

ಸಿದ್ದಾಪುರ: ಜೂನ್ ತಿಂಗಳು ಆರಂಭಗೊಂಡು ಎಂಟು ದಿನ ಕಳೆದರೂ ಮುಂಗಾರು ಮಳೆ ಬಾರದೇ ಇರುವುದರಿಂದ ಕೃಷಿ ಚಟುವಟಿಕೆಗಳು ಸ್ಥಬ್ದಗೊಂಡಿವೆ. ಮುಂಗಾರು ಮಳೆ ನಿರೀಕ್ಷೆಯಲ್ಲಿದ್ದ ರೈತರು ನಿರಾಸೆಗೊಂಡಿದ್ದಾರೆ.
ಪ್ರತಿವರ್ಷ ಮೇ ಕೊನೆಯ ವಾರದಲ್ಲಿ ಹಾಗೂ ಜೂನ್ ತಿಂಗಳ ಆರಂಭದಲ್ಲಿ ಬೀಳುತ್ತಿದ್ದ ಮುಂಗಾರು ಮಳೆ ರೈತರನ್ನು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುತ್ತಿತ್ತು. ಕಳೆದ ವರ್ಷದ ಮೇ ಅಂತ್ಯದಲ್ಲಿ 261 ಮಿ.ಮೀ. ಮಳೆ ಬಿದ್ದು ದಾಖಲೆಯಾಗಿತ್ತು. ಆದರೆ, ಈ ವರ್ಷ ಮೇ ಅಂತ್ಯದವರೆಗೆ ಕೇವಲ 45 ಮಿ.ಮೀ. ಮಳೆ ಬಿದ್ದಿದೆ.
ತಾಲೂಕಿನಲ್ಲಿ 5560 ಹೆಕ್ಟೇರ್‌ನಷ್ಟು ಭತ್ತದ ಕ್ಷೇತ್ರ ಇದೆ. ಸಾಮಾನ್ಯವಾಗಿ ಪ್ರತಿವರ್ಷ 250 ರಿಂದ 300 ಹೆಕ್ಟೇರ್‌ನಲ್ಲಿ ಭತ್ತ ಬಿತ್ತನೆ ಮಾಡುತ್ತಿದ್ದರು. ಆದರೆ, ಈ ವರ್ಷ ಹದ ಮಳೆಯೇ ಈವರೆಗೂ ಬೀಳದೇ ಇರುವುದರಿಂದ ಬಿತ್ತನೆ ಮಾಡಿಲ್ಲ. ಅಲ್ಲದೆ, ಬಿರು ಬಿಸಿಲಿನ ತಾಪಕ್ಕೆ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದಕ್ಕೂ ಆಗದಂತಾಗಿದೆ.
ಮುಂಗಾರು ಮಳೆ ಕೊರತೆ ಮಧ್ಯೆಯೂ ಕೆಲ ರೈತರು ತಮ್ಮ ಹೊಲ-ಗದ್ದೆಗಳಿಗೆ ದಡ್ಡಿ ಗೊಬ್ಬರವನ್ನು ಹಾಕುವುದಕ್ಕೆ ಮುಂದಾಗಿದ್ದಾರೆ. ಮಳೆ ಬಿದ್ದ ತಕ್ಷಣ ಕೃಷಿ ಕಾರ್ಯದಲ್ಲಿ ತೊಡಗಿಕೊಳ್ಳುವುದಕ್ಕೆ ಅನುಕೂಲವಾಗುತ್ತದೆ. ಆದರೆ, ಈ ವರ್ಷ ಮಳೆಯೇ ಬೀಳದಿರುವುದರಿಂದ ಕೃಷಿ ಚಟುವಟಿಕೆ ಅಷ್ಟಾಗಿ ಕಂಡುಬರುತ್ತಿಲ್ಲ. ಮಳೆ ಕೊರೆಯಿಂದಾಗಿ ಕುಡಿಯುವ ನೀರಿನ ತುಟಾಗ್ರತೆ ಉಂಟಾಗಿದೆ.
ಕೃಷಿ ಇಲಾಖೆಯಲ್ಲಿ ಅಭಿಲಾಷ, ಇಂಟಾನ್, 1001, 1010, ಆರ್‌ಎನ್‌ಆರ್ ಭತ್ತ ಹಾಗೂ ಹೈಬ್ರೀಡ್ ತಳಿಯಾದ ಟಿಎಸಿ ಭತ್ತದ ಬೀಜವೂ ಲಭ್ಯ ಇದೆ.
ಮುಂಗಾರು ಮಳೆಗಾಗಿ ನಿತ್ಯ ನೋಡುತ್ತಿದ್ದೇವೆ. ಈಗಾಗಲೇ ಗದ್ದೆಗಳಿಗೆ ದಡ್ಡಿ ಗೊಬ್ಬರ ಹಾಕಲಾ ಗಿದೆ. ಮಳೆ ಬಿದ್ದರೆ ಮಾತ್ರ ಕೃಷಿಚಟುವಟಿಕೆಗೆ ಅನುಕೂಲವಾಗುತ್ತದೆ. ನಿತ್ಯ ಮಳೆಯ ವಾತಾವರಣ ಕಂಡುಬರುತ್ತದೆಯೇ ಹೊರತು ಮಳೆ ಮಾತ್ರ ಬರುತ್ತಿಲ್ಲ. ಕೆರಿಯಪ್ಪ ಚೌಡಾ ನಾಯ್ಕ, ಹಸ್ವಂತೆ ರೈತ ಹದ ಮಳೆ ಬೀಳದೇ ಇರುವುದರಿಂದ ಈ ವರ್ಷ ಬಿತ್ತನೆ ಇನ್ನೂ ಆಗಿಲ್ಲ. ಇನ್ನು ಹದ ಮಳೆ ಬಿದ್ದರೂ ಬಿತ್ತನೆಗೆ ಅಷ್ಟು ಅನುಕೂಲ ಅಲ್ಲ. ರೈತರು ಭತ್ತದ ಬೀಜ ತೆಗೆದುಕೊಂಡು ಹೋಗುತ್ತಿದ್ದಾರೆ. ಯಾವುದಕ್ಕೂ ಮಳೆ ಬೀಳದಿದ್ದರೆ ಕೃಷಿ ಚಟುವಟಿಕೆಗೆ ಹಿನ್ನಡೆ ಆಗುತ್ತದೆ.ಪ್ರಶಾಂತ ಜಿ.ಎಸ್. ಕೃಷಿ ಅಧಿಕಾರಿ