

ಸರಗೂರು : ಸಮಾಜದಲ್ಲಿನ ಒಳ ಪಂಗಡಗಳ ಹಗ್ಗ, ಜಗ್ಗಾಟದಿಂದ ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮವಾಗಲು ವಿಳಂಬವಾಗುತ್ತಿದೆ. ಅದಕ್ಕಾಗಿ ಎಲ್ಲ ಒಳ ಪಂಗಡಗಳು ತಮ್ಮಲ್ಲಿರುವ ವೈಮನಸ್ಸನ್ನು ಮರೆತು ಒಗ್ಗೂಡಿದರೆ ಮಾತ್ರ ಸಮಾಜ ಸೇವೆ ಮಾಡಲು ಸಾಧ್ಯ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಸ್. ಶಿವಮೂರ್ತಿ ಕಾನ್ಯ ಮನವಿ ಮಾಡಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮೈಸೂರು ಜಿಲ್ಲಾ ಘಟಕದ 2024 ರಿಂದ 2029ರ ಸಾಲಿಗೆ ಜು.21 ರಂದು ನಡೆಯಲಿರುವ ಚುನಾವಣೆ ಹಿನ್ನೆಲೆಯಲ್ಲಿ ಜೆಎಸ್‌ಎಸ್ ಶಿವರಾತ್ರೀಶ್ವರ ಶಿವಾನುಭವ ಮಂಗಳ ಮಂಟಪದಲ್ಲಿ ಸೋಮವಾರ ಮತಯಾಚನೆ ಮಾಡಿ ಮಾತನಾಡಿದರು.
ಹಿಂದು ಎಂಬುದು ಧರ್ಮವಲ್ಲ, ಅದೊಂದು ಬದುಕುವ ರೀತಿ. ಅದು ಮನುಶಾಸ್ತ್ರ ಪ್ರತಿಪಾದನೆ ಮಾಡುತ್ತದೆ. ಈ ಕಾರಣಕ್ಕಾಗಿ ಬಸವಣ್ಣ ಅವರು ಅದನ್ನು ವಿರೋಧಿಸಿ ಲಿಂಗಾಯತ ಎಂಬ ಪ್ರತ್ಯೇಕ ಧರ್ಮ ಸ್ಥಾಪನೆ ಮಾಡಿದರು. ಮನುಶಾಸ್ತ್ರಕ್ಕೂ ಲಿಂಗಾಯತ ಧರ್ಮಕ್ಕೂ ಸಾಕಷ್ಟು ವ್ಯತ್ಯಾಸವಿದೆ ಎಂದರು.
ಸಭಾದ ಕಾರ್ಯನಿರ್ವಾಹಕ ಸಮಿತಿ ಅಭ್ಯರ್ಥಿ ಡಿ.ಜಿ.ಶಿವರಾಜು ಮಾತನಾಡಿ, ವೀರಶೈವರು ತಮ್ಮಲ್ಲಿರುವ ಕೀಳರಿಮೆ ಬಿಟ್ಟು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕು. ಸಮಾಜದ ಪ್ರತಿಭಾವಂತ ಅಭ್ಯರ್ಥಿಗಳನ್ನು ಗುರುತಿಸಿ ಮತ ನೀಡುವ ಮೂಲಕ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.
ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ನಟರಾಜು ಕಾಟವಾಳು, ಕಾರ್ಯನಿರ್ವಾಹಕ ಸಮಿತಿ ಸದಸ್ಯರಾದ ವಿರೂಪಾಕ್ಷ ಮುಳ್ಳೂರು, ಎಚ್.ಸಿ.ಮಹದೇವಸ್ವಾಮಿ ಹಂಚೀಪುರ, ಎಸ್.ಎನ್.ಪ್ರಕಾಶ್ ಶಿವಪುರ, ಸಿ.ಕೆ.ಗಿರೀಶ ಚಾಮಲಾಪುರ, ಮಾದಪ್ಪ ಬಿ.ಬಾಡಗ, ಬಿ.ಶ್ರೀ ಕಂಠ ಬಿಡಗಲು ಇತರರು ಇದ್ದರು.