

ಮೈಸೂರು: ದೇಶದಲ್ಲಿ ಸೇವಾ ಮನೋಭಾವವುಳ್ಳ ಸೇವಾ ಸಂಸ್ಥೆಗಳ ಸಂಖ್ಯೆ ಹೆಚ್ಚಾಗಬೇಕು. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಬೇಕೆಂದು ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಸಲಹೆ ನೀಡಿದರು.
ಲಯನ್ಸ್ ಅಂತಾರಾಷ್ಟ್ರೀಯ ಸೇವಾಸಂಸ್ಥೆ, ಜೈನ್ ಮಿಲನ್ ಚಾರಿಟೆಬಲ್ ಟ್ರಸ್ಟ್, ನಾರಾಯಣ ಸೇವಾ ಸಂಸ್ಥಾನ, ಶ್ರೀಗುರು ಪುಷ್ಕರ ಜೈನ್ ಸೇವಾ ಸಮಿತಿಯಿಂದ ನಗರದ ನಂಜರಾಜ ಬಹದ್ದೂರ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಅಂಗವಿಕಲರಿಗೆ ಮಾಡ್ಯುಲರ್ ಕೃತಕ ಕೈ ಮತ್ತು ಕಾಲಿನ ಅಂಗಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾರ್ಥವೇ ತುಂಬಿರುವ ಸಮಾಜದಲ್ಲಿ ನಿಸ್ವಾರ್ಥ ಸೇವೆ ಮಾಡುವ ಇಂತಹ ಸೇವಾ ಸಂಸ್ಥೆಗಳ ಸೇವೆ ಮೆಚ್ಚುವಂತಹದ್ದು. ರಾಜಕಾರಣಿಗಳು ಚುನಾವಣೆಯಲ್ಲಿ ಗೆಲ್ಲುವುದಕೊಸ್ಕರ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುತ್ತಾರೆ. ಆದರೆ ಇಂತಹ ಸೇವಾ ಸಂಸ್ಥೆಗಳ ಕಾರ್ಯ ದೇವರೇ ಮೆಚ್ಚುವಂತಹದ್ದಾಗಿದೆ ಎಂದರು.
ಯಾವುದೇ ಜಾತಿ, ಭೇದವಿಲ್ಲದೆ ಸುಮಾರು 400 ಜನರಿಗೆ ಕೃತಕ ಅಂಗಾಂಗಗಳ ಜೋಡಣೆ ಮಾಡುತ್ತಿದ್ದಾರೆ. ಎಲ್ಲವನ್ನೂ ಸರ್ಕಾರವೇ ಮಾಡಲು ಸಾಧ್ಯವಿಲ್ಲದ್ದರಿಂದ ಇದರ ಜತೆಗೆ ದಾನಿಗಳು ಸಹ ಕೈಜೋಡಿಸಬೇಕು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಜನರಿಗೆ ಕೃತಕ ಅಂಗಾಂಗಗಳ ಅವಶ್ಯಕತೆ ಇದ್ದು, ನನ್ನ ಕಡೆಯಿಂದ ವೈಯಕ್ತಿಕವಾಗಿ 1 ಲಕ್ಷ ರೂ. ದೇಣಿಗೆ ನೀಡುವುದಾಗಿ ಘೋಷಿಸಿದರು.
ಶಾಸಕ ಟಿ.ಎಸ್.ಶ್ರೀವತ್ಸ, ಲಯನ್ ಹೇಮಂತ್‌ಕುಮಾರ್‌ಬನ್ಸಾಲಿ, ನಗರಪಾಲಿಕೆ ಮಾಜಿ ಸದಸ್ಯ ಶಿವಣ್ಣ, ಲಯನ್ಸ್ ಸಂಸ್ಥೆಯ ಟಿ.ಸುರೇಶ್ ಗೋಲ್ಡ್, ಸುಬ್ರಹ್ಮಣ್ಯ, ಪ್ರಮೀಳಾ ಎಸ್.ಆಚಾರ್, ಮುಖೇಶ್‌ಕುಮಾರ್ ಶರ್ಮ, ಅಶೋಕ್ ಭಂಡಾರಿ, ಗುರುರಾಜ್, ವಿನೋದ್ ತಿವಾರಿ, ವಿಜಯಲಕ್ಷ್ಮೀ, ಮದನ್ ಲಾಲ್ ಮಾರೋ, ಮಹಾವೀರ್ ಚಂದ್ ಬನ್ಸಾಲಿ, ಜಿಲ್ಲಾ ವಯಸ್ಕರ ಶಿಕ್ಷಣ ಸಮಿತಿಯ ನಿವೃತ್ತ ಅಧಿಕಾರಿ ಡಾ.ಕೆ.ಶಂಕರೇಗೌಡ ಇತರರು ಇದ್ದರು.