ಬಡ ಮಕ್ಕಳಿಗೆ ಸೇವಾ ತರಬೇತಿ

mbl
Published on

ಮುಳಬಾಗಿಲು: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ಪರ್ಧಾತ್ಮಕ ತರಬೇತಿ ಶೀಘ್ರದಲ್ಲೇ ಆರಂಭಿಸಲಾಗುವುದು. ತಾಲೂಕಿನ ಪ್ರತಿಭಾವಂತ ಬಡ ಮತ್ತು ದಲಿತ ವಿದ್ಯಾರ್ಥಿಗಳೂ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಆಯ್ಕೆಗೊಂಡು ಆಡಳಿತ ಸೇವೆ ನೀಡುವಂತಾಗಬೇಕು ಎಂದು ಶಾಸಕ ಸಮೃದ್ಧಿ ವಿ.ಮಂಜುನಾಥ್​ ಅಭಿಮತ ವ್ಯಕ್ತಪಡಿಸಿದರು.

ನಗರದ ಸರ್ಕಾರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾಲೇಜು ವಾರ್ಷಿಕೋತ್ಸವ ಹಾಗೂ ಕಾಲೇಜಿನಲ್ಲಿ ಶಾಸಕರ ಅನುದಾನದಲ್ಲಿ ನಿಮಾರ್ಣ ಮಾಡಿರುವ ಉಪಹಾರ ಗೃಹ ಉದ್ಘಾಟಿಸಿ ಮಾತನಾಡಿದ ಅವರು, ಕಾಲೇಜಿನಲ್ಲಿ ನೂತನವಾಗಿ ಕ್ಯಾಂಟೀನ್​ ಪ್ರಾರಂಭಿಸಲಾಗಿದ್ದು, ಅತ್ಯಾಧುನಿಕ ಸಭಾಂಗಣ, ಒಟ್ಟು 6.5 ಕೋಟಿ ರೂ. ವೆಚ್ಚದಲ್ಲಿ ತರಗತಿ ಕೊಠಡಿ ಹಾಗೂ ಕೊಳವೆ ಬಾವಿ ಕೊರೆಸಲಾಗಿದ್ದು, ಮತ್ತಷ್ಟು ಸೌಲಭ್ಯ ನೀಡಲಾಗುವುದು ಎಂದರು.

ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷನಾಗಿದ್ದು, ಕನಿಷ್ಠ ಐದು ಐಎಎಸ್​ ಅಥವಾ ಕೆಎಎಸ್​ ಪರೀಕ್ಷೆಗಳಲ್ಲಿ ಪಾಸಾಗಿ ನಾಗರಿಕ ಸೇವಾ ಹುದ್ದೆಗಳಿಗೆ ನೇಮಕವಾಗಲು ಬೆಂಗಳೂರು ಮತ್ತಿತರರ ಕಡೆಗಳಿಂದ ಉತ್ತಮ ತರಬೇತಿದಾರರನ್ನು ಕರೆಯಿಸಿ ಕಾಲೇಜಿನಲ್ಲಿ ಮುಂದಿನ ತಿಂಗಳಿನಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡಲಾಗುವುದು. ಹೀಗಾಗಿ ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಪಾಪಿಪಾಕಿಸ್ತಾನಕ್ಕೆ ಭಾರತೀಯ ಸೈನ್ಯದ ನಾರಿ ಶಕ್ತಿ ಕಾರ್ಯಚರಣೆ ನಡೆಸಿ ತಕ್ಕ ಪತ್ಯುತ್ತರ ನೀಡಿದ್ದು, ಅವರ ಮೂಲಕವೇ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡುವ ಮೂಲಕ ಕುತಂತ್ರಿಗಳ ಕಪಾಳ ಮೋಕ್ಷ ಮಾಡಿದ್ದಾರೆ. ಮಹಿಳಾ ಅಧಿಕಾರಿಗಳಾದ ಸೇನೆಯ ಕರ್ನಲ್​ ಸೋಫಿಯಾ ಖುರೇಶಿ, ಭಾರತೀಯ ವಾಯುಪಡೆಯ ವಿಂಗ್​ ಕಮಾಂಡರ್​ ವ್ಯೂಮಿಕಾ ಸಿಂಗ್​ ಅವರ ನೇತೃತ್ವದ ಮಹಿಳಾ ಸೈನಿಕರ ಪಾಕಿಸ್ತಾನ ಮತ್ತು ಉಗ್ರಗಾಮಿಗಳನ್ನು ಮುಗಿಸುವ ತಾಕತ್ತು ಇದೆ. ಇವರಂತೆ ವಿದ್ಯಾರ್ಥಿನಿಯರು ವೀರ ನಾರಿಯರು ಆಗಬೇಕೆಂದು ಸಮೃದ್ಧಿ ಸಲಹೆ ನೀಡಿದರು.

ತಹಸೀಲ್ದಾರ್​ ವಿ.ಗೀತಾ ಮಾತನಾಡಿ, ವಿದ್ಯಾರ್ಥಿಗಳು ಭವ್ಯವಾದ ಕನಸು ಕಟ್ಟಿಕೊಂಡು ಉತ್ತಮ ಗುಣಗಳನ್ನು ರೂಪಿಸಿಕೊಳ್ಳುವ ಮೂಲಕ ಉಜ್ವಲ ಬದುಕನ್ನು ರೂಪಿಸಿಕೊಳ್ಳಬೇಕು. ಗುರಿಯಿಲ್ಲದೆ ಏನನ್ನೂ ಸಾಧಿಸಲಾಗದು ಎಂದು ಹೇಳಿದರು.

ರಾಷ್ಟ್ರ ಪ್ರಶಸ್ತಿ ವಿಜೇತ ಜಾನಪದ ಕಲಾವಿದ ಮುನಿರೆಡ್ಡಿ, ಈ ನೆಲ, ಜಲ ವೆಂಕಟಾಚಲಪತಿ, ಮಿನಿ ಗದ್ದರ್​ ವತಿಯಿಂದ ಸಾಂಸತಿಕ ಕಾರ್ಯಕ್ರಮಗಳು ನಡೆದವು. ಇದೇ ಸಂಧರ್ಭದಲ್ಲಿ ನೂತನವಾಗಿ ಪಿಎಚ್​ಡಿ ಪದವಿ ಪಡೆದವರಿಗೆ ಸನ್ಮಾನ ಮಾಡಲಾಯಿತು.

ಸೇನೆಯ ಜತೆ ನಿಲ್ಲಬೇಕು

ಸರ್ಕಾರ ಮತ್ತು ಸೇನೆ ಆಪರೇಷನ್​ ಸಿಂಧೂರ ಮೂಲಕ ಪಾಕ್​ ಮೇಲೆ ಕಾರ್ಯಾಚರಣೆ ಕೈಗೊಂಡು ಉಗ್ರರ ನೆಲೆಗಳನ್ನು ಧ್ವಂಸ ಮಾಡಿವೆ. 100 ಕ್ಕೂ ಹೆಚ್ಚಿನ ಉಗ್ರರು ನಾಶವಾಗಿದ್ದಾರೆ. ಕಾಶ್ಮೀರದಲ್ಲಿ 26 ಹಿಂದು ಹೆಣ್ಣು ಮಕ್ಕಳ ಮುಂದೆ ಅವರ ಪತಿಯರನ್ನು ಗುಂಡಿಟ್ಟು ಹೆಣ್ಣು ಮಕ್ಕಳ ಸಿಂಧೂರ ಅಳಿಸಿದ ಭಯೋತ್ಪಾದಕರು ಸಂಹಾರವಾಗುವವರೆಗೂ ಆಪರೇಷನ್​ ಸಿಂಧೂರ ಕಾರ್ಯಾಚರಣೆ ಮುಂದುವರೆಯಲಿದೆ. ಭಾರತೀಯರೆಲ್ಲರೂ ದೇಶದ ಹಾಗೂ ಸೈನ್ಯದ ಜತೆಗೆ ನಿಲ್ಲಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net