ವಿಶ್ವಕ್ಕೆ ಬುಡಕಟ್ಟು ಸಂಸ್ಕೃತಿ ಪಸರಿಸಲು ಸಜ್ಜು

girijana1
Published on

ಜಾನಪದ ಲೋಕದಲ್ಲಿ ಕುಟೀರಗಳ ನಿರ್ಮಾಣ* ನಾಡಿನ ಗಮನಸೆಳೆದ ಆಚಾರ, ವಿಚಾರ

ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ

ಒಮ್ಮೆ ಬಂದರೆ ಮತ್ತೆ ಮತ್ತೆ ಬರಬೇಕೆನ್ನುವ ಜಾನಪದ ಲೋಕ, ಮೂಲ ಸಂಸತಿ ಪರಂಪರೆ ಉಳಿಸಿಕೊಂಡಿರುವ ಐದು ಬುಡಕಟ್ಟು ಸಮುದಾಯಗಳ ಸಂಸತಿ, ಆಚಾರ, ವಿಚಾರಗಳನ್ನು ವಿಶ್ವದ ಜನತೆಗೆ ಪರಿಚಯಿಸಲು ಸಜ್ಜಾಗುತ್ತಿದೆ.

ರಾಮನಗರದ ಬೆಂಗಳೂರು&ಮೈಸೂರು ರಸ್ತೆಯಲ್ಲಿರುವ ಜಾನಪದ ಲೋಕ, ಜಾನಪದ ಸಂಗ್ರಹಗಳ ಸಾಂಸತಿಕ ಕೇಂದ್ರವಾಗಿದೆ. ಇಂತಹ ಲೋಕದಲ್ಲಿ ಮತ್ತಷ್ಟು ಸಂಸತಿಗಳ ಕಣಜ ಬಿಂಬಿತವಾಗುತ್ತಿದ್ದು, ಬುಡಕಟ್ಟು ಸಮುದಾಯಗಳ ಕುಟೀರ ನಿರ್ಮಿಸುವ ಮೂಲಕ ಪ್ರವಾಸಿಗರಿಗೆ, ಯುವ ಪೀಳಿಗೆಗೆ ನಾಡಿನ ಬುಡಕಟ್ಟು ಸಮುದಾಯಗಳ ಜನಪದ ಸಂಸತಿಯ ಪರಿಚಯ ಮಾಡಿಸುತ್ತಿದೆ.

ಕರ್ನಾಟಕದಲ್ಲಿ ಸರ್ಕಾರದ ಲೆಕ್ಕದಲ್ಲಿ ಸುಮಾರು 51 ಬುಡಕಟ್ಟುಗಳಿವೆ ಎನ್ನಲಾಗಿದೆ. ಆದರೆ, 30 ಬುಡಕಟ್ಟುಗಳು ಮಾತ್ರ ಇವೆ ಎಂದು ಇಂದಿನ ಲೆಕ್ಕ ಹೇಳುತ್ತದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬುಡಕಟ್ಟು ಜನಾಂಗ ವಾಸಿಸುತ್ತಿದ್ದು, ಒಂದೊಂದು ಜಿಲ್ಲೆಗಳಲ್ಲಿ ಒಂದೊಂದು ಹೆಸರಿನಲ್ಲಿದೆ. ಆಚಾರ, ವಿಚಾರ, ಸಂಸತಿಗಳ ಮೂಲಕ ನಾಡಿನ ಗಮನ ಸೆಳೆದಿವೆ.

ಜಾನಪದ ಲೋಕದಲ್ಲಿ ಗಿರಿಜನ ಲೋಕ ಹೆಸರಿನಲ್ಲಿ ಈ ಹಿಂದೆ ಜೇನುಕುರುಬ, ಗೊಂಡರು, ಮಲೆಕುಡಿಯಾ, ಹಾಲಕ್ಕಿ, ಗೌಳಿ ಹೀಗೆ ಐದು ಬುಡಕಟ್ಟು ಕಟೀರ ನಿರ್ಮಾಣವಾಗಿದೆ. ಅದರ ಮುಂದುವರಿದ ಭಾಗವಾಗಿ ಮತ್ತಷ್ಟು ವಿಶೇಷತೆಗಳುಳ್ಳ ವಿವಿಧ ಜಿಲ್ಲೆಗಳಲ್ಲಿರುವ ಬುಡಕಟ್ಟು ಸಮುದಾಯಗಳ ಕುಟೀರ ನಿರ್ಮಾಣಕ್ಕೆ ಬುಡಕಟ್ಟು ಮೂಲ ಸಂಸತಿ ಅವರ ಜೀವನ ಕ್ರಮ, ಜನಪದಕ್ಕೆ ಅವರ ಕೊಡುಗೆ ತಿಳಿಸಲು ಮುಂದಾಗಿದೆ. ಹಾವೇರಿಯ ಕಲಾವಿದ ಹರ್ಷ ಸೊರಬಕ್ಕನವರ್​ ನಿರ್ಮಾಣದ ಹೊಣೆ ಹೊತ್ತಿದ್ದಾರೆ.

ಹೊಸದಾಗಿ ನಿರ್ಮಾಣವಾಗುತ್ತಿರುವ ಐದು ಬುಡಕಟ್ಟು

ಗಿರಿಜನ ಬುಡಕಟ್ಟು ಲೋಕದಲ್ಲಿ ರಾಮನಗರ ಜಿಲ್ಲೆಯ ಸೋಲಿಗರು, ಚಾಮರಾಜನಗರ ಜಿಲ್ಲೆಯ ಇರುಳಿಗರು, ಉತ್ತರ ಕನ್ನಡ ಜಿಲ್ಲೆಯ ಸಿದ್ದಿ, ಕುಣಬಿ, ರಾಜ್ಯದ ಕಾಡುಗೊಲ್ಲರು, ಗುಬ್ಬಗಳು ನಿರ್ಮಾಣ ಆಗುತ್ತಿವೆ. ಒಂದೊಂದು ಸಮುದಾಯಕ್ಕೂ ಪ್ರತ್ಯೇಕ ಜಾಗ ಮಾಡಲಾಗಿದೆ. ಸಿಮೆಂಟ್​ ಕಟ್ಟಡಗಳ ಮೂಲಕ ಜನರ ಜೀವನ ಕ್ರಮ, ಅವರ ಆಚಾರ, ಸಂಸತಿ ಬಿಂಬಿಸುವಂತ ಚಿತ್ರಗಳ ಮೂಲಕ ಬುಡಕಟ್ಟು ಜನರ ಜೀವನ ಕ್ರಮ ತಿಳಿಸುತ್ತಿದೆ.

ದೈವ ಬನ

ಬುಡಕಟ್ಟು ಸಮುದಾಯಗಳು ಕಾಡಿನೊಳಗಿದ್ದು, ಪ್ರಕೃತಿ ಮಾತೆಯನ್ನು ದೈವವಾಗಿ ಕಾಣುತ್ತಾ ಬರುತ್ತಾರೆ. ಕಾಡನ್ನು ದೇವರೆಂದೇ ನಂಬಿರುವ ಸಮುದಾಯಗಳಿವು. ತಾವು ವಾಸಿಸುವ ದೂರದಲ್ಲಿ ಒಂದಷ್ಟು ಜಾಗದಲ್ಲಿ ದೈವ ಬನ ನಿರ್ಮಾಣ ಮಾಡಿ ಅಲ್ಲಿ ಯಾವುದೇ ಪ್ರಾಣಿ, ಪ ಬೇಟೆಯಾಡದೆ ಮಾನವ ಚಟುವಟಿಕೆ ಇರದಂತೆ ನೋಡಿಕೊಂಡು ಆ ಪ್ರದೇಶವನ್ನು ದೇವರ ಜಾಗ ಎಂದು ಪೂಜ್ಯತೆಯಿಂದ ನೋಡುತ್ತಾರೆ.

ಪ್ರತಿ ವರ್ಷ ಒಂದು ಬಾರಿ ವನಕ್ಕೆ ಹೋಗಿ ಹಬ್ಬ ಆಚರಿಸಿ ದೇವರನ್ನು ಪೂಜಿಸಿ ಬರುತ್ತಾರೆ. ಅಂತಹ ಪರಿಕಲ್ಪನೆಯಲ್ಲಿ ಜಾನಪದ ಲೋಕದಲ್ಲಿ ದೈವಬನ ನಿರ್ಮಾಣ ಮಾಡಿ, ಕಾಡಿನ ಸಂರಕ್ಷಣೆಯನ್ನು ಹೇಗೆ ಇಂತಹ ಆಚರಣೆಗಳ ಮೂಲಕ ಮಾಡುತ್ತಿದ್ದರು ಎಂಬುವುದನ್ನು ಜನರಿಗೆ ತೋರಿಸಲು ಮರದ ಹಂದಿ, ಮರದ ಹುಲಿ, ಪ್ರಾಣಿಗಳು, ಇತರ ವಸ್ತುಗಳನ್ನು ನಿರ್ಮಾಣ ಮಾಡಿ ಗಿಡ ಮರ ನೆಟ್ಟು ದೈವ ಬನ ನಿರ್ಮಾಣ ಮಾಡಲಾಗಿದೆ. ಒಂದೊಂದು ಸಮುದಾಯಗಳು ತಮ್ಮದೇ ಆದ ರೀತಿಯಲ್ಲಿ ಆಚರಣೆ ಮಾಡುತ್ತವೆ ಆದರೆ ಜಾನಪದ ಲೋಕದಲ್ಲಿ ಎಲ್ಲ ಸಮುದಾಯಗಳಿಗೂ ಹೊಂದಾಣಿಕೆ ಆಗುವಂತೆ ಒಂದೇ ಬನ ನಿರ್ಮಾಣ ಮಾಡಿ ದೈವ ಬನದ ಪರಿಕಲ್ಪನೆ ನೀಡಲಾಗಿದೆ.

ಕುಟೀರಗಳು ಲೋಕಾರ್ಪಣೆ

ಈ ಹಿಂದೆ ಐದು ಬುಡಕಟ್ಟುಗಳ ಕುಟೀರಗಳು ನಿರ್ಮಾಣವಾಗಿದ್ದವು. ಅದರಲ್ಲಿ ಮಲೆಕುಡಿಯ ಕುಟೀರಕ್ಕೆ ಕಳೆದ ವರ್ಷ ಸಿಡಿಲು ಬಡಿದು ಮನೆ, ಪ್ರತಿಮೆಗಳು ಹಾಳಾಗಿದ್ದವು. ಅದರ ಕೆಲಸ ಮುಂದುವರಿದಿದ್ದು, ಐದು ಬುಡಕಟ್ಟು ಸಮುದಾಯಗಳ ಕುಟೀರಗಳು ಲೋಕಾರ್ಪಣೆ ಆಗುವ ಸಮಯದಲ್ಲಿ ಅದರ ಕೆಲಸವೂ ಮುಗಿಯುತ್ತದೆ ಎನ್ನಲಾಗಿದೆ.

ಬುಡಕಟ್ಟು ಜೀವನ ಚಿತ್ರಣ

ಐದು ಬುಡಕಟ್ಟು ಲೋಕದಲ್ಲಿ ಒಂದೊಂದು ಸಮುದಾಯದ ಚಿತ್ರಣ ತೆರೆದಿಡುವ ಕೆಲಸ ಆಗಿದೆ. ಆ ಸಮುದಾಯಗಳ ಜನರ ಆಚಾರ, ವಿಚಾರ, ಅವರ ಸಂಸತಿ ಜನಪದಕ್ಕೆ ಅವರ ಕೊಡುಗೆ ತೋರಿಸುವ ಸಲುವಾಗಿ ಅವರ ಉಡುಗೆ ತೊಡುಗೆ, ಮನೆ ಮಾದರಿ ವಾಸಸ್ಥಳದ ಚಿತ್ರಣ ಮೂಡಿಸಲಾಗುತ್ತಿದೆ.

ಸಂಸ್ಕೃತಿ  ಬಿಂಬ

ಜಾನಪದ ಲೋಕದಲ್ಲಿ ಗಿರಿಜನ ಬುಡಕಟ್ಟು ಲೋಕದ ಜತೆಯಲ್ಲಿ ಹಿಂದಿನ ಕಾಲದಲ್ಲಿ ಜನರು ಬಳಸುತ್ತಿದ್ದ ವಸ್ತುಗಳು, ಜನಪದ ಕಲಾ ಪ್ರಕಾರಗಳ ಚಿತ್ರಗಳು, ರಾಜ ಮಹಾರಾಜರು ಬಳಸುತ್ತಿದ್ದ ಆಯುಧಗಳು, ವಸ್ತು ಸಂಗ್ರಹಾಲಯಗಳು, ಜನಪದದ ಕಲಾಕೃತಿಗಳು, ಜನಪದ ಕಲೆಗಾರರ ವೇಷ ಭೂಷಣ, ಸಂಸತಿಯ ಅನಾವರಣ, ಪುಸ್ತಕಗಳು, ಗೀತ ಸಾಹಿತ್ಯ ಸುಂದರ ಪರಿಸರ ಹೀಗೆ ಹತ್ತು ಹಲವು ವೈಶಿಷ್ಟ$್ಯಗಳು ಜಾನಪದ ಲೋಕದಲ್ಲಿವೆ.

ಆಕರ್ಷಣೆ 

ಜಾನಪದ ಲೋಕದಲ್ಲಿ ವಿಶೇಷವಾಗಿ ಜನಪದ ಮಾದರಿಯ ಯಕ್ಷಗಾನ, ಪೂಜಾ ಕುಣಿತ, ಮತ್ತಿತರ ಕಲೆಯ ಮತ್ತು ಜನರ ಸಾಕು ಪ್ರಾಣಿಗಳು, ಅವರ ಜೀವನ ಶೈಲಿಯ ಚಿತ್ರಣಗಳನ್ನು ಹಿಂದಿನ ತಲೆಮಾರಿನ ರೀತಿಯಲ್ಲಿ ಗೊಂಬೆ, ಮನೆ ಆವರಣಗಳನ್ನು ಮಾಡಲಾಗಿದೆ.

ಜಾನಪದ ಲೋಕಕ್ಕೆ ಬಂದ ಪ್ರವಾಸಿಗರಿಗೆ ಮತ್ತಷ್ಟು ಖುಷಿ ಪಡಿಸಲು ಕುದುರೆ ಗಾಡಿ ಸವಾರಿ ಏರ್ಪಡಿಸಿದೆ. ಜತೆಗೆ ದೋಣಿ ವಿಹಾರ ಸೌಲಭ್ಯ ಒದಗಿಸಿಕೊಡುತ್ತಿದೆ.

ಯುನೆಸ್ಕೋ ಮಾನ್ಯತೆ

ಜಾನಪದ ಲೋಕ ನಿರ್ಮಾಣದ ಕರ್ನಾಟಕ ಜಾನಪದ ಪರಿಷತ್ತಿಗೆ ಅಮೂರ್ತ ಸಾಂಸತಿಕ ಪರಂಪರೆಯ ಸಂರಕ್ಷಣೆಯ ಉದ್ದೇಶಕ್ಕಾಗಿ ಇತ್ತೀಚೆಗೆ ಯುನೆಸ್ಕೋ ಮಾನ್ಯತೆ ದೊರೆತಿದೆ.

ನಾಡೋಜ ಎಚ್​.ಎಲ್​.ನಾಗೇಗೌಡರು ಜಾನಪದವನ್ನೇ ಮೂಲವಾಗಿಸಿಟ್ಟು ಸುಮಾರು 15 ಎಕರೆಯಲ್ಲಿ ಸುಂದರ ಮರಗಿಡಗಳ ಹಚ್ಚ ಹಸಿರಿನ ಪರಿಸರದಲ್ಲಿ ಪ್ರಾಚಿನ ಜನಪದ ವಸ್ತುಗಳ ಸಂಗ್ರಹಣೆ ಮಾಡಿ ಜಾನಪದ ಲೋಕ ತಲೆ ಎತ್ತಿದೆ. ಪ್ರತಿನಿತ್ಯ ದೇಶ, ವಿದೇಶಗಳ ನೂರಾರು ಪ್ರವಾಸಿಗರು ಭೇಟಿ ನೀಡುತ್ತಾರೆ.

ಬುಡಕಟ್ಟು ಸಮುದಾಯಗಳು ನಮ್ಮ ಸಂಸತಿಯ ಬೇರುಗಳು. ಆಧುನಿಕತೆ ಕೂಡ ಜನಪದದಿಂದಲೇ ಬಂದಿರುವುದು. ಬುಡಕಟ್ಟು ಲೋಕ ನಿರ್ಮಾಣ ಕೇವಲ ನೋಟಕ್ಕಷ್ಟೇ ಅಲ್ಲ, ಅಧ್ಯಯನಕ್ಕೆ ಅನುಕೂಲ ಕೂಡ ಆಗಲಿದೆ. ಪ್ರಾಚಿನ ಸಂಸತಿಯನ್ನು ಜನರಿಗೆ ತೋರಿಸುವುದು ಇದರ ಮೂಲ ಕಲ್ಪನೆಯ ಉದ್ದೇಶ.

> ಪ್ರೊ.ಹಿ.ಚಿ. ಬೋರಲಿಂಗಯ್ಯ, ಅಧ್ಯಕ್ಷ, ಕರ್ನಾಟಕ ಜಾನಪದ ಪರಿಷತ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net