

ಬಂಗಾರಪೇಟೆ: ತಾಲೂಕಿನ ಹುಣಸಿನಹಳ್ಳಿಯಲ್ಲಿ ಬಂಗಾರಪೇಟೆ ಮತ್ತು ಬೂದಿಕೋಟೆಗೆ ಸಂಪರ್ಕ ಕಲ್ಪಿಸುವ ರೈಲ್ವೆ ಮೇಲ್ಸೇತುವೆ ಅವೈಜ್ಞಾನಿಕ ಕಾಮಗಾರಿಯಿಂದ ಸರ್ವೀಸ್ ರಸ್ತೆಯಲ್ಲಿ ಮಳೆ ನೀರು ನಿಂತು ಕೆರೆಯಂತಾಗಿದ್ದು, ನಾಗರಿಕರ ಸುಗಮ ಸಂಚಾರಕ್ಕೆ ಕಂಟಕ ಎದುರಾಗಿದೆ.
ಮೇಲ್ಸೇತುವೆ ಪಕ್ಕದಲ್ಲಿ ಐನೂರಹೊಸಳ್ಳಿ, ಒಂಬತ್ತುಗುಳಿ, ಕಾರಮಂಗಲ, ಹೊಸ ಮನೆಗಳು ಸೇರಿ ಹತ್ತಾರು ಗ್ರಾಮಗಳಿಗೆ ಕಲ್ಪಿಸುವ ಸರ್ವೀಸ್ ರಸ್ತೆ ಇದಾಗಿದ್ದು, ರಸ್ತೆಯಲ್ಲಿ ವಾಹನ ಸಂಚಾರ ಮತ್ತು ನಡೆದುಕೊಂಡು ಹೋಗುವುದು ದುಸ್ತರವಾಗಿದೆ. ದೊಡ್ಡ ದೊಡ್ಡ ವಾಹನಗಳು ಸಲೀಸಾಗಿ ಹೋದರೂ, ಬೈಕ್ನಲ್ಲಿ ಹೋಗುವರು, ಪಾದಚಾರಿಗಳ ನಿಂತ ಮಳೆ ನೀರನ್ನು ಮೈಮೇಲೆ ಎರಚಿಕೊಂಡು ಹೋಗಬೇಕಾದ ದುಸ್ಥಿತಿ ಎದುರಾಗಿದೆ.
ಬುಧವಾರ ರಾತ್ರಿ ಸುರಿದ ಮಳೆಗೆ ಸರ್ವೀಸ್ ರಸ್ತೆ ಜಲಾವೃತಗೊಳ್ಳುವಂತೆ ಆಗಿದೆ.
ಸರ್ವೀಸ್ ರಸ್ತೆಯಲ್ಲಿ ಮಳೆ ನೀರು ಹೋಗಲು ಎಡ ಪಕ್ಕದಲ್ಲಿ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ನೀರು ನಿಂತು ಕೆರೆಯಂತಾಗಿದೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ರಸ್ತೆ ಮೇಲೆ ನಿಂತಿರುವ ನೀರನ್ನು ತೆರುವುಗೊಳಿಸಲು ಗ್ರಾಮಸ್ಥರು ಆಗ್ರಹಿಸಿದ್ದಾರೆ.