

ತುಮಕೂರು: ಕರೊನಾ ಸೃಷ್ಟಿಸಿರುವ ಸಂಕಷ್ಟದ ಸಮಯದಲ್ಲಿ ರಾಜಕೀಯ, ಮನಸ್ತಾಪಗಳನ್ನು ಬದಿಗಿಟ್ಟು ಪಕ್ಷದ ಕಾರ್ಯಕರ್ತರು ಜನಸೇವೆಗೆ ತಮ್ಮನ್ನು ಅರ್ಪಿಸಿಕೊಳ್ಳಬೇಕು ಎಂದು ಗ್ರಾಮಾಂತರ ಕ್ಷೇತ್ರದ ಶಾಸಕ ಡಿ.ಸಿ.ಗೌರಿಶಂಕರ್ ಕರೆ ನೀಡಿದರು.
ತಾಲೂಕಿನ ಊರ್ಡಿಗೆರೆ ಸರ್ಕಾರಿ ಶಾಲೆ ಮೈದಾನದಲ್ಲಿ ಮಂಗಳವಾರ ಜಿಪಂ ವ್ಯಾಪ್ತಿಯ ಅರೇಗುಜ್ಜನಹಳ್ಳಿ, ದುರ್ಗದಹಳ್ಳಿ, ಸಿಂಗನಹಳ್ಳಿ ಕಾಲನಿ, ನಂದಿಹಳ್ಳಿ, ಮಂಚಕಲ್‌ಕುಪ್ಪೆ, ಚಿಕ್ಕನಹಳ್ಳಿಯಲ್ಲಿ ರೈತರಿಂದ ಖರೀದಿಸಿದ ತರಕಾರಿ ಹಾಗೂ ಪಡಿತರವನ್ನು ವಿತರಿಸಿ ಮಾತನಾಡಿದ ಅವರು, ಕ್ಷೇತ್ರದ ಜನರ ಕಷ್ಟ ದೂರ ಮಾಡುವ ನಿಟ್ಟಿನಲ್ಲಿ ದಿವಂಗತ ಚೆನ್ನಿಗಪ್ಪ ಅವರ ಕುಟುಂಬ ಪಡಿತರ ವಿತರಿಸುವ ಕೆಲಸ ಮಾಡುತ್ತಿದೆಯೇ ಹೊರತು ಪ್ರಚಾರಕ್ಕಾಗಿ ಅಲ್ಲ ಎಂದು ಸ್ಪಷ್ಟಪಡಿಸಿದರು.
ಗ್ರಾಮಾಂತರ ಕ್ಷೇತ್ರದ ಜನರು ಕಷ್ಟಕ್ಕೆ ಸಿಲುಕಬಾರದು ಎಂಬ ಉದ್ದೇಶದಿಂದಲೇ ಪ್ರತೀ ಕುಟುಂಬಕ್ಕೆ ಪಡಿತರ ಕಿಟ್ ಹಾಗೂ ತರಕಾರಿಯನ್ನು ನೀಡಲಾಗುತ್ತಿದೆ. ಕಾರ್ಯಕರ್ತರ ಮೂಲಕ ಮನೆ ಮನೆಗೆ ತಲುಪಿಸುವ ಕೆಲಸವನ್ನು ಮಾಡುತ್ತಿದ್ದೇವೆ, ಸಾಲ ಮಾಡಿಯಾದರೂ ಜನರ ಹಸಿವು ನೀಗಿಸುವೆ, ಕ್ಷೇತ್ರದ 35 ಗ್ರಾಮ ಪಂಚಾಯತಿಗಳಿಗೂ ಈ ತಿಂಗಳಾಂತ್ಯದೊಳಗೆ 50 ಸಾವಿರ ಕುಟುಂಬಗಳಿಗೂ ಪಡಿತರ ತಲುಪಿಸಲಾಗುವುದು ಎಂದರು.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಪಡಿತರ ಕಿಟ್ ಸಿದ್ಧಪಡಿಸಲು ತಡವಾಗುತ್ತಿದೆ, ಇಲ್ಲದಿದ್ದರೆ 2 ದಿನದಲ್ಲಿ ಎಲ್ಲ ಕುಟುಂಬಗಳಿಗೂ ಪಡಿತರ ವಿತರಿಸಲಾಗುತ್ತಿತ್ತು, ಕರೊನಾ ಸಂದರ್ಭದಲ್ಲಿ ದಾನ ಮಾಡುವುದಷ್ಟೇ ಅಲ್ಲ, ಅಗತ್ಯ ಸಮಯದಲ್ಲಿ ಶ್ರಮದಾನ ಮಾಡುವುದು ಸಹ ಮುಖ್ಯ ಎಂದರು.
ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಹಾಲನೂರು ಅನಂತ್‌ಕುಮಾರ್, ಸುವರ್ಣಗಿರಿ ಕುಮಾರ್, ಹರಳೂರು ಸುರೇಶ್, ತನ್ವೀರ್, ಗ್ರಾಪಂ ಸದಸ್ಯರಾದ ಶಿವಮ್ಮ , ಕುಮಾರ್, ಲಕ್ಷ್ಮೀನಾರಾಯಣ್, ವಿಷ್ಣುವರ್ದನ್, ಹೊಟೇಲ್ ಮಂಜು, ದುರ್ಗಪ್ಪ, ಪ್ರಕಾಶ್, ರವಿ ಇತರರಿದ್ದರು.
ಗ್ರಾಮಾಂತರ ಕ್ಷೇತ್ರದ ಜನರಿಗೆ ಏನೇ ಸಮಸ್ಯೆ ಇದ್ದರೂ ಸ್ಪಂದಿಸಲು ನಾನು ಇದ್ದೇನೆ ಎಂಬುದನ್ನು ಮರೆಯಬಾರು. ನಿಮ್ಮ ಜೀವ ನಿಮ್ಮ ಕೈಯಲ್ಲಿಯೇ ಇದೆ. ಮನೆಯಲ್ಲೇ ಇರುವ ಮೂಲಕ ಕರೊನಾ ವಿರುದ್ಧ ಹೋರಾಡೋಣ. ನಿಮ್ಮ ಮನೆಬಾಗಿಲಿಗೆ ಪಡಿತರ ತಲುಪಿಸುವ ಕೆಲಸವನ್ನು ನಾವು ಮಾಡುತ್ತೇವೆ. ಡಿ.ಸಿ.ಗೌರಿಶಂಕರ್ ಶಾಸಕ