ಹೊಳೆನರಸೀಪುರ ತಾಲೂಕಿನಲ್ಲಿ ಸ್ವಚ್ಛ ಭಾರತ್ ಮಿಷನ್‌ಗೆ ಹಿನ್ನಡೆ

ಹೊಳೆನರಸೀಪುರ ತಾಲೂಕಿನ ದೊಡ್ಡಕಾಡನೂರು ಗ್ರಾಮ ಪಂಚಾಯಿತಿಯಲ್ಲಿ ಘನ ತ್ಯಾಜ್ಯ ಘಟಕದ ಕಾಮಗಾರಿ ಅರ್ಧಕ್ಕೆ ನಿಂತಿರುವುದು.
ಹೊಳೆನರಸೀಪುರ ತಾಲೂಕಿನ ದೊಡ್ಡಕಾಡನೂರು ಗ್ರಾಮ ಪಂಚಾಯಿತಿಯಲ್ಲಿ ಘನ ತ್ಯಾಜ್ಯ ಘಟಕದ ಕಾಮಗಾರಿ ಅರ್ಧಕ್ಕೆ ನಿಂತಿರುವುದು.
Published on

ಹೊಳೆನರಸೀಪುರ: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ನಿರ್ವಹಣೆ ಮಾಡಲೆಂದು ಜಾರಿಗೆ ತರಲಾದ ಗ್ರಾಮೀಣ ಸ್ವಚ್ಛ ಭಾರತ್ ಮಿಷನ್ ಯೋಜನೆ ಗುರಿ ತಲುಪುವಲ್ಲಿ ವಿಫಲವಾಗಿದೆ.

2019-20 ನೇ ಸಾಲಿನಲ್ಲಿ ಹೊಸ ರೂಪದೊಂದಿಗೆ ಸ್ವಚ್ಛ ಭಾರತ್ ಮಿಷನ್ ಅಸ್ತಿತ್ವಕ್ಕೆ ಬಂತು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ನಿರ್ವಹಣೆ ಮಾಡಲು ಘಟಕ ನಿರ್ಮಾಣಕ್ಕೆ ಮಂಜೂರಾತಿ ನೀಡುವುದರ ಜತೆಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸ್ವಚ್ಛತಾ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಕೇಂದ್ರದ ಪ್ರೋತ್ಸಾಹ ಅನುದಾನವನ್ನೂ ನೀಡಲಾಯಿತು. ತಾಲೂಕಿನ 26 ಗ್ರಾಮ ಪಂಚಾಯಿತಿಗಳಲ್ಲಿ ಯೋಜನೆ ರೂಪಿಸಿ ಕ್ರಮ ವಹಿಸುವ ಸಲುವಾಗಿ ನರೇಗಾ ಯೋಜನೆಯಡಿ ಅನುದಾನ ಒದಗಿಸಿ ಘನತ್ಯಾಜ್ಯ ಘಟಕ ನಿರ್ಮಾಣಕ್ಕೆ ಒತ್ತು ನೀಡಲಾಯಿತು.

ತಾಲೂಕಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ನಿವೇಶನವನ್ನು ಗುರುತು ಮಾಡಿದ, ಬಾಗಿವಾಳು, ಬೀದರಕ್ಕ, ದೊಡ್ಡಬ್ಯಾಗತವಳ್ಳಿ, ದೊಡ್ಡ ಕುಂಚೆ, ಹಳ್ಳಿ ಮೈಸೂರು, ಹರಿಹರಪುರ, ಕಟ್ಟೆ ಬೆಳಗುಲಿ, ಕೆರಗೋಡು, ಕ್ಯಾತನಹಳ್ಳಿ, ಒಡನಹಳ್ಳಿ, ಶ್ರವಣೂರು, ತಾತನಹಳ್ಳಿ ಒಳಗೊಂಡಂತೆ ಒಟ್ಟು 12 ಗ್ರಾಮ ಪಂಚಾಯಿತಿಗಳಲ್ಲಿ ಘನ ತ್ಯಾಜ್ಯ ಘಟಕವನ್ನು ನಿರ್ಮಿಸಲಾಗಿದೆ. ಉಳಿದ 14 ಗ್ರಾಮ ಪಂಚಾಯಿತಿಗಳಲ್ಲಿ ನಿರ್ಮಾಣವಾಗಿಲ್ಲ. ದೊಡ್ಡಕಾಡನೂರು ಮತ್ತು ಮಳಲಿ ಗ್ರಾಮ ಪಂಚಾಯಿತಿಗಳಲ್ಲಿ ಘಟಕದ ಕಾಮಗಾರಿ ಅಪೂರ್ಣವಾಗಿದೆ. ಕಾಮಗಾರಿ ಪೂರ್ಣಗೊಳಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಇದು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ.

ಆನೆ ಕನ್ನಂಬಾಡಿ, ಐಚನಹಳ್ಳಿ, ಮೂಡಲ ಹಿಪ್ಪೆ , ಪಡುವಲ ಹಿಪ್ಪೆ ಗ್ರಾಮ ಪಂಚಾಯಿತಿಗಳಲ್ಲಿ ಘನ ತ್ಯಾಜ್ಯ ಘಟಕ ನಿರ್ಮಾಣಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. ದೊಡ್ಡಳ್ಳಿ, ಹಳೆಕೋಟೆ, ಹಂಗರಹಳ್ಳಿ, ಕೋಡಿಹಳ್ಳಿ, ಮಲ್ಲಪ್ಪನಹಳ್ಳಿ, ನಗರನಹಳ್ಳಿ, ನಿಡುವಣಿ, ಸಂಕನಹಳ್ಳಿ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ನಿವೇಶನದ ತೊಂದರೆಗಳಿಂದ ಘಟಕವನ್ನೇ ನಿರ್ಮಿಸಿಲ್ಲ. ಯೋಜನೆ ಅನುಷ್ಠಾನವಾಗಿ 5 ವರ್ಷ ಕಳೆದಿದ್ದು, ಸಂಬಂಧಪಟ್ಟವರ ಇಚ್ಛಾಶಕ್ತಿ ಕೊರತೆಯಿಂದ ಯೋಜನೆಗೆ ಹಿನ್ನಡೆ ಉಂಟಾಗಿದೆ.

ಘನ ತ್ಯಾಜ್ಯ ಘಟಕ ನಿರ್ಮಿಸುವ ಮೊದಲೇ 26 ಪಂಚಾಯಿತಿಗಳಿಗೆ 2020 ರಲ್ಲೇ ಹೊಸ ಲಗೇಜ್ ಆಟೋಗಳನ್ನು ಒಣಕಸ ಸಂಗ್ರಹ ಮಾಡುವುದಕ್ಕಾಗಿ ಒದಗಿಸಲಾಯಿತು. ಚಾಲನೆ ಮಾಡಲು ಮಹಿಳಾ ಚಾಲಕರನ್ನೂ ನೇಮಿಸಿಕೊಳ್ಳಲಾಯಿತು. ಆದರೀಗ ಗ್ರಾಮ ಪಂಚಾಯಿತಿಗಳ ಮುಂದೆ ತುಕ್ಕು ಹಿಡಿಯುತ್ತ ಲಗೇಜ್ ಆಟೋಗಳು ನಿಂತಿವೆ.

ಗ್ರಾಮೀಣ ಸ್ವಚ್ಛತೆಗೆ ವಿಶೇಷ ಒತ್ತು ನೀಡುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 2005ರಿಂದಲೂ ಒಂದಲ್ಲ ಒಂದು ರೀತಿಯ ಯೋಜನೆ ರೂಪಿಸುತ್ತಿದೆ. ನಿರ್ಮಲಾ ಭಾರತ್ ಅಭಿಯಾನ ಕಾರ್ಯಕ್ರಮವನ್ನು ಮರು ನಾಮಕರಣ ಮಾಡಿ ಹೊಸ ರೂಪದೊಂದಿಗೆ ಸ್ವಚ್ಛ ಭಾರತ್ ಮಿಷನ್ ಎಂದು ಮರು ನಾಮಕರಣ ಮಾಡಿ ಗ್ರಾಮೀಣ ಭಾಗದಲ್ಲಿ ಅನುಷ್ಠಾನಗೊಳಿಸಲಾಯಿತು. ಘನ ತ್ಯಾಜ್ಯ ಘಟಕ ನಿರ್ಮಾಣ, ಲಗೇಜ್ ಆಟೋ ಸೌಲಭ್ಯಗಳನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಒದಗಿಸಿ ಗ್ರಾಮ ಪಂಚಾಯಿತಿ ಮಟ್ಟದಲ್ಲೇ ಮಹಿಳಾ ಒಕ್ಕೂಟಗಳಿಗೆ ಇದರ ಜವಾಬ್ದಾರಿ ನೀಡಲಾಯಿತು.

ಪ್ರತಿ ಗ್ರಾಮದಲ್ಲಿ ಒಣಕಸವನ್ನು ಸಂಗ್ರಹಿಸಿದ ಬಳಿಕ ಅದನ್ನು ಘನ ತ್ಯಾಜ್ಯ ಘಟಕದಲ್ಲಿ ಬೇರ್ಪಡಿಸುವ ಕೆಲಸವನ್ನು ಮಹಿಳೆಯರಿಗೆ ನೀಡಬೇಕೆಂಬುದು ಈ ಯೋಜನೆ ಹಿಂದಿನ ಉದ್ದೇಶ. ಒಂದು ವರ್ಷದವರೆಗೆ ಗ್ರಾಮ ಪಂಚಾಯಿತಿಗಳು ಮಹಿಳಾ ಒಕ್ಕೂಟಗಳಿಗೆ ಬೆಂಬಲವಾಗಿ ನಿಂತು ಸಹಕರಿಸಬೇಕೆಂಬುದು ಯೋಜನೆಯ ನಿಯಮ. ಆದರೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಯೋಜನೆ ಅನುಷ್ಠಾನಕ್ಕೆ ಗ್ರಾಮ ಪಂಚಾಯಿತಿ ಯಾವುದೇ ಕ್ರಮ ಕೈಗೊಳ್ಳದಿರುವುದು ಗ್ರಾಮೀಣ ಭಾಗದಲ್ಲಿ ಸ್ವಚ್ಛತೆಗೆ ಹಿನ್ನಡೆ ಉಂಟಾಗಿದೆ.

ಪ್ರಸ್ತುತ ಗ್ರಾಮ ಪಂಚಾಯಿತಿಯ ಆಡಳಿತ ವ್ಯವಸ್ಥೆ ನೋಡಿದರೆ ಈ ಯೋಜನೆ ಅನುಷ್ಠಾನಗೊಳ್ಳುವುದು ಅನುಮಾನವಾಗಿದೆ. ತಾಲೂಕಿನ 12 ಗ್ರಾಮ ಪಂಚಾಯಿತಿಗಳಲ್ಲಿ ಘನ ತ್ಯಾಜ್ಯ ಘಟಕ ನಿರ್ಮಾಣವಾಗಿದೆಯಾದರೂ ಕಾರ್ಯ ಆರಂಭವಾಗಿಲ್ಲ. ಅಲ್ಲದೆ ಆಟೋ ಒದಗಿಸಲಾಗಿದೆಯಾದರೂ ಸ್ವಚ್ಛಗೊಳಿಸುವವರು ಹಾಗೂ ಸಿಬ್ಬಂದಿ ರಕ್ಷಣೆಗೆ ಅಗತ್ಯ ಸೌಲಭ್ಯ ಒದಗಿಸುವಲ್ಲಿ ಗ್ರಾಮ ಪಂಚಾಯಿತಿಗಳು ವಿಫಲವಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಸರ್ಕಾರ ಎಲ್ಲ ಸೌಲಭ್ಯ ನೀಡಿದ್ದರೂ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು, ಅಧ್ಯಕ್ಷರು ಮತ್ತು ಸದಸ್ಯರು ಆಸಕ್ತಿಯಿಂದ ಯೋಜನೆ ಜಾರಿಗೊಳಿಸುವಲ್ಲಿ ಮುಂದೆ ಬಾರದಿರುವುದರಿಂದ ಯೋಜನೆ ಹಳ್ಳ ಹಿಡಿಯಲು ಕಾರಣವಾಗಿದೆ.

ತಾಲೂಕಿನ ಕೆಲವು ಗ್ರಾಮ ಪಂಚಾಯಿತಿ ವೃತ್ತಗಳಲ್ಲಿ ಸಿಬ್ಬಂದಿಯೇ ಒಣಹಸಿ ಕಸ ಸಂಗ್ರಹಿಸಿ ಘನ ತ್ಯಾಜ್ಯ ಘಟಕಕ್ಕೆ ಒಯ್ಯುತ್ತಿದ್ದಾರೆ. ಘಟಕದಲ್ಲಿ ಕಸವನ್ನು ಬೇರ್ಪಡಿಸುವ ಕೆಲಸ ನಿರ್ವಹಣೆ ಆಗುತ್ತಿಲ್ಲ. ಸರ್ಕಾರ ಮಹಿಳಾ ಸಬಲೀಕರಣಕ್ಕಾಗಿ ಮಹಿಳಾ ಸ್ವಸಹಾಯ ಸಂಘಗಳನ್ನೇ ನೇಮಿಸಿಕೊಳ್ಳುವಂತೆ ಗ್ರಾಮ ಪಂಚಾಯಿತಿಗಳಿಗೆ ಸುತ್ತೋಲೆ ಹೊರಡಿಸಿದೆಯಾದರೂ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಿಳಾ ಒಕ್ಕೂಟಗಳು ಈ ಕೆಲಸಕ್ಕೆ ಮುಂದೆ ಬರುತ್ತಿಲ್ಲ.

ಒಣ ಕಸ ಸಂಗ್ರಹಿಸಲು ನಮ್ಮೂರಿಗೆ ಯಾರೂ ಬಂದಿಲ್ಲ. ಘನ ತ್ಯಾಜ್ಯ ಘಟಕವೂ ನಿರ್ಮಾಣವಾಗಿಲ್ಲ. ವಾಹನ ಇದ್ದರೂ ಸ್ವಚ್ಛತೆಗೆ ಆದ್ಯತೆ ನೀಡಿಲ್ಲ. ಪಂಚಾಯಿತಿಯಲ್ಲಿ ಕಸ ನಿರ್ವಹಣೆ ಉತ್ತಮವಾಗಿ ನಿರ್ವಹಣೆ ಆಗುತ್ತಿಲ್ಲ. ಪಂಚಾಯಿತಿ ಮಟ್ಟದಲ್ಲಿ ಕಸ ಸಂಗ್ರಹಿಸಿ ಬೇರ್ಪಡಿಸಿ ನಿರ್ವಹಣೆ ಮಾಡಲು ಪ್ರತ್ಯೇಕ ಸಿಬ್ಬಂದಿ ನೇಮಿಸಿಕೊಳ್ಳಬೇಕು. ತಮ್ಮ ಮನೆಯ ಕೆಲಸಗಳ ಒತ್ತಡದಿಂದ ಮಹಿಳಾ ಒಕ್ಕೂಟಗಳು ಮುಂದೆ ಬರುತ್ತಿಲ್ಲ. ಘನ ತ್ಯಾಜ್ಯ ಘಟಕವನ್ನು ನಿರ್ವಹಣೆ ಮಾಡಲು ಮಹಿಳಾ ಒಕ್ಕೂಟ ಮುಂದೆ ಬಾರದ ಕಾರಣ ಸ್ವಚ್ಛ ಭಾರತ್ ಮಿಷನ್ ಯೋಜನೆಗೆ ಹಿನ್ನಡೆಯಾಗಿದೆ.

ಎಂ.ಜೆ.ಕುಮಾರ್ ಮೂಡಲಕೊಪ್ಪಲು ಗ್ರಾಮಸ್ಥ

ತಾಲೂಕಿನ 26 ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಛತಾ ಕಾರ್ಯ ಸಕ್ರಿಯವಾಗಿಲ್ಲ. ಕೆಲವು ಕಾರಣಗಳಿಂದ ಹಿನ್ನಡೆಯಾಗಿದೆ. ಗ್ರಾಪಂ ಮಟ್ಟದಲ್ಲಿ ಸಭೆ ನಡೆಸಿ ಮಹಿಳಾ ಒಕ್ಕೂಟಗಳಿಗೆ ತಿಳಿವಳಿಕೆ ನೀಡಲಾಗುವುದು. ಸ್ವಚ್ಛತೆಗೆ ಪ್ರಥಮ ಆದ್ಯತೆ ನೀಡುವ ಮೂಲಕ ಪ್ರತಿ ದಿನ ನಿಗಾ ವಹಿಸಿ ನಿರ್ವಹಣೆ ಮಾಡಬೇಕು. ಸ್ಥಳಾವಕಾಶದ ಸಮಸ್ಯೆ ಇರುವ ಗ್ರಾಪಂಗಳನ್ನು ಸಮೀಪದ ಗ್ರಾಪಂನ ಘನ ತ್ಯಾಜ್ಯ ಘಟಕಕ್ಕೆ ಸೇರ್ಪಡೆ ಮಾಡಿ ನಿರ್ವಹಣೆ ಮಾಡಲಾಗುವುದು. ಗ್ರಾಮೀಣ ಸ್ವಚ್ಛ ಭಾರತ್ ಮಿಷನ್ ಅನುಷ್ಠಾನಕ್ಕಾಗಿ ಕ್ರಮ ಕೈಗೊಳ್ಳಲಾಗುವುದು.

ಜಿ.ಮುನಿರಾಜು, ಕಾರ್ಯ ನಿರ್ವಾಹಕ ಅಧಿಕಾರಿ, ತಾಲೂಕು ಪಂಚಾಯಿತಿ, ಹೊಳೆನರಸೀಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net