ನನೆಗುದಿಗೆ ಬಿದ್ದಿದೆ ಹೆದ್ದಾರಿ ಅಗಲೀಕರಣ : ನೆಲ್ಯಾಡಿಯಲ್ಲಿ ಅತಂತ್ರ ಸ್ಥಿತಿ : ಸ್ಥಳೀಯರ ಆಕ್ರೋಶ

New Project (17)
Published on

ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ ನೆಲ್ಯಾಡಿ ಪರಿಸರದಲ್ಲಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ನನೆಗುದಿಗೆ ಬಿದ್ದಿದೆ. ಓವರ್‌ಪಾಸ್ ರಸ್ತೆ ನಿರ್ಮಾಣವಾಗಲಿ, ಅಂಡರ್‌ಪಾಸ್ ಕಾಮಗಾರಿಯಾಗಲಿ ನಡೆಯದೆ ಅತಂತ್ರ ಸ್ಥಿತಿಯಲ್ಲಿದೆ. ಕಲ್ಲಡ್ಕದಂತೆ ಪ್ಲೈಓವರ್ ನಿರ್ಮಿಸುವಂತೆ ನೆಲ್ಯಾಡಿ ಪ್ರಮುಖರು ಪ್ರತಿಭಟನೆ ನಡೆಸಿದ ಬಳಿಕ ಕಾಮಗಾರಿ ಸ್ಥಗಿತಗೊಳಿಸಿದ ಗುತ್ತಿಗೆದಾರ ಸಂಸ್ಥೆ ಬಳಿಕ ನೆಲ್ಯಾಡಿಯತ್ತ ಗಮನಹರಿಸಿಲ್ಲ. ನೆಲ್ಯಾಡಿಯಲ್ಲಿ ಓವರ್‌ಪಾಸ್ ರಸ್ತೆ ನಿರ್ಮಾಣ ಕಾರ್ಯ ಶೇ.60ರಷ್ಟು ಪೂರ್ಣಗೊಂಡಿದ್ದಾಗ ಊರಿನ ಮಧ್ಯೆ ಕೋಟೆ ನಿರ್ಮಿಸಿದಂತಾಗಿ ರಸ್ತೆ ಒಂದು ಪಾರ್ಶ್ವದ ಮಂದಿಗೆ ಇನ್ನೊಂದು ಪಾರ್ಶ್ವ ಕಾಣದ ಸ್ಥಿತಿ ನಿರ್ಮಾಣವಾಗಿತ್ತು. ಕಲ್ಲಡ್ಕದಂತಹ ಪ್ಲೈಓವರ್ ವ್ಯವಸ್ಥೆ ಬೇಕೆಂದು ಪ್ರತಿಭಟನೆ ಕೈಗೊಂಡು, ಪ್ಲೈಓವರ್ ಅಲ್ಲದೆ ಬೇರೆ ಕಾಮಗಾರಿ ನಡೆಸಬಾರದು ಎಂದು ಎಚ್ಚರಿಸಿದ್ದರು. ಗುತ್ತಿಗೆದಾರ ಸಂಸ್ಥೆ ಕಾಮಗಾರಿ ಸ್ಥಗಿತಗೊಳಿಸಿ ನಿರ್ಗಮಿಸಿತ್ತು. ಕಾಮಗಾರಿ ನಡೆಯದೆ, ಸುರಿಯುವ ಭಾರಿ ಮಳೆಗೆ ಸರ್ವೀಸ್ ರಸ್ತೆ ತೋಡಿನಂತಾಗಿ ಸವಾರರನ್ನು ಕಂಗಾಲಾಗಿಸಿದೆ. ನಾಯಕರ ವರ್ತನೆಗೆ ಅಸಮಾಧಾನ: ಕೇಂದ್ರ ಸರ್ಕಾರದ ಅನುಮೋದನೆಯಂತೆ ಕಾಮಗಾರಿ ನಡೆಸಬೇಕಾದ ಅನಿವಾರ್ಯತೆ ಗುತ್ತಿಗೆದಾರ ಸಂಸ್ಥೆಗಿದೆ. ಈ ಕೆಲಸದ ವಿರುದ್ಧ ಸ್ಥಳೀಯರು ಪ್ರತಿರೋಧ ಒಡ್ಡಿದರೆಂದು ಕೆಲಸ ಸ್ಥಗಿತಗೊಳಿಸಲು ಸೂಚಿಸಿದ ಕೆಲವು ನಾಯಕರು, ಸ್ಥಳೀಯರಿಗೆ ವಸ್ತುಸ್ಥಿತಿ ಅರ್ಥೈಸಲು ವಿಫಲರಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತವಾಗಿದೆ. ಓವರ್‌ಪಾಸ್ ರಸ್ತೆಗಾಗಿ ನಿರ್ಮಿಸಲಾದ ಸರ್ವೀಸ್ ರಸ್ತೆಯನ್ನೂ ಕೆಲವು ಸ್ವಹಿತಾಸಕ್ತಿದಾರರ ಒತ್ತಾಸೆಯಂತೆ ಅಗಲ ಕಿರಿದುಗೊಳಿಸಿ ನಿರ್ಮಿಸಿದ ಪರಿಣಾಮ ಇಕ್ಕಟ್ಟಾಗಿ ನಿರ್ಮಿಸಲ್ಪಟ್ಟಿದೆ. ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪರಿಹಾರ ಧನ ಪಡೆದರೂ ಅಂಗಡಿ ಮುಂಗಟ್ಟುಗಳನ್ನು ಯಥಾಸ್ಥಿತಿಯಲ್ಲಿ ಉಳಿಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಸಂಸದರ ಜತೆ ಮಾತುಕತೆ ಸಂಸದ ಬ್ರಿಜೇಶ್ ಚೌಟ ಸ್ಥಳೀಯರೊಂದಿಗೆ ಮಾತುಕತೆ ನಡೆಸಿದ್ದು, ಅವರು ಕಾಮಗಾರಿ ಸ್ವರೂಪ ಬದಲಾಯಿಸಲು ಸಾಧ್ಯವಿಲ್ಲ ಎಂದು ಮನವರಿಕೆ ಮಾಡಿದ್ದಾರೆ. ಜನತೆಯ ಅನುಕೂಲಕ್ಕಾಗಿ ಹೆಚ್ಚುವರಿ ಅಂಡರ್‌ಪಾಸ್ ನಿರ್ಮಿಸಲು ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಪ್ರಸ್ತಾವನೆ ಕಳುಹಿಸಲು ಸೂಚಿಸಿದ್ದಾರೆ. ಆದರೆ ಒಂದು ಬಾರಿ ಅನುಮೋದನೆ ಪಡೆದ ಕಾಮಗಾರಿಯಲ್ಲಿ ಬದಲಾವಣೆಗೆ ಪ್ರಾಧಿಕಾರದ ಒಪ್ಪಿಗೆ ಪಡೆಯಬೇಕಾಗಿರುವುದು ಅವಶ್ಯ.

ಅಂಡರ್‌ಪಾಸ್‌ಗೆಂದು ಬಳಸಿರುವ ಕಬ್ಬಿಣದ ರಾಡ್‌ಗಳು ತುಕ್ಕು ಹಿಡಿಯಲಾರಂಭಿಸಿವೆ. ಮಳೆ ಬಂದಾಗ ಸರ್ವೀಸ್ ರಸ್ತೆಗಳಲ್ಲಿ ನೀರು ತುಂಬಿ ತೋಡಿನಂತಾಗುತ್ತದೆ. ಮಳೆ ನಿಂತಾಗ ಕೆಸರುಮಯವಾಗಿ ಜಾರುತ್ತಿದೆ. ಒಟ್ಟಾರೆ ಯೋಗ್ಯ ರಸ್ತೆಯೇ ಇಲ್ಲವಾಗಿದೆ ರವೀಂದ್ರ ಟಿ. ನಿವೃತ್ತ ಪ್ರಾಧ್ಯಾಪಕ https://www.vijayavani.net/painting-competition-at-banam-high-school https://www.vijayavani.net/construction-on-kanvatheertha-beach-at-a-cost-of-rs-crore

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net