

ಬ್ಯಾಡಗಿ: ತಾಲೂಕಿನ ಶಿಡೇನೂರá--ಬ್ಯಾಡಗಿ ರಸ್ತೆಗೆ ಹೊಂದಿಕೊಂಡ ಗುಡ್ಡದ ಜಾಗವನ್ನು ಗ್ರಾಮಸ್ಥರ ವಸತಿ ನಿವೇಶನಕ್ಕಾಗಿ ಮೀಸಲಿಡಬೇಕು ಎಂದು ಆಗ್ರಹಿಸಿ ತಾಲೂಕಿನ ಅಂಗರಗಟ್ಟಿ ಗ್ರಾಮಸ್ಥರು ಗುರುವಾರ ತಹಸೀಲ್ದಾರ್ ಕಾರ್ಯಾಲಯ ಎದುರು ಪ್ರತಿಭಟನೆ ನಡೆಸಿದರು.
ಗ್ರಾಪಂ ಮಾಜಿ ಸದಸ್ಯ ಶೇಖಪ್ಪ ಬಡಿಗೇರ ಮಾತನಾಡಿ, ಗ್ರಾಮದ ಸರ್ವೆ ನಂ. 57, 58ರಲ್ಲಿ ಗೋಮಾಳಕ್ಕಾಗಿ ಮೀಸಲಿಟ್ಟಿದ್ದ 18 ಎಕರೆ ಜಮೀನನ್ನು ಬೇರೆ ಬೇರೆ ಕಾರಣಕ್ಕಾಗಿ ಮಂಜೂರಾಗಿ 7ಎಕರೆ ಉಳಿದಿತ್ತು. ಈ ಪೈಕಿ 2 ಎಕರೆ ಜಮೀನನ್ನು ಗ್ರಾಮದ ಸ್ಮಶಾನಕ್ಕಾಗಿ ಮಂಜೂರು ಮಾಡಲಾಗಿದ್ದು, ಇನ್ನುಳಿದ 5 ಎಕರೆ ಜಮೀನನ್ನು ಗ್ರಾಮದ ಜಾನುವಾರುಗಳು ಹಾಗೂ ಗ್ರಾಮಸ್ಥರ ನಿವೇಶನಕ್ಕಾಗಿ ಮೀಸಲಿಡಬೇಕು. ಈ ಜಾಗದ ಬಳಿ ಡಾಬಾ ಸೇರಿ ಇತರ ಚಟುವಟಿಕೆ ನಡೆಯುತ್ತಿದ್ದು ಅವುಗಳಿಗೆ ಆಸ್ಪದ ನೀಡಬಾರದು. ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಗ್ರಾಮದ ನೂರಾರು ಮಹಿಳೆಯರು ಸೇರಿ ಪಾಲ್ಗೊಂಡಿದ್ದರು. ಬಳಿಕ ತಹಸೀಲ್ದಾರ್ ಫೀರೋಜ್ಷಾ ಸೋಮನಕಟ್ಟಿ ಅವರಿಗೆ ಮನವಿ ಸಲ್ಲಿಸಿದರು. ಗ್ರಾಮಸ್ಥರಾದ ಶಿವಪ್ಪ ಬಸಪ್ಪನವರ, ಕೊಟ್ರಯ್ಯ ಕಡ್ಲಿಮಠ, ಗಣೇಶಪ್ಪ ಕೆಂಚಮ್ಮನವರ, ರಾಮಮ್ಮ ಮರಿಯಮ್ಮನವರ, ಚನ್ನಮ್ಮ ಬಾತಿ, ಯಶೋಧಮ್ಮ ಹಿರೇಮಠ, ಹಾಲೇಶ ಗೊರವರ, ನೇತ್ರಾವತಿ ಬಡಿಗೇರ, ಕರಬಸಪ್ಪ ಹಟ್ಟಿಯವರ, ಫಕೀರಪ್ಪ ಕಾಯಕದ, ಸುಶೀಲವ್ವ ಕಾಯಕದ, ಮಾಲತೇಶ ಬಡಿಗೇರ, ರೇವಣೆಪ್ಪ ಕಾಟೇನಹಳ್ಳಿ, ಲಲಿತವ್ವ ಮಾಸಣಗಿ, ಭರಮಪ್ಪ ಕಾಟೇನಹಳ್ಳಿ, ಲಕ್ಷ್ಮೀ ಮಾಸಣಗಿ, ಮಾಲತೇಶ ಕಾಟೇನಹಳ್ಳಿ, ಇತರರಿದ್ದರು.