ಸಚಿವ ಲಾಡ್ ಕ್ಷೇತ್ರದಲ್ಲೇ ಮುಗ್ಗರಿಸಿದ ಕೈ

laad
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಪ್ರತಿನಿಧಿಸುವ ವಿಧಾನಸಭೆ ಕ್ಷೇತ್ರ ಕಲಘಟಗಿಯಲ್ಲಿ ಬಿಜೆಪಿ ಮತ ಗಳಿಕೆಯಲ್ಲಿ ಮುನ್ನಡೆ ಸಾಧಿಸಿರುವುದು ಕಾಂಗ್ರೆಸ್ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

2023ರ ವಿಧಾನಸಭೆ ಚುನಾವಣೆಯಲ್ಲಿ ಲಾಡ್, ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ನಾಗರಾಜ ಛಬ್ಬಿ ವಿರುದ್ಧ 14,357 ಮತಗಳ ಅಂತರದಿಂದ ಜಯ ಗಳಿಸಿದ್ದರು. ಕೇವಲ ಒಂದು ವರ್ಷದ ಅವಧಿಯಲ್ಲಿ ಇದೇ ಕ್ಷೇತ್ರದಲ್ಲಿ ಲಾಡ್​ಗೆ ಭಾರೀ ಹಿನ್ನಡೆಯಾಗಿದೆ. ಧಾರವಾಡ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಕಲಘಟಗಿ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿಯ ಪ್ರಲ್ಹಾದ ಜೋಶಿ 96402 ಮತಗಳನ್ನು ಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ 63665 ಮತಗಳನ್ನಷ್ಟೇ ಪಡೆಯಲು ಸಾಧ್ಯವಾಗಿದೆ.

ಚುನಾವಣೆ ಪ್ರಚಾರದ ವೇಳೆ ಸಚಿವ ಸಂತೋಷ ಲಾಡ್, ಕೇಂದ್ರ ಸರ್ಕಾರದ ವಿರುದ್ಧ ತೀಕ್ಷ್ಣವಾಗಿ ಟೀಕೆಗಳನ್ನು ಮಾಡಿದ್ದರು. ತಮ್ಮ ವಿಚಾರಗಳನ್ನು ಸಮರ್ಥಿಸಿಕೊಂಡು ಅವರು ಬಹಿರಂಗ ಚರ್ಚೆಗೆ ಬಿಜೆಪಿಯವರನ್ನು ಆಹ್ವಾನಿಸಿದ್ದು ಗಮನ ಸೆಳೆದಿತ್ತು. ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ, ಲಾಡ್ ಅವರ ಆಯ್ಕೆಯೂ ಆಗಿದ್ದರು. ಅಸೂಟಿ ಸೋತಿರುವುದು ಒಂದೆಡೆಯಾದರೆ, ಸ್ವಕ್ಷೇತ್ರದಲ್ಲಿ ಬಿಜೆಪಿ 32737 ಮತಗಳ ಮುನ್ನಡೆ ಗಳಿಸಿರುವುದು ಜಿಲ್ಲಾ ಉಸ್ತುವಾರಿ ಸಚಿವರಿಗಾದ ದೊಡ್ಡ ಹಿನ್ನೆಡೆ ಎಂದು ವಿಶ್ಲೇಷಿಸಲಾಗುತ್ತಿದೆ.

ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸದಿದ್ದರೆ ಸಚಿವ ಸ್ಥಾನ ಹೋಗುತ್ತದೆಂದು ಹೈಕಮಾಂಡ್ ಸೂಚಿಸಿದೆ ಎಂದು ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷದ ಕೆಲ ಮುಖಂಡರು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋತಿರುವುದಲ್ಲದೇ ಸಚಿವ ಲಾಡ್ ಪ್ರತಿನಿಧಿಸುವ ವಿಧಾನಸಭೆ ಕ್ಷೇತ್ರ ಕಲಘಟಗಿಯಲ್ಲಿ ಬಿಜೆಪಿ ಮುನ್ನಡೆ ಗಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net