ಹಾನಗಲ್ಲ ಕುಮಾರ ಶಿವಯೋಗಿಗಳ ಸೇವೆ ಅನನ್ಯ

Hanagal Kumarshivayogi shree
Published on

ಬ್ಯಾಡಗಿ: ಲಿಂ. ಹಾನಗಲ್ಲ ಕುಮಾರ ಶಿವಯೋಗಿಗಳು ನೀಡಿದ ಕೊಡುಗೆಯನ್ನು ವೀರಶೈವ ಲಿಂಗಾಯತ ಸಮಾಜ ಎಂದಿಗೂ ಮರೆಯಲು ಸಾಧ್ಯವಿಲ್ಲ. ಸಿಂಧಗಿ ಶಾಂತವೀರ ಸ್ವಾಮೀಜಿಗಳು ಧಾರ್ವಿುಕ ಪಾಠಶಾಲೆ ತೆರೆದು ಬಡಮಕ್ಕಳ ಬಾಳಿಗೆ ಬೆಳಕಾಗಿದ್ದಾರೆ ಎಂದು ಸಿಂಧಗಿ- ಹೋತನಹಳ್ಳಿ ಮಠದ ಪಟ್ಟಾಧ್ಯಕ್ಷ ಶ್ರೀ ಶಂಭುಲಿಂಗ ಸ್ವಾಮೀಜಿ ಹೇಳಿದರು.

ಪಟ್ಟಣದ ಗುರು ಕುಮಾರೇಶ್ವರ ಧಾರ್ವಿುಕ ಪಾಠಶಾಲೆಯಲ್ಲಿ ಏರ್ಪಡಿಸಿದ್ದ ಲಿಂ. ಸಿಂಧಗಿ ಶಾಂತವೀರ ಪಟ್ಟಾಧ್ಯಕ್ಷರ 45ನೇ ಹಾಗೂ ಡಾ. ತೋಂಟದ ಸಿದ್ಧಲಿಂಗ ಶ್ರೀಗಳ 7ನೇ ವರ್ಷದ ಪುಣ್ಯಸ್ಮರಣೋತ್ಸವ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.

ಸಿಂಧಗಿ ಶಾಂತವೀರ ಸ್ವಾಮೀಜಿಗಳು ತಮ್ಮ ಜೀವಿತಾವಧಿಯಲ್ಲಿ ‘ನನ್ನ ಉಸಿರೇ ಕುಮಾರೇಶ’ ಎಂದು ಬದುಕಿದ್ದರು. ಬಡಮಕ್ಕಳಿಗೆ ಹಾವೇರಿ ಹಾಗೂ ಬ್ಯಾಡಗಿಯಲ್ಲಿ ಧಾರ್ವಿುಕ ಪಾಠಶಾಲೆ ತೆರೆದು ಶಿಕ್ಷಣ ನೀಡಿದರು. ಸಾವಿರಾರು ಬಡಮಕ್ಕಳು ಪೌರೋಹಿತ್ಯ ಹಾಗೂ ಮಠಮಾನ್ಯಗಳಿಗೆ ಪಟ್ಟಾಧಿಕಾರ, ಧರ್ಮಾಧಿಕಾರಿ ಸೇರಿ ವಿವಿಧ ಧರ್ಮಕಾರ್ಯಗಳಲ್ಲಿ ತೊಡಗಲು ಸಹಕಾರಿಯಾದರು ಎಂದರು.

ಹಾನಗಲ್ಲ ಕುಮಾರ ಸ್ವಾಮೀಜಿಗಳು ಎಳೆ ವಯಸ್ಸಿನಲ್ಲಿ ಮನೆಬಿಟ್ಟು ಸಮಾಜ ಸೇವೆಗೆ ಧುಮುಕಿದರು. ಕೆಲ ದಿನಗಳಲ್ಲಿ ಹಾನಗಲ್ಲ ವಿರಕ್ತಮಠಕ್ಕೆ ಪೀಠಾಧಿಕಾರಿಯಾದರು. ಅಂಧರ ಬಾಳು ಬೆಳಗಿದ ಪಂಚಾಕ್ಷರಿ ಗವಾಯಿಗಳಿಗೆ ಆಶ್ರಯ ನೀಡಿದ ಪರಿಣಾಮ ಗದಗಿನಲ್ಲಿ ಈಗ ದೊಡ್ಡ ಪುಣ್ಯಾಶ್ರಮ ಬೆಳೆದು ನಿಂತಿದೆ. ಸಿಂಧಗಿ ಶ್ರೀ ಶಾಂತವೀರ ಸ್ವಾಮೀಜಿಗಳು ನಿಸ್ವಾರ್ಥಸೇವೆಯಿಂದ ಪ್ರಸಿದ್ಧರಾದರು. ಮಠದಿಂದ ಎಂದಿಗೂ ಮನೆಗೆ ಏನನ್ನೂ ಒಯ್ಯಬಾರದು. ಮಠದ ದಾಸೋಹಕ್ಕೆ ಕೈಲಾಗಿರುವುದನ್ನು ನೀಡಬೇಕು ಎಂದರು.

ಕುಮಾರೇಶ್ವರ ಪಾಠಶಾಲೆ ಹಿರಿಯ ವ್ಯವಸ್ಥಾಪಕ ರಾಚಯ್ಯ ಓದಿಸೋಮಠ ಮಾತನಾಡಿದರು.

ಸಂಗೀತ ಕಲಾವಿದ ರಾಜಯ್ಯಶಾಸ್ತ್ರಿ ಸಾಗರ, ವಿಕಾಸ ಮುಳಗುಂದ, ಶಾಂತಕುಮಾರ ಹೂಗಾರ, ಧರ್ಮಾಧಿಕಾರಿ ಮಂಜಯ್ಯಸ್ವಾಮಿ ಹಿರೇಮಠ, ಪತ್ರಕರ್ತ ಕರಬಸಯ್ಯ ಹಿರೇಮಠ, ಗಿರೀಶ ಇಂಡಿಮಠ ಹಾಗೂ ಹಳೆಯ ವಟುಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net