

ಅಥಣಿ: ಸ್ವಾಮಿತ್ವ ಯೋಜನೆಯಡಿ ಪರವಾನಗಿ ಪಡೆದ ಭೂಮಾಪಕರನ್ನು ಕೈಬಿಡಬೇಕು ಎಂದು ಆಗ್ರಹಿಸಿ ರಾಜ್ಯ ಪರವಾನಗಿ ಭೂ ಮಾಪಕರ ಸಂಘದ ಮಾರ್ಗದರ್ಶನದ ಮೇರೆಗೆ ಅಥಣಿ ಮತ್ತು ಕಾಗವಾಡ ತಾಲೂಕಿನ ಪದಾಧಿಕಾರಿಗಳು ಸೋಮವಾರ ಪಟ್ಟಣದ ಭೂಮಾಪನ ಇಲಾಖೆಯ ಸಹಾಯಕ ನಿರ್ದೇಶಕ ಪುನೀತ ಪಾಸೋಡಿ ಅವರಿಗೆ ಮನವಿ ಸಲ್ಲಿಸಿದರು.
ಸಂಘದ ತಾಲೂಕಾಧ್ಯಕ್ಷ ಜಿ.ಪಿ.ಮಹೇಶ ಮಾತನಾಡಿ, ತರಬೇತಿ ಮತ್ತು ಸೇವಾಭದ್ರತೆ ಬಗ್ಗೆ ರಾಜ್ಯ ಸಂಘದೊಂದಿಗೆ ಆಯುಕ್ತರು ಚರ್ಚಿಸದೆ ನೇರವಾಗಿ ಸ್ವಾಮಿತ್ವ ಯೋಜನೆಯಡಿ ಪರವಾನಗಿ ಪಡೆದ ಭೂಮಾಪಕರನ್ನು ನಿಯೋಜಿಸಿ ಚಟುವಟಿಕೆ ಆರಂಭಿಸಿದ್ದಾರೆ. 15 ವರ್ಷಗಳಿಂದ ಭೂಮಾಪನ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ನಮಗೆ ಸೇವಾ ಭದ್ರತೆ ಇಲ್ಲ. ಸರ್ಕಾರಿಂದ ಅಗತ್ಯ ಸೌಲಭ್ಯ ಸಿಗುತ್ತಿಲ್ಲ. ಇದರಿಂದ ಕುಟುಂಬ ನಿರ್ವಹಣೆ ಸಮಸ್ಯೆಯಾಗಿದೆ. ಸರ್ಕಾರ ನಮ್ಮ ಕಡೆ ಇನ್ನಾದರೂ ಗಮನ ಹರಿಸಬೇಕು ಎಂದು ಆಗ್ರಹಿಸಿದರು.
ಬಾಕಿ ವೇತನ ನೀಡಿ: ಸರ್ಕಾರದ ಮಹತ್ವಾಕಾಂಕ್ಷಿ ಪೋಡಿ ಮುಕ್ತ ಅಭಿಯಾನ ಯೋಜನೆಯಡಿ ಪರವಾನಗಿ ಪಡೆದ ಭೂಮಾಪಕರನ್ನು ಬಳಸಿಕೊಂಡು ಸರ್ಕಾರದ ಯೋಜನೆ ಅನುಷ್ಠಾನಗೊಳಿಸ ಲಾಗುತ್ತಿದೆ. ಆದರೆ, ಯೋಜನೆ ಅನುಷ್ಠಾನಕ್ಕೆ ಶ್ರಮಿಸುತ್ತಿರುವ ಭೂಮಾಪಕರಿಗೆ 4 ತಿಂಗಳಿಂದ ವೇತನ ನೀಡಿಲ್ಲ. ಬಾಕಿ ವೇತನ ನೀಡಬೇಕು ಎಂದು ಆಗ್ರಹಿಸಿದರು. ಸಂಘದ ಪದಾಧಿಕಾರಿಗಳು ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು. ಪಿ.ಆರ್.ಷಣ್ಮುಕಪ್ಪ, ಎಸ್.ಕೆ.ಗಂಗಾಧರ, ಆರ್.ರವಿಕುಮಾರ, ಕೆ.ಎಂ.ಚೇತನ, ಶಕ್ತಿಕುಮಾರ ಹಂಚಿನಮನಿ, ಕೆ.ಎಸ್.ಅನಿಲ, ಟಿ.ಎಸ್.ಯೋಗಾನಂದ ಇದ್ದರು.