಳದ ವಿದ್ಯಾರ್ಥಿಗಳು ವಾದ್ಯಗೋಷ್ಠಿಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ದೇಶ ಭಕ್ತಿ ಘೋಷಣೆ ಕೂಗುವ ಮೂಲಕ ಪ್ರಭಾತ್ ೇರಿ ನಡೆಸಿ ಸಾರ್ವಜನಿಕರ ಗಮನ ಸೆಳೆದರು.
ಸಂಜೆ ನಡೆದ ಭಾರತ ಸೇವಾದಳ ಉತ್ತಮ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಚಿವ ಕೃಷ್ಣಬೈರೇಗೌಡ, ದೇಶದ ಪ್ರೇಮದ ಹೆಸರಲ್ಲಿ ದೇಶ ಒಡೆಯಲು ಮುಂದಾಗಿರುವವರಿಗೆ ಮಕ್ಕಳಲ್ಲಿನ ಸಹಬಾಳ್ವೆ ಪಾಠವಾಗಬೇಕಿದೆ. ಭಾವೈಕ್ಯತೆ, ದೇಶ ಪ್ರೇಮ ಸಾರುವ ಸೇವಾದಳದ ನಿಯಮವನ್ನು ಮಕ್ಕಳಲ್ಲಿ ಈ ಕಾಲಘಟ್ಟದಲ್ಲಿ ಮೈಗೂಡಿಸಲು ಕಾರ್ಯಕ್ರಮ ಆಯೋಜನೆ ಸಹಕಾರಿಯಾಗಿದೆ. ಜಾತಿ ಧರ್ಮ ಬದಿಗಿಟ್ಟು, ನಾವೆಲ್ಲರೂ ಒಂದೇ ಎನ್ನುವ ಮೂಲಕ ಮಕ್ಕಳು ಸಹಬಾಳ್ವೆ ಮೈಗೂಡಿಸಿಕೊಳ್ಳಬೇಕು ಎಂದರು.
ಈ ವೇಳೆ ಭಾರತ ಸೇವಾದಳ ಉತ್ತಮ ಶಿಕ್ಷಕರಿಗೆ ಸನ್ಮಾನ ಹಾಗೂ ಕಿರುಹೊತ್ತಗೆ ಬಿಡುಗಡೆ ಮಾಡಲಾಯಿತು.
ರಾಜ್ಯಸಭಾ ಸದಸ್ಯ ಎ.ಹನುಮಂತಯ್ಯ, ತಾಪಂ ಅಧ್ಯಕ್ಷ ಡಿ.ಸಿ.ಶಶಿಧರ್, ಜಿಲ್ಲಾ ಸಮಿತಿ ಉಪಾಧ್ಯಕ್ಷ ಬಿ.ಸಿ.ವೆಂಕಟೇಶ್, ದಳದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಕೆ.ಎನ್.ಪ್ರಕಾಶ್, ಪ್ರಚಾರ ಸಮಿತಿ ಅಧ್ಯಕ್ಷ ಜಿ.ಲಕ್ಷ್ಮೀಪತಿ, ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷ ಕೆ.ನಾಗೇಶ್, ಉಪಾಧ್ಯಕ್ಷ ಚನ್ನಕೃಷ್ಣ, ಕಾರ್ಯದರ್ಶಿ ಗಂಗಾಧರ್, ಕೇಂದ್ರ ಸಮಿತಿ ಸದಸ್ಯ ಬಿ.ಸಿ.ನಾರಾಯಣಸ್ವಾಮಿ ಇತರರು ಇದ್ದರು.