

ಕೆ.ಆರ್.ಪೇಟೆ: ಕೃಷಿ ಜತಗೆ ಹೈನುಗಾರಿಕೆ ಗ್ರಾಮೀಣ ಪ್ರದೇಶದ ಜನರ ಜೀವನಾಡಿಯಾಗಿದ್ದು, ಪ್ರಮುಖ ಉಪಕಸುಬಾಗಿ ಜನರ ಆರ್ಥಿಕ ಸ್ವಾವಲಂಬನೆಗೆ ವರದಾನವಾಗಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ತಾಲೂಕಿನ ಶೀಳನೆರೆ ನೂತನ ಹಾಲು ಉತ್ಪಾದಕರ ಸಹಕಾರ ಸಂಘದ ಬಿಎಂಸಿ ಕಟ್ಟಡವನ್ನು ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಪ್ರತಿ ಲೀಟರ್ ಹಾಲಿಗೆ ಹೆಚ್ಚುವರಿಯಾಗಿ 5 ರೂ.ಗಳನ್ನು ಪ್ರೋತ್ಸಾಹ ಧನವನ್ನಾಗಿ ನೀಡುತ್ತಿದೆ. ಆ ಮೂಲಕ ಹೈನು ಉದ್ಯಮವನ್ನು ಪ್ರೋತ್ಸಾಹಿಸುತ್ತಿದೆ ಎಂದರು.
ಕಾಂಗ್ರೆಸ್ ಪಕ್ಷ ಚುನಾವಣಾ ಪೂರ್ವದಲ್ಲಿ ಕೊಟ್ಟ ಮಾತಿನಂತೆ ನಾಲ್ಕು ಗ್ಯಾರಂಟಿಗಳನ್ನು ಈಡೇರಿಸಿದ್ದು, ಉಳಿದ ಭರವಸೆಗಳನ್ನು ಶೀಘ್ರದಲ್ಲೇ ಬಗೆಹರಿಸಲಾಗುವುದು ಎಂದು ತಿಳಿಸಿದರು. ಕಾವೇರಿ ನದಿ ನೀರು ಹಂಚಿಕೆಯ ವಿಚಾರದಲ್ಲಿ ಆರಂಭದಿಂದಲೂ ಕಾವೇರಿ ನ್ಯಾಯಮಂಡಳಿ ಹಾಗೂ ಸರ್ವೋಚ್ಚ ನ್ಯಾಯಾಲಯ ರಾಜ್ಯದ ವಿರುದ್ಧವಾಗಿಯೇ ತೀರ್ಪು ನೀಡಿವೆ. ನಮಗೆ ಕುಡಿಯಲು ನೀರಿಲ್ಲದ ಸಂದರ್ಭದಲ್ಲಿ ರಾಜ್ಯದ ರೈತರ ಹಿತವನ್ನು ಬಲಿಕೊಟ್ಟು ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲವೆಂದು ನವದೆಹಲಿಯಲ್ಲಿ ನಡೆದ ರಾಜ್ಯದ ಸಂಸದರು ಹಾಗೂ ಕೇಂದ್ರದ ಮಂತ್ರಿಗಳ ಸಭೆಯಲ್ಲಿ ಸ್ಪಷ್ಟವಾಗಿ ತಿಳಿಸಿದ್ದೇವೆ ಎಂದರು.
ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು, ರಾಜ್ಯ ಮಾರಾಟ ಸಹಕಾರ ಮಹಾ ಮಂಡಲದ ನಿರ್ದೇಶಕ ಎಸ್.ಎಲ್.ಮೋಹನ್, ಕಾಂಗ್ರೆಸ್ ಮುಖಂಡ ಹರಳಹಳ್ಳಿ ವಿಶ್ವನಾಥ್, ಶೀಳನೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಶೀಳನೆರೆ ಅಂಬರೀಷ್, ಪಿಎಲ್‌ಡಿ ಬ್ಯಾಂಕಿನ ಅಧ್ಯಕ್ಷೆ ಜಯಶೀಲ ರಾಮೇಗೌಡ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಮಮತಾ ಶೆಟ್ಟಿ, ಮನ್‌ಮುಲ್ ಮಾರ್ಗದ ವಿಸ್ತರಣಾಧಿಕಾರಿ ನಾಗಪ್ಪ ಅಲ್ಲಬಾದಿ ಇತರರು ಇದ್ದರು.