

ಹನುಮಸಾಗರ: ಬಡವರ ಸೇವೆ ಮೂಲಕ ಪ್ರೀತಿ ವಿಶ್ವಾಸಗಳಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಹೇಳಿದರು.
ಪಟ್ಟಣದ ಸಜ್ಜನ ಆಸ್ಪತ್ರೆಯಲ್ಲಿ ವಿದ್ಯಾಶ್ರೀ ಸಮಗ್ರ ಅಭಿವೃದ್ಧಿ ಸಂಸ್ಥೆ, ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ ಮತ್ತು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್‌ರ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಹೃದಯ, ನರ ಹಾಗೂ ಮೂತ್ರಪಿಂಡ ರೋಗಗಳ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಬಡವರ ಸೇವೆ ಮಾಡುವುದು ತೃಪ್ತಿದಾಯಕ ಕೆಲಸ. ಉಳ್ಳವರು ಹಣ ನೀಡಿ ಚಿಕಿತ್ಸೆ ಪಡೆಯುತ್ತಾರೆ. ಆದರೆ, ಚಿಕಿತ್ಸೆ ಪಡೆಯಲು ಬಡವರಿಗೆ ಕಷ್ಟವಾಗುತ್ತದೆ. ಇವರ ಪ್ರೀತಿ, ವಿಶ್ವಾಸವನ್ನು ಸೇವಾ ಮನೋಭಾವದಿಂದ ಮಾತ್ರ ಗಳಿಸಲು ಸಾಧ್ಯ. ಹಣ ಅಂತಸ್ತಿನಿಂದಲ್ಲ ಎಂದರು.
ಸಪ್ತಗಿರಿ ಆಸ್ಪತ್ರೆ ವ್ಯವಸ್ಥಾಪಕ ರಾಜೇಶ ಮಾತನಾಡಿ, ಇಲ್ಲಿ ತಪಾಸಣೆ ಮಾಡಿ ಚಿಕಿತ್ಸೆ ಮತ್ತು ಔಷಧ ನೀಡಲಾಗುವುದು. ಶಸ್ತ್ರಚಿಕಿತ್ಸೆಯ ಅವಶ್ಯಕತೆ ಇದ್ದರೆ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯಲ್ಲಿ ಉಚಿತ ಶಸ್ತ್ರಚಿಕತ್ಸೆ ಮತ್ತು ಬಸ್ ಚಾರ್ಜ್, ಊಟ, ವಸತಿ ನೀಡಲಾಗುವುದು ಎಂದು ತಿಳಿಸಿದರು.
ತಾಪಂ ಸದಸ್ಯೆ ಶಕೀಲಾಬೇಗಂ ಆಸೀಪ್ ಡಾಲಾಯತ್, ಗ್ರಾಪಂ ಉಪಾಧ್ಯಕ್ಷೆ ನೂರಜಾನಬಿ ಮೊಟಗಿ, ಬಿಜೆಪಿ ತಾಲೂಕು ಅಧ್ಯಕ್ಷ ಬಸವರಾಜ ಹಳ್ಳೂರ, ಡಾ.ಗುರುಪಾದಪ್ಪ ಸಜ್ಜನ, ಮುಖಂಡರಾದ ಬಸವರಾಜ ಬಾಚಲಾಪೂರ, ಮಾರುತಿ ರಂಗ್ರೇಜಿ, ಪ್ರಲ್ಹಾದಾಚಾರ್ಯ ಕಟ್ಟಿ, ವಿಶ್ವನಾಥ್ ನಾಗೂರ, ಬಸವಂತಪ್ಪ ಕಂಪ್ಲಿ, ಹನುಮಂತಪ್ಪ ಬಿಂಗಿ, ಶರಣಪ್ಪ ಹುಲೂರು, ಸುರೇಶ ಇತರರಿದ್ದರು.