

ಹೂವಿನಹಿಪ್ಪರಗಿ: ಜೀವನದಲ್ಲಿ ಯಾರ ಋಣ ಬೇಕಾದರೂ ತೀರಿಸಬಹುದು. ಆದರೆ ತಂದೆ&ತಾಯಿ ಋಣವನ್ನು ಎಷ್ಟು ಜನ್ಮ ತಾಳಿದರೂ ತೀರಿಸಲು ಸಾಧ್ಯವಿಲ್ಲ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು ಹೇಳಿದರು.
ಸಮೀಪದ ಸೊಲವಾಡಗಿ ಗ್ರಾಮದ ಹಿರೇಮಠ ಪರಿವಾರದ ವತಿಯಿಂದ ಹಮ್ಮಿಕೊಂಡ ವೇದಮೂರ್ತಿ ವೀರಯ್ಯ ಸ್ವಾಮಿಗಳ ಸಹಸ್ರ ಚಂದ್ರದರ್ಶನ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿ, ತಂದೆ ತಾಯಿಯನ್ನು ಸಂತೋಷದಿಂದ ಇಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ನಮಗೆ ಜನ್ಮ ಕೊಟ್ಟ ತಂದೆ ತಾಯಿಯರೇ ದೇವರು.
ಯಾವ ವ್ಯಕ್ತಿ ಪ್ರತಿದಿನ ತಪ್ಪದೆ ತಂದೆ ತಾಯಿ ಪಾದ ಮುಟ್ಟಿ ನಮಸ್ಕಾರ ಮಾಡುತ್ತಾರೋ ಅವರಿಗೆ ಜೀವನದಲ್ಲಿ ಇನ್ನೊಬ್ಬರ ಕಾಲು ಹಿಡಿಯುವ ಪ್ರಸಂಗ ಬರುವುದಿಲ್ಲ ಎಂದು ಮಾರ್ಮಿಕವಾಗಿ ಹೇಳಿದರು. ನಮಗೆ ಬೇರೆಯವರ ಮುಂದೆ ಕಟ್ಟಿ ನಿಂತುಕೊಳ್ಳುವ ಪರಿಸ್ಥಿತಿ ಬಂತು ಅಂದರೆ ಅದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ನಾವು ನಮ್ಮ ತಂದೆ ತಾಯಿಯರನ್ನ ಕಡೆಗಣಿಸಿದ್ದೇವೆ ಎಂದೇ ಅರ್ಥ. ನಾವು ತಂದೆ&ತಾಯಿಯರನ್ನು ಸರಿಯಾಗಿ ನೋಡಿಕೊಂಡರೆ ನಮಗೆ ಕಷ್ಟಗಳು ಬರುವುದಿಲ್ಲ ಎಂದರು.
ಸಾನ್ನಿಧ್ಯ ವಹಿಸಿದ್ದ ಕರಿಸಿದ್ಧೇಶ್ವರ ಶಿವಾಚಾರ್ಯರು ಮಾತನಾಡಿ, ನಮ್ಮ ಸುತ್ತಮುತ್ತಲಿನ ಗ್ರಾಮಗಳಿಗೆ ಜಗದ್ಗುರುಗಳು ಬಂದಿರಲಿಲ್ಲ. ಪ್ರಪ್ರಥಮ ಬಾರಿಗೆ ಜಗದ್ಗುರುಗಳು ಬಂದಿರುವುದು ನಮ್ಮ ನಿಮ್ಮೆಲ್ಲರ ಪುಣ್ಯ. ನಮ್ಮಲ್ಲಿಗೆ ಸಾಾತ್ ಶ್ರೀಶೈಲ ಮಲ್ಲಿಕಾರ್ಜುನನೇ ಧರೆಗಿಳಿದು ಬಂದಿದ್ದಾನೆ ಎಂದರು.
ಶ್ರೀಶೈಲ ಜಗದ್ಗುರುಗಳನ್ನು ಕುಂಭ ಕಲಶ ಹೊತ್ತ ಮಹಿಳೆಯರು, ವಿವಿಧ ವಾದ್ಯ ಮೇಳಗಳೊಂದಿಗೆ ಮೆರವಣಿಗೆ ಮೂಲಕ ಗ್ರಾಮದಲ್ಲಿ ಬರಮಾಡಿಕೊಳ್ಳಲಾಯಿತು. ಜಗದ್ಗುರುಗಳು ರೇವಣ ಸಿದ್ಧೇಶ್ವರ ಗದ್ದುಗೆ ಕಟ್ಟೆ ನವೀಕರಣಕ್ಕೆ ಅಡಿಗಲ್ಲು ನೆರವೇರಿಸಿದರು.
ವೇದಮೂರ್ತಿ ರಾಚಯ್ಯ ಹಿರೇಮಠ ನೇತೃತ್ವ ವಹಿಸಿದ್ದರು. ಕರಬಂಟನಾಳ ಶಿವಕುಮಾರ ಸ್ವಾಮಿಗಳು, ಇಟಗಿ ಹಿರೇಮಠದ ಮಹಾದೇವಯ್ಯ ಶಾಸ್ತ್ರಿಗಳು, ಶರಣ ಸೋಮನಾಳದ ನಮಠದ ಸ್ವಾಮಿಗಳು, ಢವಳಗಿಯ ಶಿವಯ್ಯ ಸ್ವಾಮಿಗಳು, ಸಜ್ಜಲಗುಡ್ಡದ ನಾಗಭೂಷಣಶಾಸ್ತ್ರಿಗಳು, ಕವಡಿಮಟ್ಟಿಯ ಬಸವಪ್ರಭು ಹಿರೇಮಠ, ಸಂಗಯ್ಯ ಶಾಸ್ತ್ರಿಗಳು, ಮುಂಖಂಡರಾದ ಪರಶುರಾಮ ಗುಂಡಗಿ, ಗೌಡಣ್ಣ ಪಾಟೀಲ, ಶ್ರೀಶೈಲ ಸೋಲವಾಡಗಿ, ರಮಜಾನ್ ಮುಜಾವರ, ಜಯವಾಡಗಿಯ ಸೋಮನಾಥ ಶಿವಪ್ಪ ಮುತ್ಯಾ ಟ್ರಸ್ಟ್ ಕಮಿಟಿಯವರು, ಅಯ್ಯಪ್ಪ ಸ್ವಾಮಿ ಭಕ್ತ ಮಂಡಳಿಯವರು, ಹಿರೇಮಠ ಬಂಧುಗಳು ಭಾಗವಹಿಸಿದ್ದರು.