

ಕೊರಟಗೆರೆ: ದೇಶದಾದ್ಯಂತ ಅನ್ನದಾನ ಮಾಡುವ ಧಾರ್ಮಿಕ ಕ್ಷೇತ್ರಗಳು ಮಾದರಿಯಾಗುತ್ತಿರುವಂತೆ ಗೊರವನಹಳ್ಳಿಯೂ ಅದೇ ದಿಕ್ಕಿನಲ್ಲಿ ಬೆಳೆಯಬೇಕು ಎಂದು ಸಿದ್ದರಬೆಟ್ಟ ಬಾಳೆಹೊನ್ನೂರು ಖಾಸಾ ಶಾಖಾಮಠದ ಪೀಠಾಧ್ಯಕ್ಷ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ತಾಲೂಕಿನ ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯದಲ್ಲಿ ಗುರುವಾರ ನೂತನ ದಾಸೋಹ ಮಂದಿರ, ನವೀಕೃತ ಕಲ್ಯಾಣ ಮಂಟಪ ಮತ್ತು ದೇವಾಲಯ ಪ್ರಾಕಾರ ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ಭಾರತೀಯ ಸಂಸತಿಯ ಆಧಾರಶಿಲೆ, ದೇವಾಲಯಗಳಲ್ಲಿ ದಾಸೋಹ ವ್ಯವಸ್ಥೆ ಒಳಗೊಂಡು ಭಕ್ತರಿಗೆ ಅಗತ್ಯ ಸೇವೆ ವಿಸ್ತರಿಸಬೇಕು. ದಾಸೋಹ ನಿಲಯ ಎನ್ನುವ ಬದಲು ಅದನ್ನು ದಾಸೋಹ ಮಂದಿರ ಎನ್ನುವುದೇ ಸರಿ ಎಂದರು. ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮಕರ್ತ ಡಾ.ಜಿ.ಭೀಮಶೇಖರ ಜೋಶಿ ಮಾತನಾಡಿ, ದೇವಾಲಯಕ್ಕೆ ಬರುವ ಭಕ್ತರು ಎಲ್ಲರೂ ಒಂದೇ ಎನ್ನುವ ಭಾವ ಇರಬೇಕು, ಶುದ್ಧ ಮನಸ್ಸಿನಿಂದ ದೇವರ ದರ್ಶನ ಪಡೆಯಬೇಕು. ನಮ್ಮ ಬಳಿ ಎಲ್ಲ ಇದ್ದರೂ ದೇವರ ಮುಂದೆ ಶೂನ್ಯತೆ ಹೊಂದಿದಂತೆ ನಡೆಯಬೇಕು ಎಂದರು.
ಗೌರಿಗದ್ದೆಯ ಅವಧೂತ ವಿನಯ್ ಗುರೂಜಿ ಮಾತನಾಡಿ, ಕ್ಷೇತ್ರವು ದಾಸೋಹ ಸೇವೆಗೆ ಸೀಮಿತವಾಗಬಾರದು,ಇಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೂ ಆದ್ಯತೆ ನೀಡಬೇಕು. ಆಗ ಮಾತೆ ಕಮಲಮ್ಮ ಅವರ ಆಶಯವು ಸಂಪೂರ್ಣ ಸಾಕಾರಗೊಳ್ಳಲಿದೆ ಎಂದರು.
ಸ್ಥಳಿಯರ ನಿರಾಸೆ: ಕಾರ್ಯಕ್ರಮದಲ್ಲಿ ಗೊರವನಹಳ್ಳಿ ಶ್ರೀ ಮಹಾಲಕ್ಷಿ$್ಮ ಚಾರಿಟಬಲ್ ಟ್ರಸ್ಟ್ ಮೇಲೆ ಅನೇಕ ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದು ಕಂಡುಬಂತು. ಕಾರ್ಯಕ್ರಮದಿಂದ ಸ್ಥಳಿಯ ಭಕ್ತರು ದೂರವೇ ಉಳಿದಿದ್ದು ಟ್ರಸ್ಟ್ ಮೇಲಿನ ವಿಶ್ವಾಸ ಬಿರುಕು ಬಿಡುವ ಲಕ್ಷಣಗಳು ಗೋಚರಿಸುತ್ತಿದ್ದು, ಕಾರ್ಯಕ್ರಮ ಆಯೋಜನೆ ಅದ್ದೂರಿಯಾಗಿ ನಡೆದರೂ ಎಲ್ಲೆಡೆ ಅಸಮಾಧಾನದ ಮಾತುಗಳು ಕೇಳಿಬಂದ್ದವು. ಇತ್ತೀಚಿನ ದಿನಗಳಲ್ಲಿ ಟ್ರಸ್ಟ್ನಲ್ಲಿ ಧರ್ಮದರ್ಶಿಗಳಾಗಿ ಬೆಂಗಳೂರು ಮೂಲದವರ ಪ್ರಾಬಲ್ಯ ಹೆಚ್ಚುತ್ತಿರುವುದು ಸ್ಥಳಿಯರ
ಅಸಮಾಧಾನಕ್ಕೆ ಕಾರಣವಾಗಿದ್ದು, ಸ್ಥಳಿಯರಿಗೆ ಹೊಣೆಗಾರಿಕೆ ನೀಡಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಭಕ್ತರು ವಿಜಯವಾಣಿಗೆ ತಿಳಿಸಿದರು.
ಸರ್ಕಾರದ ಗಮನ ಅಗತ್ಯ
ಗೃಹ ಸಚಿವರು ಪ್ರತಿನಿಧಿಸುವ ಕ್ಷೇತ್ರದಲ್ಲಿ ಟ್ರಸ್ಟ್ ಪದಾಧಿಕಾರಿಗಳೇ ಹೇಳುವಂತೆ 40 ಲಕ್ಷ ರೂ. ವೆಚ್ಚಮಾಡಿ ಆಯೋಜನೆ ಮಾಡಿರುವ ಕಾರ್ಯಕ್ರಮದಲ್ಲಿ ಗೃಹ ಸಚಿವರೇ ಗೈರಾಗಿದ್ದು ಚರ್ಚೆಗೆ ಅವಕಾಶ ಕಲ್ಪಿಸಿದೆ. ಇಲ್ಲಿ ಯಾವ ರೀತಿ ಕಾರ್ಯಕ್ರಮ ನಡೆಯುತ್ತಿದೆೆ ಎನ್ನುವುದನ್ನು ಈಗಲಾದರೂ ಡಾ.ಜಿ.ಪರಮೇಶ್ವರ ಗಮನಹರಿಸಿ ದೇವಾಲಯದ ಸುತ್ತ ನಡೆಯುತ್ತಿರುವ ಬೆಳವಣಿಗೆಗಳನ್ನು ಪರಿಶೀಲಿಸಬೇಕು ಎಂದು ಸ್ಥಳಿಯರು ಒತ್ತಾಯಿಸುತ್ತಿದ್ದಾರೆ. ಟ್ರಸ್ಟ್ ನಿಲುವಿನಲ್ಲಿ ಬದಲಾವಣೆ ತರದೇ ಇದ್ದರೆ, ಮುಂದಿನ ದಿನಗಳಲ್ಲಿ ಭಕ್ತರ ಸಹಕಾರ ಕಳೆದುಕೊಂಡರೂ ಅಚ್ಚರಿಯಿಲ್ಲ ಎನ್ನುತ್ತಾರೆ ಸ್ಥಳಿಯರು.
ಗೊರವನಹಳ್ಳಿಯ ಕಮಲಮ್ಮನ ಭಕ್ತರ ಸಂಖ್ಯೆ ದಿನೇದಿನೆ ಹೆಚ್ಚುತ್ತಿದ್ದು, ದೇಶದಲ್ಲಿಯೇ ಕ್ಷೇತ್ರ ಹೆಸರು ಮಾಡುತ್ತಿದೆ. ಕ್ಷೇತ್ರ ಇನ್ನಷ್ಟು ಅಭಿವೃದ್ಧಿಯಾಗಬೇಕು. - ಡಾ.ಶ್ರೀ ಹನುಮಂತನಾಥ ಸ್ವಾಮೀಜಿ, ಪೀಠಾಧ್ಯಕ್ಷ ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠ