ಸಂಭಾವನೆ ಪಡೆಯದೆ ನಿರ್ವಹಿಸುವ ಕಾರ್ಯವೇ ಸೇವೆ

15 nrp 3
ಹೊನ್ನೇಕುಡಿಗೆಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕ ಎನ್‌ಎಸ್‌ಎಸ್ ಶಿಬಿರಕ್ಕೆ ನ್ಯಾಯಾಧೀಶ ದಾಸರಿ ಕ್ರಾಂತಿಕಿರಣ್ ಚಾಲನೆ ನೀಡಿದರು. ಪ್ರಶಾಂತ್.ಎಲ್.ಶೆಟ್ಟಿ, ಎಸ್.ಎಸ್.ಸಂತೋಷ್‌ಕುಮಾರ್, ದೇವೇಂದ್ರ, ಪೌಲ್‌ಚೆರಿಯನ್,ರುಖಿಯತ್ ಇದ್ದರು.
Published on

ಎನ್.ಆರ್.ಪುರ: ಸೇವೆ ಎಂಬುದು ಯಾವುದೇ ಸಂಭಾವನೆ ಪಡೆಯದೆ ನಿರ್ವಹಿಸುವ ಕಾರ್ಯವಾಗಿದ್ದು , ವಿದ್ಯಾರ್ಥಿಗಳು ಕಾಲೇಜು ದಿನಗಳಲ್ಲಿಯೇ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಿವಿಲ್ ನ್ಯಾಯಾಧೀಶ ದಾಸರಿ ಕ್ರಾಂತಿಕಿರಣ್ ಹೇಳಿದರು.
ಹೊನ್ನೆಕೂಡಿಗೆ ಗ್ರಾಮದಲ್ಲಿ ಮಂಗಳವಾರದಿಂದ ಆರಂಭವಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿಗಳು ನಾಲ್ಕು ಗೋಡೆ ಮಧ್ಯೆ ಕಲಿಯುವ ಶಿಕ್ಷಣದ ಜತೆಗೆ ಸಮಾಜ ಮುಖಿಯಾಗಿ ಕಾರ್ಯನಿರ್ವಹಿಸಲು ಸೇವಾ ಮನೋಭಾವನೆ ಮುಖ್ಯ. ಶಿಬಿರಗಳು ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿರುತ್ತವೆ. ಯುವಜನರಲ್ಲಿ ಕೌಶಲ ಹಾಗೂ ಸಾಮಾಜಿಕ ಜವಾಬ್ಧಾರಿ ಬೆಳೆಸಲು ಸಹಕಾರಿಯಾಗಿದೆ ಎಂದರು.
ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಪ್ರಶಾಂತ್.ಎಲ್.ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಪಠ್ಯದ ಜತೆಗೆ ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಲು ಕ್ರೀಡೆ, ಸಾಂಸ್ಕೃತಿ ಚಟುವಟಿಕೆಗಳು ಹಾಗೂ ಎನ್‌ಎಸ್‌ಎಸ್ ಶಿಬಿರಗಳು ಪೂರಕವಾಗಿದೆ. ಶಿಬಿರಾರ್ಥಿಗಳು ಮೇಲು, ಕೀಳು ಭಾವನೆ ಬಿಟ್ಟು ಎಲ್ಲರೂ ಒಂದೇ ಎಂಬ ಭಾವನೆ ಬೆಳೆಸಿಕೊಳ್ಳಬೇಕು. ಶಿಬಿರದಲ್ಲಿ ಆಯೋಜಿಸಿರುವ ವಿವಿಧ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಸ್.ಎಸ್.ಸಂತೋಷ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಮನುಷ್ಯತ್ವ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಲು ಎನ್‌ಸಿಸಿ ಮತ್ತು ಎನ್‌ಎಸ್‌ಎಸ್ ಶಿಬಿರಗಳು ಸಹಾಯಕ. ಶಿಬಿರದಲ್ಲಿ ವಿದ್ಯಾರ್ಥಿಗಳ ಭಾಷ ಜ್ಞಾನದ ವೃದ್ಧಿಗೆ, ಆರೋಗ್ಯದ ವೃದ್ಧಿಗೆ ಸಹಾಯಕವಾಗುವಂತಹ ಉಪನ್ಯಾಸಗಳನ್ನು ಏರ್ಪಡಿಸಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳ ಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net