

ರಾಯಬಾಗ: ಸೇವೆ ಕಾಯಂಗೊಳಿಸುವುದು, ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವುದು, ರಜೆ ಸೌಲಭ್ಯ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಗುತ್ತಿಗೆ ನೌಕರರು ಶುಕ್ರವಾರ ಸೇವೆಗೆ ಹಾಜರಾಗದೆ ಆಸ್ಪತ್ರೆ ಎದುರು ಪ್ರತಿಭಟಿಸಿದರು. ಸರ್ಕಾರ, ನಮ್ಮ ಬೇಡಿಕೆಗಳಿಗೆ ಈವರೆಗೂ ಸ್ಪಂದಿಸಿಲ್ಲ.
ನಮಗೆ ಸರ್ಕಾರದ ಎಲ್ಲ ಸೌಲತ್ತುಗಳು ಕಲ್ಪಿಸುವುದಕ್ಕೆ ಆರೋಗ್ಯ ಸಚಿವರು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ರೋಗಿಗಳ ಸೇವೆಗೆ ಹಾಗೂ ಆರೋಗ್ಯ ಇಲಾಖೆ ಯೋಜನೆ ಜನರಿಗೆ ತಲುಪಿಸುವುದಕ್ಕೆ ಗುತ್ತಿಗೆ ನೌಕರರನ್ನು ನೇಮಿಸಿಕೊಂಡಿರುವ ಇಲಾಖೆ, ಸೌಲಭ್ಯ ಕಲ್ಪಿಸದೆ ಸತಾಯಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗುತ್ತಿಗೆ ಮತ್ತು ಹೊರಗುತ್ತಿಗೆ ಎಂಬ ಜೀತ ಪದ್ಧತಿಯನ್ನು ಕೈ ಬಿಡಬೇಕು, ನೌಕರರಿಗೆ ಭರವಸೆಗಳು ಸಾಕು, ಬೇಡಿಕೆಗಳು ಈಡೇರಬೇಕು ಎಂಬ ಫಲಕಗಳನ್ನು ಹಿಡಿದು ಆಕ್ರೋಶ ವ್ಯಕ್ತಪಡಿಸಿದರು. ಗುತ್ತಿಗೆ ನೌಕರರನ್ನು ಕಾಯಂಗೊಳಿಸುವುದು ಸೇರಿ ನಮ್ಮ 14 ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ನಮ್ಮ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು. ಶ್ರೀಶೈಲ ಹೊಸುರ, ಕಾವೇರಿ ತಳವಾರ, ಶೈಲಾ ಕಾಂಬಳೆ, ಅಶ್ವಿನಿ ಕದಮ್, ಈಶ್ವರ ಕಾಂಬಳೆ, ಉಮೇಶ ಪರಾಂಜಪೆ, ಸಂಗೀತಾ ಭಜಂತ್ರಿ, ವಿರುಪಾಕ್ಷ ಕುರಣೆ, ಸುಮಿತ್ರಾ ಚೌಗಲಾ, ಶೋಭಾ ಮೇಳವಂಕಿ, ಸುಜಾತಾ ದಳವಾಯಿ, ಶಂಕರ ತೇಗೂರ, ಸವಿತಾ ಮಸಾಲಜಿ, ಶ್ರೀಧರ ಐಹೊಳೆ ಇತರರಿದ್ದರು.