ಅಧಿವೇಶನ ಹಿನ್ನೆಲೆ ನಗರದ ಗೋಡೆಗಳಿಗೀಗ ಜೀವಕಳೆ!

24Jaggu8
ಬೆಳಗಾವಿ ಅಂಬೇಡ್ಕರ್ ರಸ್ತೆ ಮಾರ್ಗದ ಗೋಡೆಗಳ ಮೇಲೆ ಚಿತ್ರ ಬಿಡಿಸುತ್ತಿರುವುದು.
Published on

ಬೆಳಗಾವಿ: ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಡಿ.9ರಂದು ವಿಧಾನ ಮಂಡಳ ಚಳಿಗಾಲ ಅಧಿವೇಶನ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ನಗರದ ಪ್ರಮುಖ ಬೀದಿಯ ಕಾಂಪೌಂಡ್‌ಗಳಿಗೆ ಸುಣ್ಣ-ಬಣ್ಣ ಬಳಿದು ನಗರವನ್ನು ಸುಂದರಗೊಳಿಸುವ ಕಾರ್ಯ ಭರದಿಂದ ನಡೆದಿದೆ.

ಸ್ವಚ್ಛ ಭಾರತ ಮಿಷನ್ ಜಾಗೃತಿ, ಕಸ ವಿಲೇವಾರಿ, ಶೌಚಗೃಹಗಳ ಬಳಕೆ ಕುರಿತಾದ ಜಾಗೃತಿ ಬರಹಗಳು, ಸರ್ಕಾರದ ಗ್ಯಾರಂಟಿ ಸೇರಿ ವಿವಿಧ ಯೋಜನೆಗಳ ಜಾಗೃತಿಯ ಚಿತ್ರಗಳನ್ನು ಬಿಡಿಸಲಾಗುತ್ತಿದೆ. ಕಲೆ, ಸಂಸ್ಕೃತಿ, ಪರಿಸರ ಸಂರಕ್ಷಣೆ ಕುರಿತಾದ ಚಿತ್ರಗಳ ಜನರ ಮನ ಸೆಳೆಯುತ್ತಿವೆ. ಆಕರ್ಷಕ ಚಿತ್ರಕಲೆಗಳಿಂದ ನಗರದ ಗೋಡೆಗಳಿಗೂ ಈಗ ಜೀವ ಬಂದಂತಾಗಿದೆ. ಬಣ್ಣ ಬಳಿದು, ಚಿತ್ರ ಬಿಡಿಸುವುದಕ್ಕೆ ನೂರಾರು ಜನ ಹಗಲು-ರಾತ್ರಿ ದುಡಿಯುತ್ತಿದ್ದಾರೆ.

ಹತ್ತಾರು ಕಿ.ಮೀ ಗೋಡೆ ಮೇಲೆ ಚಿತ್ರಕಲೆ: ಸದಾಶಿವನಗರದಲ್ಲಿ 250 ಮೀ., ಎಪಿಎಂಸಿ ರಸ್ತೆಯಲ್ಲಿ 600 ಮೀ., ಕಾಂಗ್ರೆಸ್ ರಸ್ತೆಯಲ್ಲಿ 1600 ಮೀ. ಕಾಂಪೌಂಡ್ ಗೋಡೆಗಳಿಗೆ ಬಣ್ಣ ಹಚ್ಚಿ ಸುಂದರಗೊಳಿಸಲಾಗುತ್ತಿದೆ. ಅಲಾರವಾಡ ಬ್ರಿಡ್ಜ್ 400 ಮೀ., ಚನ್ನಮ್ಮ ವೃತ್ತದಿಂದ ಆರ್‌ಟಿಒ ವರೆಗೆ 700 ಮೀ. ಗೋಡೆ, ಕೃಷ್ಣದೇವರಾಯ ವೃತ್ತದಿಂದ ಆರ್‌ಟಿಒ ವೃತ್ತದವರೆಗೆ 1200 ಮೀ. ಗೋಡೆ ಹಾಗೂ ಚನ್ನಮ್ಮ ವೃತ್ತದಿಂದ ಕೃಷ್ಣದೇವರಾಯ ವೃತ್ತದವರೆಗೆ 600 ಮೀ. ಗೋಡೆಗಳ ಮೇಲೆ ಬಣ್ಣ ಬಳಿದು ಚಿತ್ರ

ಬಿಡಿಸಲಾಗುತ್ತಿದೆ. ಕಾಲೇಜು ರಸ್ತೆಯ ಪಕ್ಕದ ಗೋಡೆಗಳನ್ನು ಸಿಂಗರಿಸಲಾಗುತ್ತಿದೆ.

ಮಹಾನಗರ ಪಾಲಿಕೆಯಿಂದ ಉದ್ಯಮಿಗಳಿಂದ ಹಣ ಸಂಗ್ರಹಿಸಿ ಬಣ್ಣ ಖರೀದಿಸಲಾಗಿದೆ. ಪೇಂಟರ್‌ಗಳ ಸಂಭಾವನೆಗೂ ಉದ್ಯಮಿಗಳನ್ನು ಸಂಪರ್ಕಿಸುತ್ತಿದ್ದಾರೆ. ಸದ್ಯ 3 ಸಾವಿರ ಲೀಟರ್‌ನಷ್ಟು ಬಣ್ಣವನ್ನು ಬಿಲ್ಡರ್ಸ್ ಅಸೋಸಿಯೇಷನ್ಸ್ ಕೊಡುಗೆ ನೀಡಿದ್ದಾರೆ. ಪೇಂಟರ್‌ಗಳ ಸಂಭಾವನೆಗೆ 2.5 ಲಕ್ಷ ರೂ. ವೆಚ್ಚವಾಗುತ್ತಿದ್ದು,

ದಾನಿಗಳನ್ನು ಸಂಪರ್ಕಿಸಲಾಗುತ್ತಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net