ಅಧಿಕಾರಕ್ಕಿಂತ ಸೇವಾಭಾವ ಮುಖ್ಯ

28SNK1
Published on

ಸಂಕೇಶ್ವರ: ಜನರ ಸೇವೆ ಮಾಡಲು ಅಧಿಕಾರಕ್ಕಿಂತ ಸೇವಾ ಮನೋಭಾವ ಮುಖ್ಯವಾಗಿದ್ದು, ತಾಲೂಕಿನ ಜನರ ನೋವು-ನಲಿವಿನಲ್ಲಿ ಕತ್ತಿ ಕುಟುಂಬ ಸದಾ ಜತೆಯಾಗಿರಲಿದೆ ಎಂದು ಮಾಜಿ ಸಂಸದ ರಮೇಶ ಕತ್ತಿ ಹೇಳಿದರು.

ಸಮೀಪದ ನಿಡಸೋಸಿ, ಆಲೂರ ಕೆಎಂ, ಕರಜಗಾ, ಕಣಗಲಾ, ಹರಗಾಪುರ ಗ್ರಾಮಗಳಲ್ಲಿ ವಿವಿಧ ಅಭಿವದ್ಧಿ ಕಾಮಗಾರಿಗೆ ಗುರುವಾರ ಚಾಲನೆ ನೀಡಿ ಮಾತನಾಡಿ, ಜಿಲ್ಲೆಯ ಎಲ್ಲ ಗುರು, ಹಿರಿಯರ ಪ್ರೀತಿ ಆಶೀರ್ವಾದದಿಂದ ಕತ್ತಿ ಕುಟುಂಬಕ್ಕೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ಅನೇಕ ಅಧಿಕಾರ ಸಿಕ್ಕಿದೆ. ಅಧಿಕಾರವಿದ್ದಾಗ ಜನರ ಬಳಿ ಬಂದು ಅಧಿಕಾರ ಇದ್ದಾಗ ಜನರಿಂದ ದೂರವಿರುವುದಿಲ್ಲ. ಜನರ ಮಧ್ಯೆಯೆ ಇದ್ದು ಜನಸೇವೆಯೆ ನಮ್ಮ ಮೂಲ ಧ್ಯೇಯವಾಗಿದೆ ಎಂದರು.

ಉತ್ತರದ ಅಭಿವದ್ಧಿ: ಪ್ರಸ್ತುತ ವಿಧಾನಸಭೆಯಲ್ಲಿ ಉತ್ತರ ಕರ್ನಾಟಕ ಅಭಿವದ್ಧಿ ಕುರಿತಾದ ಚರ್ಚೆಗಳು ನಡೆಯುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಪ್ರಾದೇಶಿಕ ಅಸಮಾನತೆ ವಿರುದ್ಧ ದಿ.ಉಮೇಶ ಕತ್ತಿ ಕೂಗಿಗೆ ಇನ್ನಷ್ಟು ಬಲಗೊಳ್ಳುವ ಮೂಲಕ ಈ ಭಾಗದ ಸಮಗ್ರ ಅಭಿವದ್ಧಿಗೆ ಜನಪ್ರತಿನಿಧಿಗಳು ಕೈಜೋಡಿಸಬೇಕಿದೆ ಎಂದರು.

ಹರಗಾಪುರ ಗ್ರಾಮದಲ್ಲಿ 1.05 ಕೋಟಿ ರೂ., ಶಿಪ್ಪೂರ ಗ್ರಾಮದ 30 ಲಕ್ಷ ರೂ., ಕಣಗಲಾ ಗ್ರಾಮದಲ್ಲಿ 1.90 ಕೋಟಿ ರೂ., ಕರಜಗಾ ಗ್ರಾಮದಲ್ಲಿ 1.08 ಕೋಟಿ ರೂ., ಆಲೂರ ಕೆಎಂ 1.10 ಕೋಟಿ ರೂ. ವೆಚ್ಚದ ರಸ್ತೆ ಸುಧಾರಣೆ ಹಾಗೂ ನಿಡಸೋಸಿಯಲ್ಲಿ 50 ಲಕ್ಷ ರೂ. ವೆಚ್ಚದ ಸೇತುವೆ ನಿರ್ಮಾಣ ಕಾಮಗಾರಿ ಸೇರಿ ಒಟ್ಟು 5.93 ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದರು.

ಸಂಗಮ ಶುಗರ್ಸ್ ಅಧ್ಯಕ್ಷ ರಾಜೇಂದ್ರ ಪಾಟೀಲ, ದುಂಡಪ್ಪ ಹೆದ್ದೂರಿ, ಅಶೋಕ ಹಿರೆಕೊಡಿ, ದತ್ತಾ ಕರಾಡೆ, ಸಂಜು ಪಾಟೀಲ, ಶಿವಾನಂದ ಕರೋಶಿ, ಸುಭಾಷ ಪಾಟೀಲ, ಅಭಿಯಂತ ಶಶಿಧರ ಭೂಸಗೋಳ, ಗುತ್ತಿಗೆದಾರ ಮಲ್ಲಪ್ಪ ಬಿಸಿರೊಟ್ಟಿ, ತಿಮ್ಮಣ್ಣ ಗಾಡಿವಡ್ಡರ, ಪಿಡಿಒ ಶೋಭಾ ಬಡಕುಂದ್ರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net