ರಂಗಿಕೆರೆ ಅಭಿವೃದ್ಧಿಗೆ ಹಿನ್ನಡೆ!: ಗ್ರಾಪಂ ಹೂಳೆತ್ತಿದ್ದರೂ ನಿರರ್ಥಕ ಬದಿಗೆ ಕಲ್ಲು ಕಟ್ಟಿದರಷ್ಟೇ ಫಲ

New Project (2)
Published on

ಸಂದೀಪ್ ಸಾಲ್ಯಾನ್ ಬಂಟ್ವಾಳ

ಒಂದು ಕಾಲದಲ್ಲಿ ಊರಿನ ಜನರಿಗೆ ಕೃಷಿ ಮತ್ತಿತರ ಕಾರ್ಯಗಳಿಗೆ ನೀರಿನ ಆಸರೆಯಾಗಿದ್ದ ಕೆರೆ ಈಗ ಹೂಳು ತುಂಬಿಕೊಂಡು ನಿರುಪಯುಕ್ತವಾಗಿದೆ. ಕೆರೆಯನ್ನು ದುರಸ್ತಿಗೊಳಿಸಿ ಮತ್ತೆ ಜನೋಪಯೋಗಕ್ಕೆ ಮುಕ್ತಗೊಳಿಸುವ ಉದ್ದೇಶದಿಂದ ಕೈಗೊಂಡ ಅಭಿವೃದ್ಧಿ ಕೆಲಸವೂ ಪೂರ್ಣ ರೀತಿಯಲ್ಲಿ ಸಾಗದೆ ಉಳಿದಿದೆ. ಇದು ಪುದು ಗ್ರಾಮದ ತೇವು ಎಂಬಲ್ಲಿರುವ ಫರಂಗಿ ಕೆರೆಯ ಸ್ಥಿತಿಗತಿ. ಫರಂಗಿ ಕೆರೆಯು ಸುತ್ತಮುತ್ತಲಿನ ಕೃಷಿ ಭೂಮಿಗೆ ನೀರುಣಿಸುತ್ತಿದ್ದ ಪ್ರಧಾನ ಜಲಮೂಲವಾಗಿತ್ತು. 40 ಸೆಂಟ್ಸ್ ವಿಸ್ತೀರ್ಣದಲ್ಲಿ ಈ ಕೆರೆ ವಿಸ್ತರಿಸಿಕೊಂಡಿದೆ. ಕಾಲಕ್ರಮೇಣ ಕೆರೆ ನಿರ್ವಹಣೆ ಇಲ್ಲದೆ ಕೆರೆಯ ತುಂಬೆಲ್ಲಾ ಹೂಳು ತುಂಬಿಕೊಂಡು ನೀರಿನ ಆಶ್ರಯವಾಗಿದ್ದ ಕೆರೆ ಮೈದಾನದಂತಾಗಿತ್ತು. ತೇವು ಭಾಗದ ಹಲವಾರು ಕೃಷಿಕರ ಗದ್ದೆಗೆ ಇದೇ ಕೆರೆಯ ನೀರು ಬಳಕೆಯಾಗುತ್ತಿತ್ತು. ಇಲ್ಲಿ ರೈತರೇ ಕಟ್ಟಗಳನ್ನು ನಿರ್ಮಿಸಿ ಕೆರೆಯನ್ನು ನಿರ್ವಹಣೆ ಮಾಡಿಕೊಂಡು ಬರುತ್ತಿದ್ದರು. ಪ್ರತಿವರ್ಷ ಸಾಮಾನ್ಯವಾಗಿ ಫೆಬ್ರವರಿ ತಿಂಗಳವರೆಗೆ ಉತ್ತಮ ನೀರಿರುತ್ತಿತ್ತು.

ಹೆಸರಿನ ಬಗ್ಗೆ ಸ್ಪಷ್ಟತೆ ಇಲ್ಲ!

ತೇವುನಲ್ಲಿರುವ ಈ ಕೆರೆಗೆ ಫರಂಗಿ ಕೆರೆ ಎನ್ನುವ ಹೆಸರಿದೆ. ಪುದು ಗ್ರಾಮದ ಮುಖ್ಯ ಪೇಟೆ ಫರಂಗಿಪೇಟೆಯ ಬಳಿ ಈ ಕೆರೆ ಇರುವ ಕಾರಣ ಈ ಹೆಸರು ಬಂತೇ? ಅಥವಾ ಬ್ರಿಟಿಷರನ್ನು ಫರಂಗಿ ಎಂದು ಕರೆಯಲಾಗುತ್ತಿದ್ದು, ಅವರಿಗೂ ಈ ಕೆರೆಗೂ ಏನಾದರೂ ಸಂಬಂಧ ಇದ್ದು, ಈ ಹೆಸರು ನೀಡಲಾಯಿತೆ? ಎನ್ನುವ ಸ್ಪಷ್ಟತೆ ಇಲ್ಲ. ಆದರೂ ಸ್ಥಳೀಯರಿಂದ ಹಲವು ವರ್ಷಗಳಿಂದ ಈ ಕೆರೆ ಫರಂಗಿ ಕೆರೆ ಎಂದು ಕರೆಯಲ್ಪಡುತ್ತಿದೆ.

ಪುನಶ್ಚೇತನ

ಕಳೆದ ಮೂರು ವರ್ಷಗಳ ಹಿಂದೆ ಕೆರೆಯ ಅಭಿವೃದ್ಧಿಯ ದೃಷ್ಟಿಯಿಂದ ನರೇಗಾ ಯೋಜನೆ ಮೂಲಕ ಒಂದಷ್ಟು ಕಾಮಗಾರಿ ನಡೆದಿತ್ತು. ಅಮೃತ ಸರೋವರ ಕೆರೆ ಪುನಶ್ಚೇತನ ಯೋಜನೆಯಲ್ಲಿ ಸುಮಾರು 3.95 ಲಕ್ಷ ರೂ. ಯೋಜನೆಯಲ್ಲಿ 245 ಮಾನವ ದಿನಗಳ ಕೂಲಿಯಲ್ಲಿ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗಿತ್ತು. ಕೆರೆಯ ತಳ ಭಾಗದಲ್ಲಿ ಕಲ್ಲುಗಳು ಇರುವುದರಿಂದ ಮಾನವ ಕೂಲಿಯಿಂದ ಅದನ್ನು ತೆರವು ಮಾಡುವುದು ಅಸಾಧ್ಯವಾಗಿ ಅಭಿವೃದ್ಧಿ ಅರ್ಧಕ್ಕೆ ನಿಂತಿದೆ. ಪುದು ಗ್ರಾಪಂನಿಂದ 15ನೇ ಹಣಕಾಸು ಯೋಜನೆಯಲ್ಲಿ 1 ಲಕ್ಷ ರೂ. ಅಭಿವೃದ್ಧಿ ಮೀಸಲಿರಿಸಲಾಗಿತ್ತು. ಪ್ರಸ್ತುತ ಪಂಚಾಯಿತಿ ಕೆರೆಯ ಹೂಳು ತೆಗೆಯುವ ಕಾರ್ಯ ನಡೆಸಿದ್ದರೂ ಸಂಪೂರ್ಣವಾಗಿ ಕೆರೆಯನ್ನು ಅಭಿವೃದ್ಧಿಪಡಿಸುವ ಪ್ರಯತ್ನ ನಡೆದಿತ್ತು. ಕೆರೆಯ ಸುತ್ತಲೂ ಕಲ್ಲು ಕಟ್ಟುವ ಕಾರ್ಯ ಇನ್ನಷ್ಟೇ ನಡೆಯಬೇಕಿದೆ. ಕಲ್ಲು ಕಟ್ಟಿದರೆ ಮಾತ್ರ ಕೆರೆ ಸುಸ್ಥಿತಿಯಲ್ಲಿರಲು ಸಾಧ್ಯ. ಇಲ್ಲದೇ ಇದ್ದರೆ ಮತ್ತೆ ಹಿಂದಿನಂತೆಯೇ ಹೂಳು ತುಂಬಿಕೊಳ್ಳುತ್ತದೆ.

ಕೆರೆಯನ್ನು ಅಭಿವೃದ್ಧಿ ಮಾಡುವ ದೃಷ್ಟಿಯಿಂದ ಪಂಚಾಯಿತಿ ಅನುದಾನ ಮೀಸಲಿರಿಸಿ ಪ್ರಸ್ತುತ ಹೂಳು ತೆಗೆಯುವ ಕಾರ್ಯವನ್ನು ಆರಂಭಿಸಲಾಗಿದೆ. ಆದರೆ ಸುತ್ತಲೂ ಕಲ್ಲು ಕಟ್ಟುವ ಕಾರ್ಯ ನಡೆದಿಲ್ಲ. ಅದಕ್ಕೆ ಸಂಬಂಧಪಟ್ಟ ಇಂಜಿನಿಯರ್ ರಜೆ (ಲಾಂಗ್ ಲೀವ್)ಯಲ್ಲಿ ಹೋಗಿರುವುದರಿಂದ ಅದು ಬಾಕಿಯಾಗಿದ್ದು, ಮುಂದೆ ಬೇರೆ ಇಂಜಿನಿಯರ್ ಮೂಲಕ ನಕಾಶೆ ಸಿದ್ಧಪಡಿಸಿಕೊಂಡು ಅದರ ಕಾಮಗಾರಿಯನ್ನು ಮುಂದುವರಿಸಬೇಕಿದೆ. ಹರೀಶ್ ಕೆ.ಎ ಪುದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net