ಸರ್ವೀಸ್ ರಸ್ತೆ ಅಯೋಮಯ

Service road is in trouble
Published on

ಶಿಗ್ಗಾಂವಿ: ಪಟ್ಟಣಕ್ಕೆ ಹೊಂದಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ ಬಳಿಯ ಪ್ರಮುಖ ಸರ್ವೀಸ್ ರಸ್ತೆ ತಗ್ಗು-ಗುಂಡಿಗಳಿಂದ ತೀವ್ರ ಹಾಳಾಗಿದ್ದು, ವಾಹನ ಸವಾರರು ನಿತ್ಯ ಪರದಾಡುವಂತಾಗಿದೆ.

ಶಿಗ್ಗಾಂವಿ ಪಟ್ಟಣ ಪ್ರಮುಖ ವಾಣಿಜ್ಯ ಕೇಂದ್ರವಾಗಿ ಮಾರ್ಪಟ್ಟಿದೆ. ಪ್ರತಿನಿತ್ಯ ವ್ಯಾಪಾರ-ವಹಿವಾಟಿಗೆಂದು ಸಾವಿರಾರು ವಾಹನಗಳು ಪಟ್ಟಣಕ್ಕೆ ಬಂದು ಹೋಗುತ್ತವೆ. ಆದರೆ, ಹುಬ್ಬಳ್ಳಿ, ಹಾವೇರಿ ಭಾಗದ ರಾಷ್ಟ್ರೀಯ ಹೆದ್ದಾರಿ ಮಾರ್ಗದಿಂದ ಸರ್ವಿಸ್ ರಸ್ತೆಗಳ ಮೂಲಕ ಪಟ್ಟಣಕ್ಕೆ ಬರುವ ವಾಹನಗಳು, ಸ್ಥಳೀಯವಾಗಿ ಓಡಾಡುವ ವಾಹನಗಳು, ಬೈಕ್ ಸವಾರರು ಪ್ರತಿದಿನವೂ ನರಕಯಾತನೆ ಅನುಭವಿಸುವಂತಾಗಿದೆ.

ಹಾವೇರಿಯಿಂದ ಶಿಗ್ಗಾಂವಿಗೆ ಬರುವ ಐ.ಬಿ. ಪಕ್ಕದಲ್ಲಿ, ಕುರ್ಸಾಪುರ ಮಾರ್ಗ ಸಂರ್ಪಸುವ ಅಂಡರ್​ಪಾಸ್ ಬಳಿ, ತಹಸೀಲ್ದಾರ್ ಕಚೇರಿಗೆ ಹೋಗುವ ಮತ್ತು ಹುಬ್ಬಳ್ಳಿಗೆ ಮಾರ್ಗದ ಹೆದ್ದಾರಿ ಎರಡೂ ಬದಿಯ ಸರ್ವಿಸ್ ರಸ್ತೆಗಳಲ್ಲಿನ ಡಾಂಬರ್ ಕಿತ್ತು, ಗುಂಡಿಗಳು ನಿರ್ವಣವಾಗಿವೆ.

ಅವೈಜ್ಞಾನಿಕ ಕಾಮಗಾರಿ: ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ರಸ್ತೆ ಕಾಮಗಾರಿ ನಿರ್ಮಾಣ ಮಾಡುವಾಗ ನಿರ್ಮಾಣ ಮಾಡಿರುವ ಸರ್ವಿಸ್ ರಸ್ತೆಗಳ ಮೇಲೆ ನೀರು ಹರಿಯದಂತೆ ಅಕ್ಕಪಕ್ಕದಲ್ಲಿ ಸುಸರ್ಜಿತವಾದ ಚರಂಡಿ ನಿರ್ಮಾಣ ಮಾಡದಿರುವುದು ರಸ್ತೆ ಹಾಳಾಗಲು ಪ್ರಮುಖ ಕಾರಣವಾಗಿದೆ. ಪ್ರತಿವರ್ಷವೂ ಮಳೆಗಾಲದಲ್ಲಿ ಸರ್ವೀಸ್ ರಸ್ತೆಗಳಲ್ಲಿ ನೀರು ಹರಿದು ಅವು ಹಾಳಾಗುತ್ತಿವೆ. ಎಲ್ಲೆಂದರಲ್ಲಿ ತಗ್ಗು ಗುಂಡಿಗಳು ನಿರ್ವಣವಾಗಿ ನಿತ್ಯ ಅನಾಹುತಗಳು ಸಂಭವಿಸುತ್ತಿವೆ. ರಸ್ತೆ ದುರಸ್ತಿಗೆ ಹೆದ್ದಾರಿ ಪ್ರಾಧಿಕಾರ ನಿರ್ಲಕ್ಷ್ಯ ತೋರುತ್ತಿದ್ದು, ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಶಾಸಕರ ಸೂಚನೆ ಪಾಲನೆಗೆ ನಿರ್ಲಕ್ಷ್ಯ: ಹೆದ್ದಾರಿಯ ಸರ್ವಿಸ್ ರಸ್ತೆಗಳಲ್ಲಿ ಅವಘಡಗಳು ಹೆಚ್ಚಾಗುತ್ತಿವೆ. ಎರಡು ತಿಂಗಳ ಹಿಂದೆ ಸ್ಥಳೀಯ ಶಾಸಕ ಯಾಸೀರಖಾನ್ ಪಠಾಣ ಅವರು ರಸ್ತೆಯ ಅವ್ಯವಸ್ಥೆ ಖುದ್ದಾಗಿ ಪರಿಶೀಲಿಸಿದ್ದರು. ಅಲ್ಲದೆ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಸಂರ್ಪಸಿ, ಶೀಘ್ರದಲ್ಲಿ ದುರಸ್ತಿಗೆ ಸೂಚಿಸಿದರೂ ಅಧಿಕಾರಿಗಳು ಸರ್ವೀಸ್ ರಸ್ತೆಗಳ ಅಭಿವೃದ್ಧಿಗೆ ಮುಂದಾಗುತ್ತಿಲ್ಲ.

ಸುಮಾರು ವರ್ಷಗಳಿಂದ ಇಲ್ಲಿನ ಸರ್ವೀಸ್ ರಸ್ತೆಗಳಲ್ಲಿನ ಸಂಚಾರ ದುಸ್ತರವಾಗಿದೆ. ಅಧಿಕಾರಿಗಳು ಮಾತ್ರ ಕಂಡು ಕಾಣದಂತೆ ವರ್ತಿಸುತ್ತಿದ್ದಾರೆ. ಮಳೆಗಾಲದಲ್ಲಿ ಇಲ್ಲಿ ಹೆಚ್ಚು ಅನಾಹುತಗಳು ಸಂಭವಿಸುತ್ತಿವೆ. ಕೂಡಲೇ ಅಧಿಕಾರಿಗಳು ಸರ್ವೀಸ್ ರಸ್ತೆಗಳ ಅಭಿವೃದ್ಧಿಗೆ ಮುಂದಾಗಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. | ಉಮೇಶಗೌಡ ಪಾಟೀಲ, ಸಾಮಾಜಿಕ ಕಾರ್ಯಕರ್ತ ಶಿಗ್ಗಾಂವಿ ಈಗಾಗಲೇ ಸರ್ವೀಸ್ ರಸ್ತೆಗಳ ಅವ್ಯವಸ್ಥೆಯನ್ನು ಖುದ್ದಾಗಿ ಪರಿಶೀಲಿಸಿದ್ದೇನೆ. ಶೀಘ್ರದಲ್ಲಿ ದುರಸ್ತಿ ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅವಘಡಗಳೇನಾದರೂ ಸಂಭವಿಸಿದರೆ ನೇರವಾಗಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೇ ಹೊಣೆಗಾರರು. ಮತ್ತೊಮ್ಮೆ ಸ್ಥಳಕ್ಕೆ ಅಧಿಕಾರಿಗಳನ್ನು ಕರೆಯಿಸಿ ಶೀಘ್ರದಲ್ಲಿ ರಸ್ತೆ ದುರಸ್ತಿಗೆ ಸೂಚಿಸುತ್ತೇನೆ. | ಯಾಸೀರಖಾನ್ ಪಠಾಣ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net