

ಶಿವಮೊಗ್ಗ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆಗಳಾದ ಪಿಎಂ ಸ್ವನಿಧಿ ಹಾಗೂ ವಿಶ್ವಕರ್ಮ ಯೋಜನೆಗಳಲ್ಲಿ ಬ್ಯಾಂಕ್‌ಗಳು ನಿರೀಕ್ಷೆಗೆ ತಕ್ಕಂತೆ ಸಾಧನೆ ತೋರಿಲ್ಲ. ಸಾಲಕ್ಕಾಗಿ ಅರ್ಜಿ ಸಲ್ಲಿಸಿದವರು ನನ್ನ ಮನೆಗೆ ಬಂದು ದೂರು ಹೇಳುವ ಪರಿಸ್ಥಿತಿಯಿದೆ ಎಂದು ಬಿ.ವೈ.ರಾಘವೇಂದ್ರ ಅಸಮಾಧಾನ ವ್ಯಕ್ತಪಡಿಸಿದರು.
ಲೀಡ್ ಬ್ಯಾಂಕ್‌ನ ಡಿಎಲ್‌ಆರ್‌ಸಿ ಹಾಗೂ ಡಿಸಿಸಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮಾಂತರ ಭಾಗದ ಕೊನೆಯ ವ್ಯಕ್ತಿಗೂ ಬ್ಯಾಂಕಿಂಗ್ ಸೌಲಭ್ಯ ಸಿಗಬೇಕು ಎಂಬ ಗುರಿ ಕೇಂದ್ರ ಸರ್ಕಾರದ್ದು. ಉದ್ಯೋಗ ಸೃಜನೆಗೆ ಒತ್ತು ನೀಡುವ ಆರ್ಥಿಕ ಯೋಜನೆಗಳಿಗೆ ಅಧಿಕಾರಿಗಳು ಹೆಚ್ಚು ಆಸಕ್ತಿ ತೋರಬೇಕು. ಕೆಲವು ಬ್ಯಾಂಕ್‌ಗಳು ಕಿಸಾನ್ ಕ್ರಿಡಿಟ್ ಕಾರ್ಡ್ ನೀಡಲೂ ಹಣ ಮೀಸಲಿರಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಏಕ ತೀರುವಳಿ ಸಾಲ ಯೋಜನೆಯಡಿ ಕೆಲ ರೈತರು ಸಾಲ ಮರುಪಾವತಿ ಮಾಡಿರುತ್ತಾರೆ. ಅವರಿಗೆ ಬ್ಯಾಂಕ್‌ಗಳು ನಿರಾಕ್ಷೇಪಣಾ ಪತ್ರ ನೀಡುವಾಗ ಅದರಲ್ಲಿ ಏಕ ತೀರುವಳಿ ಸಾಲ ಎಂದು ನಮೂದು ಮಾಡುವುದರಿಂದ ರೈತರಿಗೆ ಕಿರಿಕಿರಿಯಾಗುತ್ತಿದೆ. ಅವರಿಗೆ ಬೇರೆ ಕಡೆ ಸಾಲ ಸೌಲಭ್ಯ ಸಿಗದಂತಾಗಿದೆ. ಇದರಿಂದ ಬ್ಯಾಂಕ್‌ಗಳಿಗೆ ಆಗುವ ಲಾಭವಾದರೂ ಏನು ಎಂದು ಬಿವೈಆರ್ ಖಾರವಾಗಿ ಪ್ರಶ್ನಿಸಿದರು.