

ಹನೂರು: ತಾಲೂಕಿನ ಗಡಿಯಂಚಿನ ಬೈಲೂರು ಗ್ರಾಮದಲ್ಲಿ ಮಾರಮ್ಮನ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ರಾತ್ರಿ ಭಕ್ತರು ದೇವಿಗೆ ಎಳನೀರು ಮಜ್ಜನ ಸೇವೆಯನ್ನು ನೆರವೇರಿಸಿದರು.
ಯುಗಾದಿ ಹಬ್ಬದ ಬಳಿಕ ಬೈಲೂರು, ಹೊಸಪಾಳ್ಯ, ಕೆರೆದೊಡ್ಡಿ, ಗಾಂಧಿನಗರ ಹಾಗೂ ಆಂಡಿಪಾಳ್ಯ ಗ್ರಾಮಗಳಿಗೆ 2 ದಿನಗಳವರೆಗೆ ನಡೆಯುವ ಜಾತ್ರೆ ಇದಾಗಿದ್ದು, ಜಾತ್ರೆಯ ಹಿನ್ನೆಲೆಯಲ್ಲಿ ಮಾರಮ್ಮನ ಮೂರ್ತಿಯನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಲಾಗಿತ್ತು. ದೇಗುಲವನ್ನು ತಳಿರು, ತೋರಣ ಹಾಗೂ ವಿದ್ಯುತ್ ದೀಪಗಳಿಂದ ಕಂಗೊಳಿಸುವಂತೆ ವ್ಯವಸ್ಥೆ ಮಾಡಲಾಗಿತ್ತು.
ಎಳನೀರಿನ ಮಜ್ಜನ ಸೇವೆ: ಈ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಸೋಮವಾರ ದೇಗುಲದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಆಗಮಿಸಿದ ಭಕ್ತರು ಹಣ್ಣುಕಾಯಿ ನೀಡಿ ಪೂಜೆ ಸಲ್ಲಿಸುವುದರ ಮೂಲಕ ದೇವರ ದರ್ಶನ ಪಡೆದರು. ಮಂಗಳವಾರ ರಾತ್ರಿ ಹರಕೆ ಹೊತ್ತ ಭಕ್ತರು ಮಾರಮ್ಮನಿಗೆ ಎಳನೀರಿನ ಮಜ್ಜನ ಸೇವೆ ನೆರವೇರಿಸಿದರು. ಈ ವೇಳೆ ಯುವಕರು ವಾದ್ಯದ ತಾಳಕ್ಕೆ ಕುಳಿದು ಕುಪ್ಪಳಿಸಿದರಲ್ಲದೆ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಅಲ್ಲದೆ ಗ್ರಾಮದ ಗುಡ್ಡೆಮಾರಮ್ಮ ದೇಗುಲದ ಮುಂಭಾಗ ಸೋಲಿಗರು ನೃತ್ಯ ಪ್ರದರ್ಶಿಸಿದರು. ಈ ಮೂಲಕ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ಜರುಗಿತು. ತಾಲೂಕಿನ ವಿವಿಧೆಡೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.