

ಬೈಂದೂರು: ತಾಲೂಕು ಕೇಂದ್ರ ಬೈಂದೂರಿನಲ್ಲಿ ಸಂಚಾರ ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಬೈಂದೂರಿನ ರಥಬೀದಿ ರಸ್ತೆಯಲ್ಲಿ ಜನ ವಾಹನ ಚಲಾಯಿಸಲು ಹರಸಾಹಸಪಡಬೇಕಾಗಿದೆ. ಸುಗಮ ಸಂಚಾರಕ್ಕೆ ಸರ್ವೀಸ್ ರಸ್ತೆಗಳನ್ನು ನಿರ್ಮಿಸಿದ್ದರೂ, ಈ ರಸ್ತೆ ಬೈಕ್‌ಗಳ ಪಾರ್ಕಿಂಗ್ ತಾಣವಾಗಿಬಿಟ್ಟಿದೆ.
ಪರ್ಯಾಯ ವ್ಯವಸ್ಥೆ ಇದ್ದರೂ ಸ್ಥಳೀಯಾಡಳಿತ ಇಲ್ಲಿನ ಹೂವಿನ ಅಂಗಡಿಯವರನ್ನು ರಸ್ತೆ ಬದಿಯಿಂದ ತೆರವು ಮಾಡದೆ ಇರುವುದು ಟ್ರಾಫಿಕ್ ಸಮಸ್ಯೆ ಹೆಚ್ಚುವಂತೆ ಮಾಡಿದೆ. ಸುಸಜ್ಜಿತ ಮಾರುಕಟ್ಟೆ ಇದ್ದರೂ ತರಕಾರಿ, ಹಣ್ಣಿನ ಅಂಗಡಿಗಳು ಮುಖ್ಯರಸ್ತೆಯ ಫುಟ್‌ಪಾತ್‌ನಲ್ಲಿ ವ್ಯಾಪಾರ ಆರಂಭಿಸಿದ್ದು, ಇದರಿಂದ ಪಾದಚಾರಿಗಳ ಸಂಚಾರಕ್ಕೂ ಸಂಚಕಾರ ಆಗುತ್ತಿದೆ. ವಾಹನ ಚಾಲಕರಿಂದ ಸಂಚಾರ ನಿಯಮ ಉಲ್ಲಂಘನೆ, ದ್ವಿಚಕ್ರ, ಕಾರು, ಆಟೋ, ಕಾರುಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುತ್ತಿರುವುದು ಕೂಡ ಸಂಚಾರ ಸಮಸ್ಯೆ ತಂದೊಡ್ಡುತ್ತಿದೆ.
ಟ್ರಾಫಿಕ್ ಠಾಣೆಯೂ ಇಲ್ಲ
ಬೈಂದೂರಿನಲ್ಲಿ ಪ್ರತಿನಿತ್ಯ ವಾಹನ ಸುಗಮ ಸಂಚಾರಕ್ಕೆ ಸಮಸ್ಯೆಯಾಗುತ್ತಿದ್ದರೂ, ಸಂಚಾರ ವ್ಯವಸ್ಥೆ ನಿಯಂತ್ರಿಸಲು ಅಗತ್ಯ ಸಂಚಾರಿ ಠಾಣೆ ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ. ಇಲ್ಲಿಗೆ ಸಂಚಾರಿ ಪೊಲೀಸ್ ಠಾಣೆ ಅಗತ್ಯವಿದ್ದು, ತಿಂಗಳಿಗೊಮ್ಮೆಯಾದರೂ ರಸ್ತೆ ಸುರಕ್ಷತೆ ಹಾಗೂ ನಿಯಮ ಕುರಿತ ಕಾರ್ಯಾಗಾರ ನಡೆಸಿ ವಾಹನ ಸವಾರರಿಗೆ ಸಂಚಾರ ನಿಯಮಗಳ ಅರಿವು ಮೂಡಿಸುವ ಕೆಲಸವಾಗಬೇಕಿದೆ. ಸಂಬಂಧಪಟ್ಟ ಇಲಾಖೆ, ಸ್ಥಳೀಯಾಡಳಿತ ಮತ್ತು ಜಿಲ್ಲಾಡಳಿತ ಈ ಬಗ್ಗೆ ಶೀಘ್ರ ಗಮನ ಹರಿಸಬೇಕಿದೆ.
ಸಮಸ್ಯೆಯ ಆಗರ ರಥಬೀದಿ
ಬೈಂದೂರು ಪಟ್ಟಣ ಪ್ರದೇಶ ಸೇರಿದಂತೆ ವಿವಿಧ ಕಡೆ ಸಂಪರ್ಕ ಕಲ್ಪಿಸುವುದು ಇಲ್ಲಿನ ರಥಬೀದಿ. ಆದರೆ ರಥಬೀದಿಯ ಎರಡು ಕಡೆ ಅಂಗಡಿಗಳು ಹಾಗೂ ವಾಹನಗಳ ಅಸಮರ್ಪಕ ಪಾರ್ಕಿಂಗ್‌ನಿಂದ ಇತರ ವಾಹನಗಳಿಗೆ ಹಾಗೂ ಸಾರ್ವಜನಿಕರಿಗೆ ಸಂಚರಿಸುವುದು ಕಷ್ಟವಾಗಿದೆ. ಬೈಂದೂರು ಪೇಟೆ ಭಾಗದಲ್ಲಿ ಕೆಲವು ಅಂಗಡಿ ಹಾಗೂ ಗೂಡಂಗಡಿಗಳು ಮುಖ್ಯ ರಸ್ತೆಗಳ ಇಕ್ಕೆಲಗಳನ್ನು ಹಾಗೂ ಚರಂಡಿಗಳನ್ನೂ ನುಂಗಿದೆ. ಹಾಗಾಗಿ ಉಳಿದ ಭಾಗದಲ್ಲಿ ಒಂದೆಡೆ ಪಾರ್ಕಿಂಗ್ ವ್ಯವಸ್ಥೆ ಮತ್ತು ವಾಹನಗಳ ಸಂಚಾರ ದಟ್ಟಣೆಯಿಂದ ಆಗಿಂದಾಗ್ಗೆ ರಸ್ತೆ ಬ್ಲಾಕ್ ಆಗುತ್ತಿದೆ.
ಸುಂದರ ಹಾಗೂ ಸ್ವಚ್ಛ ಪೇಟೆ ಮಾಡುವ ಸದುದ್ದೇಶ ನಮಗಿದ್ದರೂ ಸಿಬ್ಬಂದಿ ಕೊರತೆ ಇರುವುದರಿಂದ ಎಲ್ಲ ಕಡೆ ಕ್ಲಪ್ತ ಸಮಯಕ್ಕೆ ತಲುಪಲು ಕಷ್ಟವಾಗುತ್ತಿದೆ. ವಾರದಲ್ಲಿ ಮೂರು ದಿನ ಒಂದು ಕಡೆ ಹಾಗೂ ಮೂರು ದಿನ ಇನ್ನೊಂದು ಕಡೆಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಚಿಂತಿಸಲಾಗುತ್ತಿದೆ. ಅಕ್ರಮಗಳನ್ನು ತೆರವುಗೊಳಿಸಲು ತಹಸೀಲ್ದಾರರು ಕ್ರಮ ಕೈಗೊಂಡರೆ ಪೊಲೀಸ್ ಇಲಾಖೆ ಸಹಕಾರ ನೀಡಲಿದೆ.
ಸಂಗೀತಾ, ಠಾಣಾಧಿಕಾರಿ ಬೈಂದೂರು ಪೊಲೀಸ್ ಠಾಣೆ