

ಶೃಂಗೇರಿ: ಎನ್‌ಎಸ್‌ಎಸ್ ಘಟಕ ಸೇವಾಭಾವ ಹಾಗೂ ರಾಷ್ಟ್ರೀಯತೆ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಿ, ಹಿರಿಯ ನಾಗರಿಕರನ್ನೂ ಅದರ ಕೊಂಡಿಯಾಗಿಸುವ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ನೆಮ್ಮಾರ್ ಸರ್ಕಾರಿ ಪ್ರೌಢಶಾಲೆಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.
ರಾಷ್ಟ್ರದ ಸಾರ್ವಭೌಮತ್ವದ ಮುಂದೆ ನಾನು, ನನ್ನದು ಎಂಬುದು ಗೌಣ. ಸಾಮಾಜಿಕ, ಧಾರ್ಮಿಕ, ಕೌಟುಂಬಿಕ ಧರ್ಮಗಳ ಜತೆ ರಾಷ್ಟ್ರಧರ್ಮವನ್ನೂ ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯ. ಎನ್‌ಎಸ್‌ಎಸ್ ಶಿಬಿರಗಳು ಮಕ್ಕಳಿಗೆ ಸದ್ಗುಣಗಳನ್ನು ಕಲಿಸಿಕೊಡುತ್ತವೆ ಎಂದರು.
ಶಿಬಿರದ ಸ್ವಾಗತ ಸಮಿತಿ ಕೋಶಾಧ್ಯಕ್ಷ ಪುಟ್ಟಪ್ಪ ಹೆಗ್ಡೆ ಮಾತನಾಡಿ, ಗಾಂಧಿ ಜನ್ಮ ಶತಮಾನೋತ್ಸವ ನೆನಪಾಗಿ ಸರ್ವೋದಯ ಯೋಜನೆಯಡಿ ಆರಂಭವಾದ ಎನ್‌ಎಸ್‌ಎಸ್ ಯೋಜನೆ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕಾಗಿ ಶಿಬಿರಗಳನ್ನು ನಡೆಸುತ್ತಿದೆ. ಇದು ಸ್ವಚ್ಛತೆಗೆ ಸೀಮಿತವಾಗಿರದೆ ಸಹಬಾಳ್ವೆ, ಸಮಯ ಪಾಲನೆಯ ಮೌಲ್ಯಗಳನ್ನು ತಿಳಿಸಿಕೊಡುತ್ತದೆ ಎಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯೆ ಭಾರತಿ ಮಾತನಾಡಿ, ವಿದ್ಯಾರ್ಥಿಗಳು ಬಡವರು, ರೋಗಿಗಳ ಸೇವೆ ಮಾಡಬೇಕು ಎಂದರು.
ಕಾಲೇಜಿನ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ತ್ರಿಮೂರ್ತಿ, ನೆಮ್ಮಾರ್ ಗ್ರಾಪಂ ಅಧ್ಯಕ್ಷೆ ಗಿರಿಜಾ, ಉಪಾಧ್ಯಕ್ಷೆ ಪಿ.ವಾಣಿ, ಸದಸ್ಯರಾದ ಲೀಲಾವತಿ, ಜ್ಯೋತಿ, ಬಿಇಒ ಎನ್.ಜಿ.ರಾಘವೇಂದ್ರ, ಶಾಲೆ ಮುಖ್ಯಶಿಕ್ಷಕ ಶ್ರೀನಾಥ್, ಶಿಬಿರದ ಯೋಜನಾಧಿಕಾರಿ ಡಿ.ಎಸ್.ಮಂಜುನಾಥ್, ರಾಘವೇಂದ್ರ ರೆಡ್ಡಿ, ಪ್ರಾಧ್ಯಾಪಕರಾದ ಚೇತನ್, ರವಿಶಂಕರ್, ಎಮ್.ಎಸ್.ತೇಜಸ್ವಿನಿ, ಬಿ.ಜಿ.ಆಶಾ ಇದ್ದರು.