ವೃದ್ಧರ ಸೇವೆ ದೇವರ ಸೇವೆಗೆ ಸಮಾನ

26bhr 2 (3)
Published on

ಬಾಳೆಹೊನ್ನೂರು: ವೃದ್ಧರು, ದೀನ ದಲಿತರ ಸೇವೆ ದೇವರ ಸೇವೆಗೆ ಸಮ ಎಂದು ಜೇಸಿಐ ಭಾರತದ ರಾಷ್ಟ್ರೀಯ ಉಪಾಧ್ಯಕ್ಷ ಪ್ರಜೀತ್ ವಿಶ್ವನಾಥನ್ ಹೇಳಿದರು.

ಪಟ್ಟಣದ ಜೇಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆಯಿಂದ ಸಂಗಮೇಶ್ವರಪೇಟೆಯ ಪ್ರೀತಾಂಜಲಿ ವೃದ್ಧಾಶ್ರಮಕ್ಕೆ ವಿವಿಧ ದಿನಸಿ ಪದಾರ್ಥಗಳನ್ನು ಹಸ್ತಾಂತರಿಸಿ ಮಾತನಾಡಿ, ಜೇಸಿ ಸಂಸ್ಥೆ ವಿಶ್ವದ ಯುವಜನರ ವ್ಯಕ್ತಿತ್ವ ವಿಕಸನದಲ್ಲಿ ತೊಡಗಿದ್ದು, 18ರಿಂದ 40 ವರ್ಷದೊಳಗಿನ ಯುವಜನರಿಗೆ ವಿವಿಧ ತರಬೇತಿ ನೀಡುವ ಮೂಲಕ ಸಮಾಜದಲ್ಲಿ ಸದೃಢ ಮನಸ್ಥಿತಿಯುಳ್ಳ ಯುವ ಸಂಪನ್ಮೂಲವನ್ನು ಸೃಷ್ಟಿಸುತ್ತಿದೆ ಎಂದರು.

ಯುವಜನರಿಗೆ ವ್ಯಕ್ತಿತ್ವ ವಿಕಸನದ ತರಬೇತಿಗಳನ್ನು ನೀಡಿದರೆ ಅವರು ಸಮಾಜದಲ್ಲಿ ಉನ್ನತ ನಾಯಕರಾಗುವುದರೊಂದಿಗೆ ಸಮಾಜಕ್ಕೆ ಹಲವು ಕೊಡುಗೆಗಳನ್ನು ನೀಡಲಿದ್ದಾರೆ. ಸೇವೆಗಳ ಮೂಲಕ ಜೇಸಿ ಸಂಸ್ಥೆ ಹೆಸರು ಸಮಾಜದಲ್ಲಿ ಚಿರಸ್ಥಾಯಿಯಾಗಿ ಉಳಿಯಲು ಸಾಧ್ಯವಿದೆ. ಸಂಸ್ಥೆ ಇನ್ನಷ್ಟು ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡಬೇಕು ಎಂದರು.

ಜೇಸಿಐ ಅಧ್ಯಕ್ಷ ಇಬ್ರಾಹಿಂ ಶಾಫಿ ಮಾತನಾಡಿ, ಜೇಸಿ ಸಂಸ್ಥೆಯಿಂದ ಮುಂದಿನ ದಿನಗಳಲ್ಲಿ ಆರೋಗ್ಯ, ಶಿಕ್ಷಣ, ಕ್ರೀಡೆ ಮುಂತಾದ ಕ್ಷೇತ್ರಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶವಿದೆ ಎಂದರು.

ಜೇಸಿ ವಲಯಾಧಿಕಾರಿ ಎನ್.ಶಶಿಧರ್, ವಲಯ ಅಧ್ಯಕ್ಷ ವಿಜಯ್‌ಕುಮಾರ್, ವಲಯ ಉಪಾಧ್ಯಕ್ಷ ಶಾಬಾಜ್ ಶೇಖ್, ಕಾರ್ಯದರ್ಶಿ ವಿ.ಅಶೋಕ್, ಪೂರ್ವಾಧ್ಯಕ್ಷ ಸುಧಾಕರ್, ಸಿ.ವಿ.ಸುನೀಲ್, ಹಿರಿಯ ಕ್ರೀಡಾಪಟು ಓ.ಡಿ.ಸ್ಟೀಫನ್, ಪ್ರೀತಾಂಜಲಿ ಆಶ್ರಮದ ಮುಖ್ಯಸ್ಥರಾದ ಜೂಲಿಯಾನ, ಆಂಟನಿಯೋಟ್ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net