

ವಿಜಯಪುರ: ತೊಗರಿಗೆ ಯೋಗ್ಯ ದರ ನಿಗದಿಪಡಿಸುವಂತೆ ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂದ ಪದಾಧಿಕಾರಿಗಳು ಸೋಮವಾರ ಜಿಲ್ಲಾಡಳಿತ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ತೊಗರಿ ಬೆಳೆ ರಾಶಿ ಮಾಡಿ ಮಾರುಕಟ್ಟೆಗೆ ಸಾಗಿಸಬೇಕೆನ್ನುವಷ್ಟರಲ್ಲಿ ಕೇಂದ್ರ ಸರ್ಕಾರ ದಿಢೀರನೆ ತೊಗರಿ ಬೆಲೆ ಕಡಿಮೆ ಮಾಡುವ ಮೂಲಕ ರೈತರಿಗೆ ದೊಡ್ಡ ಶಾಕ್ ನೀಡಿದೆ. ತೊಗರಿ ಬಿತ್ತನೆಗೆ ಪ್ರತಿ ಎಕರೆಗೆ 25 ಸಾವಿರ ರೂ.ಗಳಂತೆ ಖರ್ಚು ಮಾಡಿದ್ದೇವೆ. ಸದ್ಯ ಸರ್ಕಾರ ಮೊದಲಿದ್ದ ತೊಗರಿ ಬೆಲೆ ಪ್ರತಿ ಕ್ವಿಂಟಾಲ್ಗೆ 12 ಸಾವಿರ ರೂ. ದರವನ್ನು 7 ಸಾವಿರ ರೂ.ಗೆ ಇಳಿಸಿದೆ.
ಹೀಗಾಗಿ ಸಾಲ ಹೇಗೆ ತೀರಿಸಬೇಕೆಂಬ ಚಿಂತೆಯಲ್ಲಿ ರೈತರು ಮುಳುಗಿದ್ದು, ಸರ್ಕಾರ ಕೂಡಲೇ ಮೊದಲಿನ ದರ 12 ಸಾವಿರ ರೂ. ಮುಂದುವರಿಸಬೇಕು ಎಂದು ಆಗ್ರಹಿಸಿದರು.
ಉತ್ತರ ಕರ್ನಾಟಕದಲ್ಲಿ ಬಹುತೇಕ ರೈತರು ಹೆಚ್ಚು ತೊಗರಿ ಬೆಳೆದಿದ್ದಾರೆ. ಸದ್ಯ ಸರ್ಕಾರ ತೊಗರಿ ಬೆಳೆ ರಾಶಿ ವೇಳೆ ದರ ಕಡಿಮೆ ಮಾಡುವ ಮೂಲಕ ರೈತರಿಗೆ ಬರೆ ಎಳೆದಿದೆ. ಸರ್ಕಾರ ಕೂಡಲೇ ಎಚ್ಚೆತ್ತುಕ್ಕೊಂಡು ಪ್ರತಿ ಕ್ವಿಂಟಾಲ್ ತೊಗರಿಗೆ 12 ಸಾವಿರ ರೂ. ನಿಗದಿಪಡಿಸಬೇಕೆಂದು ಒತ್ತಾಯಿಸಿದರು.
ರೈತ ಮುಖಂಡರಾದ ಗುರುಲಿಂಗಪ್ಪ ಪಡಸಲಗಿ, ವಿಠಲ ಬಿರಾದಾರ, ಹೊನಕೇರಪ್ಪ ತೆಲಗಿ, ಸಿದ್ದಪ್ಪ ಕಲಬೀಳಗಿ, ಲಾಲಸಾ ಹಳ್ಳೂರ, ಶಿವಾನಂದ ಬಿರಾದಾರ, ಸಂತೋಷ ಬಿರಾದಾರ, ರಾಮಣ್ಣ ಮನ್ಯಾಳ, ರ್ಯಾವಪ್ಪಗೌಡ ಪೊಲೇಶಿ, ಬಂದಗೀಸಾ ಹಳ್ಳೂರ, ಬಾಬು ಹಡಪದ ಗೋವಿಂದ ಹಡಪದ, ದತ್ತಾತ್ರೇಯ ಕುಲಕರ್ಣಿ ಮತ್ತಿತರರಿದ್ದರು.