

ಉಜಿರೆ: ಸಾಮಾಜಿಕವಾಗಿ ತೊಡಗಿಸಿಕೊಳ್ಳುವ ಸೇವಾ ಮನೋಭಾವ ವಿದ್ಯಾರ್ಥಿಗಳ ಕಲಿಕೆಯನ್ನು ಅರ್ಥಪೂರ್ಣಗೊಳಿಸುತ್ತದೆ ಎಂದು ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ.ಹರ್ಷೇಂದ್ರ ಕುಮಾರ್ ಅಭಿಪ್ರಾಯಪಟ್ಟರು.
ಉಜಿರೆಯ ಎಸ್.ಡಿ.ಎಂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸುವರ್ಣ ಸಂಭ್ರಮಾಚರಣೆಯ ಪ್ರಯುಕ್ತ ಶನಿವಾರ ಇಂದ್ರಪ್ರಸ್ಥ ಸಭಾಂಗಣದಲ್ಲಿ ಆಯೋಜಿತವಾದ ‘ಸುವರ್ಣ ಸಮ್ಮಿಲನ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎನ್‌ಎಸ್‌ಎಸ್ ಸ್ವಯಂಸೇವಕರು ಸ್ವತಃ ನಾಗರಿಕ ಪ್ರಜ್ಞೆ ಅಳವಡಿಸಿಕೊಳ್ಳುವುದರ ಜತೆಗೆ ಸಮಾಜಪರ ಮನೋಭಾವ ವಿಸ್ತಾರಗೊಳಿಸುವ ನಿಟ್ಟಿನಲ್ಲಿ ವಿಶೇಷ ಕೊಡುಗೆ ನೀಡುತ್ತಾರೆ ಎಂದರು. ಹಳ್ಳಿಗಳಲ್ಲಿ ಸೇವಾ ಕೈಂಕರ್ಯದೊಂದಿಗೆ ಸಾಮಾಜಿಕ ಕೆಲಸಗಳನ್ನು ನಿರ್ವಹಿಸಿದ ಎಸ್‌ಡಿಎಂ ಕಾಲೇಜಿನ ಎನ್‌ಎಸ್‌ಎಸ್ ಘಟಕ 36 ಪ್ರಶಸ್ತಿ ಪಡೆದಿರುವುದು ಪ್ರಶಂಸನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ರಾಷ್ಟ್ರೀಯ ಸೇವಾ ಯೋಜನೆಯ ರಾಜ್ಯ ಯೋಜನಾಧಿಕಾರಿ ಡಾ.ಪ್ರತಾಪ್ ಲಿಂಗಯ್ಯ ಎನ್.ಎಸ್.ಎಸ್. ಸಮಾಜಪರ ಆಲೋಚನಾ ಕ್ರಮಗಳ ವಿಶೇಷತೆಯನ್ನು ಪರಿಚಯಿಸಿ ಎನ್.ಎಸ್.ಎಸ್. ಸ್ವಯಂಸೇವಕರು ಸಮಾಜಕ್ಕೆ ಕೊಡುಗೆಗಳನ್ನು ಕೊಡುವುದರ ಕಡೆಗೆ ಹೆಚ್ಚು ಚಿಂತಿಸುತ್ತಾರೆ ಎಂದರು.
ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎ.ಕುಮಾರ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಡಾ.ಶೇಷಪ್ಪ ಕೆ. ಅಮೀನ್ ಮಾತನಾಡಿದರು. ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್ ಉಪಸ್ಥಿತರಿದ್ದರು.
ಬದುಕು ಕಟ್ಟೋಣ ಬನ್ನಿ ಸಂಸ್ಥೆಯ ಲಕ್ಷ್ಮೀ ಮೋಹನ್, ರವಿ ಕಟಪಾಡಿ ಅವರಿಗೆ ಸುವರ್ಣ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಿಂದಿನ ಅವಧಿಗಳಲ್ಲಿ ಎನ್‌ಎಸ್‌ಎಸ್ ಯೋಜನಾಧಿಕಾರಿಗಳಾಗಿದ್ದ ಡಾ.ಬಿ.ಎ.ಕುಮಾರ ಹೆಗ್ಡೆ, ಡಾ.ಸಂಪತ್‌ಕುಮಾರ್ ಎಸ್, ಡಾ.ಸತೀಶ್ಚಂದ್ರ ಎಸ್, ಡಾ.ಜಯಕುಮಾರ ಶೆಟ್ಟಿ, ಪ್ರೊ.ಡಿ.ಕೃಷ್ಣಮೂರ್ತಿ, ಪ್ರೊ.ಎಸ್.ಎನ್.ಕಾಕತ್ಕರ್, ಡಾ.ವಿಶ್ವನಾಥ ಪಿ, ಡಾ.ಎಂ.ಪಿ.ಶ್ರೀನಾಥ, ರೂಪಾರಾಣಿ, ಡಾ.ಭಾನುಪ್ರಕಾಶ್ ಬಿ, ಗಣೇಶ್ ವಿ ಶಿಂಧೆ, ಪ್ರೊ.ಆಲ್ಫೋನ್ಸಮ್ಮ, ಆಶಾಕಿರಣ, ಶಕುಂತಲಾ, ಡಾ.ಲಕ್ಷ್ಮೀನಾರಾಯಣ ಕೆ.ಎಸ್. ಅವರನ್ನು ಸನ್ಮಾನಿಸಲಾಯಿತು.‘ಸೇವಾ ಪಥ’ ವಿಶೇಷ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು.
ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಡಾ.ಮಹೇಶ್ ಕುಮಾರ್ ಶೆಟ್ಟಿ ಎಚ್ ಸ್ವಾಗತಿಸಿದರು. ಪ್ರೊ. ದೀಪಾ ಆರ್.ಪಿ ವಂದಿಸಿದರು. ಅಧ್ಯಾಪಕರಾದ ದೀಕ್ಷಿತ್ ರೈ ಹಾಗೂ ವಿದ್ಯಾರ್ಥಿನಿ ಸಿಂಚನ ಕಲ್ಲೂರಾಯ ನಿರೂಪಿಸಿದರು.
ಸುಧಾರಿತ ಸಮಾಜದ ಪರಿಕಲ್ಪನೆಯನ್ನು ವ್ಯಕ್ತಿಗತ ಗುಣಾತ್ಮಕ ಬದಲಾವಣೆಯ ಮೂಲಕ ಅನುಷ್ಠಾನಕ್ಕೆ ತರುವ ಶ್ರೇಷ್ಠ ಕಾರ್ಯಗಳ ಮೂಲಕ ರಾಷ್ಟ್ರೀಯ ಸೇವಾ ಯೋಜನೆಯು ಹೆಗ್ಗುರುತು ಮೂಡಿಸಿದೆ. ಡಾ.ಬಿ.ಎ.ಕುಮಾರ ಹೆಗ್ಡೆ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ
ಡಾ.ಬಿ.ಎ.ಕುಮಾರ ಹೆಗ್ಡೆ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ