

ಮುಧೋಳ: ರಾಜ್ಯದಲ್ಲಿ ನಡೆಯುತ್ತಿರುವ 101 ಪರಿಶಿಷ್ಟ ಜಾತಿಯ ಒಳ ಮೀಸಲಾತಿ ವರ್ಗೀಕರಣದ ಜಾತಿ ಗಣತಿ ಕಾರ್ಯವು ಸರ್ವರ್ ಸಮಸ್ಯೆಯಿಂದಾಗಿ ತೀವ್ರ ಹಿನ್ನಡೆ ಅನುಭವಿಸುತ್ತಿದೆ.
ಮೇ 5 ರಿಂದ ದಿನಕ್ಕೆ ಬೆರಳೆಣಿಕೆಯಷ್ಟು ಕುಟುಂಬಗಳ ಮಾಹಿತಿಯನ್ನು ಮಾತ್ರ ಭರ್ತಿ ಮಾಡಲು ಸಾಧ್ಯವಾಗುತ್ತಿದ್ದು, ಇದೀಗ ಮೇ 9 ರಂದು ಬಿಡುಗಡೆಯಾದ ನೂತನ ಆ್ಯಪ್ 1.8 ಆವೃತ್ತಿಯಲ್ಲಿನ ಸಮಸ್ಯೆಗಳು ಪರಿಸ್ಥಿತಿಯನ್ನು ಮೊದಲಿಗಿಂತಲೂ ಕೆಟ್ಟದಾಗಿಸಿವೆ ಎಂದು ಗಣತಿದಾರರು ಅಳಲು ತೋಡಿಕೊಂಡರು.
ಮೊಬೈಲ್ ಆ್ಯಪ್ ಮೂಲಕ ಗಣತಿದಾರರು ಪರಿಶಿಷ್ಟ ಜಾತಿಯ ಕುಟುಂಬದ ಸದಸ್ಯರ ಮಾಹಿತಿ ಸಂಗ್ರಹಿಸುತ್ತಿರುವಾಗ ಪದೇಪದೆ ಸರ್ವರ್ ಕೈಕೊಡುತ್ತಿದೆ. ಇದರಿಂದಾಗಿ ಮಾಹಿತಿ ನೀಡುವವರು ಮತ್ತು ಗಣತಿದಾರರು ಗಂಟೆಗಟ್ಟಲೆ ಕಾಯುವಂತಾಗಿದೆ. ಆನ್‌ಲೈನ್‌ನಲ್ಲಿ ದತ್ತಾಂಶ ದಾಖಲಿಸಲು ಪ್ರಯತ್ನಿಸುತ್ತಿದ್ದಂತೆಯೇ ಪದೇಪದೆ ಸರ್ವರ್ ಬ್ಯುಸಿ ಎಂಬ ಸಂದೇಶ ಬರುತ್ತಿದೆ. ಈ ಕಾರಣದಿಂದ ನಿಗದಿತ ಅವಧಿಯೊಳಗೆ ಮೊದಲ ಹಂತದ ಗಣತಿ ಕಾರ್ಯವನ್ನು ಪೂರ್ಣಗೊಳಿಸುವುದು ಕಷ್ಟಸಾಧ್ಯ ಎಂದು ಹೇಳಲಾಗುತ್ತಿದೆ.
ಬೆಳಗ್ಗೆಯಿಂದ ಸಂಜೆಯವರೆಗೂ ಗಣತಿದಾರರು ಮನೆ ಮನೆಗೆ ತೆರಳಿ ಬಾಗಿಲು ತಟ್ಟಿ ಮಾಹಿತಿಯನ್ನು ಸಂಗ್ರಹಿಸಲು ಪ್ರಯತ್ನಿಸುತ್ತಿದ್ದಾರೆ. ಆದರೂ ಮೇ 5 ರಿಂದ ಇಲ್ಲಿಯವರೆಗೆ ಬೆರಳೆಣಿಕೆಯಷ್ಟು ಕುಟುಂಬಗಳ ಮಾಹಿತಿ ಮಾತ್ರ ಸಂಗ್ರಹಿಸಲು ಸಾಧ್ಯವಾಗಿದೆ ಎನ್ನುತ್ತಾರೆ ಗಣತಿದಾರರು.
ಸರ್ಕಾರ ನಿಗದಿಪಡಿಸಿದ ಮೊದಲ ಹಂತದ ಗಣತಿ ಕಾರ್ಯವನ್ನು ಪೂರ್ಣಗೊಳಿಸಲು ಗಣತಿದಾರರು ಹರಸಾಹಸ ಪಡುತ್ತಿದ್ದಾರೆ. ಜಿಲ್ಲಾ ಹಾಗೂ ತಾಲೂಕುಮಟ್ಟದ ಅಧಿಕಾರಿಗಳು ಕೂಡಲೇ ಸರ್ವರ್ ಸಮಸ್ಯೆ ಸರಿಪಡಿಸಬೇಕು ಮತ್ತು ಗಣತಿ ಕಾರ್ಯಕ್ಕೆ ಇನ್ನಷ್ಟು ಗಣತಿದಾರರನ್ನು ನಿಯೋಜಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.
ಪರಿಶಿಷ್ಟ ಜಾತಿ ಸದಸ್ಯರ ದತ್ತಾಂಶ ಮಾಹಿತಿ ಸಂಗ್ರಹಿಸಲು ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿವೆ. ಅವುಗಳನ್ನು ಕೂಡಲೇ ಸರಿಪಡಿಸಿ ಗಣತಿದಾರರಿಗೆ ಪೂರ್ಣ ಮಾಹಿತಿ ಪಡೆಯಲು ಅವಕಾಶ ಮಾಡಿಕೊಡಬೇಕು. ಗಣೇಶ ಮೇತ್ರಿ, ಸಂಚಾಲಕ, ಡಿಎಸ್‌ಎಸ್, ಬೆಳಗಾವಿ ವಿಭಾಗ, ಮುಧೋಳ