

ಹುಬ್ಬಳ್ಳಿ: ಬಿಳಿ ಕೋಟು ದೊಡ್ಡ ಜವಾಬ್ದಾರಿಯ ಸಂಕೇತ. ಸ್ಥಾನಮಾನಕ್ಕಿಂತ ವೈದ್ಯಕೀಯ ವೃತ್ತಿಯ ಶ್ರೇಷ್ಠತೆ ಮತ್ತು ಹೆಚ್ಚಿನ ಬದ್ಧತೆಯ ಪ್ರತೀಕವಾಗಿದೆ. ಇಂಥ ದೊಡ್ಡ ಜವಾಬ್ದಾರಿ ಹೊತ್ತಿರುವ ನೀವು ರೋಗಿಗಳ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಅಖಿಲ ಭಾರತ ಶಸ್ತ್ರ ಚಿಕಿತ್ಸಕರ ಸಂಘದ ಅಧ್ಯಕ್ಷ ಹಾಗೂ ಔರಂಗಾಬಾದ್‌ನ ಎಂಜಿಎಂ ಮೆಡಿಕಲ್ ಕಾಲೇಜ್‌ನ ಡೆಪ್ಯೂಟಿ ಡೀನ್ ಡಾ. ಪ್ರವೀಣ ಸೂರ್ಯವಂಶಿ ಅವರು ವೈದ್ಯ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ನಗರದ ಕೆಎಂಸಿಆರ್‌ಐನಲ್ಲಿ ಸೋಮವಾರ ಏರ್ಪಡಿಸಿದ್ದ 2019ರ ಬ್ಯಾಚ್‌ನ ವೈದ್ಯಕೀಯ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪಠ್ಯದ ಜತೆಗೆ ಕ್ಲಿನಿಕಲ್ ಪ್ರಾಕ್ಟಿಸ್ ಕೂಡ ಅಗತ್ಯ. ಬೇರೆ ವಿಷಯಗಳು ತಪ್ಪು ದಾರಿಗೆ ಎಳೆಯಬಹುದು. ಆದರೆ, ಪ್ರಾಕ್ಟಿಸ್ ನಿಮ್ಮನ್ನು ವೃತ್ತಿ ಕೌಶಲವನ್ನು ಕಲಿಸಿಕೊಡುತ್ತದೆ. ಸಮಾಜದಲ್ಲಿ ವೈದ್ಯ ವೃತ್ತಿಗೆ ಮಹತ್ವ ಇದೆ. ಹಾಗಾಗಿ ಸಮಾಜ ಮತ್ತು ರೋಗಿಗಳ ಜತೆ ನೀವುಗಳೆಲ್ಲ ಸಂಯಮ, ಸೌಜನ್ಯ, ಉತ್ತಮ ನಡವಳಿಕೆಯಿಂದ ವರ್ತಿಸಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ವೃತ್ತಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ವ್ಯಾಪಕವಾಗಿದೆ. ಅದನ್ನು ಅಳವಡಿಸಿಕೊಳ್ಳುವುದು ತಪ್ಪಲ್ಲ. ಆದರೆ, ಅದೇ ಎಲ್ಲವೂ ಆಗಬಾರದು. ತಂತ್ರಜ್ಞಾನವು ನಮ್ಮನ್ನು ಎಚ್ಚರಿಕೆ ಹಾಗೂ ಜವಾಬ್ದಾರಿಯಿಂದ ಕೆಲಸ ಮಾಡಲು ಬಿಡುವುದಿಲ್ಲ. ಉದ್ಯಮವು ತನ್ನ ಉಳಿವಿಗಾಗಿ ತಂತ್ರಜ್ಞಾನವನ್ನು ಮಾರುಕಟ್ಟೆಗೆ ತಳ್ಳುತ್ತದೆ. ಇದರಿಂದ ವೆಚ್ಚ ದುಬಾರಿಯಾಗುತ್ತದೆ. ಹಾಗಾಗಿ ಆರೋಗ್ಯ ಸೇವೆಗಳ ವೆಚ್ಚ ನಿಯಂತ್ರಿಸಲು ತಂತ್ರಜ್ಞಾನವನ್ನು ವಿವೇಚನೆಯಿಂದ ಬಳಸಬೇಕು ಎಂದು ಸಲಹೆ ಮಾಡಿದರು.
ಬೆಳಗಾವಿ ಜೆಎನ್‌ಎಂಸಿ ಕಾಹೆರ್ ವಿಶ್ವವಿದ್ಯಾಲಯದ ವಿಶ್ರಾಂತ ಡೀನ್ ಡಾ. ಅಶೋಕ ಗೋಧಿ ಮಾತನಾಡಿ, ವೈದ್ಯಕೀಯ ವೃತ್ತಿ ಎಂಬುದು ಸುಖದ ಸುಪ್ಪತ್ತಿಗೆಯಲ್ಲ. ಬೆಳೆಯಬೇಕೆಂದರೆ ಕಷ್ಟ ಮತ್ತು ಸವಾಲುಗಳನ್ನು ಎದುರಿಸಬೇಕು. ಹೆದರಿ ಹೋಗದೇ ಸಾಮರ್ಥ್ಯ ಪ್ರದರ್ಶಿಸಬೇಕು. ಇಂದರಿಂದ ವೈದ್ಯಕೀಯ ವೃತ್ತಿಯಲ್ಲಿ ನಿಮ್ಮ ಬೆಳೆವಣಿಗೆ ಸುಲಭ ಸಾಧ್ಯ ಎಂದರು.
ಕೆಎಂಸಿಆರ್‌ಐ ನಿರ್ದೇಶಕ ಡಾ.ಎಸ್.ಎಫ್. ಕಮ್ಮಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ನೀವೆಲ್ಲ ಎತ್ತರಕ್ಕೆ ಬೆಳೆದಷ್ಟೂ ಶಿಕ್ಷಕರು ಮತ್ತು ತಂದೆ-ತಾಯಿಗೆ ಹೆಮ್ಮೆ. ಈ ಖುಷಿಯಲ್ಲಿ ಇವರನ್ನೆಲ್ಲ ಮರೆಯದೇ ಸ್ಮರಿಸಬೇಕು ಎಂದರು.
ಹುಬ್ಬಳ್ಳಿ ಕೆಎಂಸಿ ನಿವೃತ್ತ ವೈದ್ಯಕೀಯ ಅಧೀಕ್ಷಕಿ ಡಾ. ಅಕ್ಕಮಹಾದೇವಿ, ವೈದ್ಯಕೀಯ ಅಧೀಕ್ಷಕ ಡಾ. ಈಶ್ವರ ಹಸಬಿ, ಪ್ರಾಚಾರ್ಯ ಡಾ. ಗುರುಶಾಂತಪ್ಪ ಯಲಗಚ್ಚಿನ, ಡಿಮ್ಹಾನ್ಸ್ ನಿರ್ದೇಶಕ ಡಾ. ಅರುಣಕುಮಾರ ಚವ್ಹಾಣ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು ಇದ್ದರು.