

ಬೆಂಗಳೂರು: ನಗರದ ವರ್ತುಲ ರಸ್ತೆಯ ಹೆಬ್ಬಾಳ ಜಂಕ್ಷನ್‌ನಲ್ಲಿ ಸಂಚಾರ ಸಿಕ್ಕು ಬಗೆಹರಿಸಲು ಕೈಗೆತ್ತಿಕೊಂಡಿರುವ ಮೇಲ್ಸೇತುವೆ ಕಾಮಗಾರಿಯನ್ನು ಸತತ ನಾಲ್ಕು ಬಾರಿ ಗಡುವಿನೊಳಗೆ ಪೂರ್ಣಗೊಳಿಸಲು ಗುತ್ತಿಗೆದಾರರು ಹಾಗೂ ಬಿಡಿಎ ವಿಫಲವಾಗಿದೆ.
ಕೆಂಪೇಗೌಡ ಏರ್‌ಪೋರ್ಟ್ ಸಂಪರ್ಕಿಸುವ ಪ್ರಮುಖ ಮಾರ್ಗವಾಗಿರುವ ಹೆಬ್ಬಾಳ ಮೇಲ್ಸೇತುವೆಯ ಹೆಚ್ಚುವರಿ ಪಥ ನಿರ್ಮಾಣದ ಕಾರ್ಯ ಕುಂಟುತ್ತಾ ಸಾಗಿದೆ. ಮೊದಲ ಹಂತವಾಗಿ ಕೆ.ಆರ್.ಪುರ ಲ್ಯೂಪ್ ನಿರ್ಮಿಸುವ ಕೆಲಸ ವರ್ಷ ಕಳೆದರೂ ಪೂರ್ಣಗೊಂಡಿಲ್ಲ. ವಿವಿಧ ಕಾರಣಗಳಿಂದ ಕಾಮಗಾರಿ ನಿಧಾನಗೊಂಡಿದ್ದನ್ನು ಆಧರಿಸಿ ಸ್ವತ: ಸಿಎಂ, ಡಿಸಿಎಂ ಹಾಗೂ ಮುಖ್ಯ ಕಾರ್ಯದರ್ಶಿ 3-4 ಬಾರಿ ಗಡುವು ವಿಧಿಸಿದರೂ, ಕಾಮಗಾರಿ ಮುಗಿದಿಲ್ಲ.
ಕಳೆದ ಮೇ ಅಂತ್ಯದೊಳಗೆ ಕೆ.ಆರ್.ಪುರ ಲೂಪ್ ಪೂರ್ಣಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಕೊನೆಯ ಎಚ್ಚರಿಕೆಯನ್ನು ಗುತ್ತಿಗೆದಾರರಿಗೆ ನೀಡಲಾಗಿತ್ತು. ರೈಲ್ವೆ ಹಳಿಯ ಮೇಲಿನ ಮೇಲ್ಸೇತುವೆಗೆ ಕಬ್ಬಿಣದ ಬೃಹತ್ ಗಾತ್ರ ಗರ್ಡರ್ ಅಳವಡಿಸಲು ಸಾಧ್ಯವಾಗಿರಲಿಲ್ಲ. ರೈಲ್ವೆ ಇಲಾಖೆಯಿಂದ ಅನುಮತಿ ಪಡೆಯಲು ಸಮಯ ಹಿಡಿಯಿತು ಎಂದು ಬಿಡಿಎ ಸಮಜಾಯಿಷಿ ನೀಡಿದೆ. ಆದರೆ, ಈ ಹಿಂದೆಯೇ ರೈಲ್ವೆ ಹಾಗೂ ಇತರ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿದ್ದರೂ ಬಿಡಿಎ ಎಡವಿತ್ತು.
ಜೂನ್ ತಿಂಗಳಾಂತ್ಯಕ್ಕೂ ಸಂಚಾರ ಅನುಮಾನ:
ಬೆಂಗಳೂರು ಉತ್ತರ ಭಾಗದಿಂದ ನಗರದೊಳಗೆ ಪ್ರವೇಶಿಸಲು ಹೆಬ್ಬಾಳ ಮಾರ್ಗ ಪ್ರಮುಖವಾಗಿದೆ. ಇದನ್ನಾಧರಿಸಿಯೇ ಕೆ.ಆರ್.ಪುರ ಲೂಪ್‌ಅನ್ನು ಮೊದಲು ಪೂರ್ಣಗೊಳಿಸಿ ಆ ಭಾಗದಿಂದ ನಗರಕ್ಕೆ ಬರಲು ಅವಕಾಶ ನೀಡಲು ನಿರ್ಧರಿಸಲಾಗಿತ್ತು. ದಿನದ ಎರಡು ಪಾಳಿಯಲ್ಲಿ ಕೆಲಸ ಮಾಡುತ್ತಿದ್ದರೂ, ಕೆಲಸ ಮಾತ್ರ ನಿರೀಕ್ಷೆಯಂತೆ ಸಾಗುತ್ತಿಲ್ಲ. ಹಾಲಿ ಕಾಮಗಾರಿಯ ವೇಗ ಗಮನಿಸಿದೆ ಈ ತಿಂಗಳಾಂತ್ಯಕ್ಕೂ ಕೆ.ಆರ್.ಪುರ ಲೂಪ್ ಕಾರ್ಯ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಇದರಿಂದ ಸವಾರರು ಇನ್ನಷ್ಟು ದಿನ ಸಮಸ್ಯೆಯಲ್ಲೇ ಸಂಚರಿಸಬೇಕಿದೆ ಎಂಬ ಆಕ್ಷೇಪ ವ್ಯಕ್ತವಾಗಿದೆ.
ಜುಲೈನಲ್ಲಿ ಹೊಸ ಪಥಕ್ಕೆ ಕಾಮಗಾರಿ:
ಕೆ.ಆರ್.ಪುರ ಲೂಪ್‌ನಲ್ಲಿ ವಾಹನಗಳ ಓಡಾಟಕ್ಕೆ ಅವಕಾಶ ಕಲ್ಪಿಸಿದ ಬಳಿಕ ಎಸ್ಟೀಮ್ ಮಾಲ್ ಕಡೆಯಿಂದ ನಗರಕ್ಕೆ ನೇರ ಪ್ರವೇಶ ಕಲ್ಪಿಸಲು ಹೊಸದಾಗಿ 2 ಪಥದ ಮೇಲ್ಸೇತುವೆ ನಿರ್ಮಿಸಲಾಗುತ್ತದೆ. ಈ ಕಾರ್ಯವನ್ನು ಕಳೆದ ಜನವರಿಯಿಂದ ಆರಂಭಿಸಬೇಕಿದ್ದರೂ, ಕೆ.ಆರ್.ಪುರ ಲೂಪ್ ಕಾಮಗಾರಿ ಅಪೂರ್ಣಗೊಂಡಿದ್ದರೂ ಡೆಡ್‌ಲೈನ್ ವಿಸ್ತರಿಸಲಾಗಿತ್ತು. ಹಾಲಿ ಮುಖ್ಯ ಕ್ಯಾರೇಜ್‌ನಲ್ಲೇ ವಾಹನಗಳು ಸಾಗುತ್ತಿದ್ದು, ನೆಲಮಟ್ಟದಲ್ಲಿನ ರಸ್ತೆಯಲ್ಲಿ ಪಿಲ್ಲರ್ ಅಗೆತ ಇತ್ಯಾದಿ ಕೆಲಸ ಇನ್ನಷ್ಟೇ ಆಗಬೇಕಿದೆ. ಈ ಕಾರ್ಯವನ್ನು ಮುಂದಿನ ಜನವರಿ ವೇಳೆಗೆ ಸಿದ್ಧಪಡಿಸಲು ಬಿಡಿಎ ಗಮನ ಹರಿಸಿದೆ. ಆದರೆ, ಭಾರೀ ಸಂಚಾರ ಸಮಸ್ಯೆ ಮಧ್ಯೆಯೇ ಕಾಮಗಾರಿ ಕೈಗೊಳ್ಳಬೇಕಿರುವುದರಿಂದ ಹೆಚ್ಚುವರಿ ಪಥ ನಿರ್ಮಾಣ ವಿಳಂಬವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.