

ರಟ್ಟಿಹಳ್ಳಿ: ಉತ್ತಮ ಸಮಾಜ ನಿರ್ವಣದಲ್ಲಿ ಮಠಮಾನ್ಯಗಳ ಪಾತ್ರ ಮಹತ್ವದ್ದಾಗಿದೆ. ತಿಪ್ಪಾಯಿಕೊಪ್ಪದ ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠ ಹಲವು ವರ್ಷಗಳಿಂದ ಬಸವಣ್ಣನವರ ಆಶಯದಂತೆ ಸರ್ವರಿಗೂ ಸಮಾನತೆ ಎಂಬ ತತ್ವದಡಿ ಸಮಾಜಮುಖಿ ಸೇವೆಯಲ್ಲಿ ತೊಡಗಿದೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.
ತಾಲೂಕಿನ ಜಂಗಮ ಕ್ಷೇತ್ರ ತಿಪ್ಪಾಯಿಕೊಪ್ಪ ಮಾಸೂರು ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠದಲ್ಲಿ ಆಯೋಜಿಸಿದ್ದ ಶ್ರೀ ಗುರು ಮೂಕಪ್ಪ ಶಿವಯೋಗಿಗಳವರ 87ನೇ ಪುಣ್ಯಸ್ಮರಣೆ ಹಾಗೂ ಲಿಂ. ವಿರೂಪಾಕ್ಷ ಸ್ವಾಮೀಜಿ ಪ್ರಥಮ ಪುಣ್ಯಸ್ಮರಣೆ ಜಾತ್ರಾ ಮಹೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅನುದಾನದ ಕೋರಿಕೆ: ಶ್ರೀಗುರು ಮೂಕಪ್ಪ ಶಿವಯೋಗಿಗಳ ತಪೋಭೂಮಿ ಪತ್ರಿಮರಡಿ ಜೀಣೋದ್ಧಾರ ಕೆಲಸ ಭರದಿಂದ ಸಾಗಿದೆ. ಕ್ಷೇತ್ರದಲ್ಲಿ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಪ್ರತಿಷ್ಠಾಪನೆ, 21 ಅಡಿ ಎತ್ತರದ ಧ್ಯಾನಸ್ಥ ಶಿವನ ಮೂರ್ತಿ, ಬಸವಣ್ಣ-ಅಲ್ಲಮರಾದಿಯಾಗಿ ವಚನಕಾರರ ಮೂರ್ತಿ ಪ್ರತಿಷ್ಠಾಪನೆ, ಆರೋಗ್ಯ ಶಿಬಿರ ಸೇರಿ ಹಲವಾರು ಸಮಷ್ಟಿಮುಖಿ ಸೇವೆ ಕೈಗೊಳ್ಳಲು ಶ್ರೀ ಮಹಾಂತ ಸ್ವಾಮೀಜಿ ಸಂಕಲ್ಪ ಮಾಡಿದ್ದಾರೆ. ಈ ಕ್ಷೇತ್ರದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಅನುದಾನ ನೀಡಬೇಕು ಎಂದು ಸಾಹಿತಿ ಡಾ. ನಿಂಗಪ್ಪ ಚಳಗೇರಿ ಮನವಿ ಮಾಡಿದರು.
ಪ್ರತಿ ವರ್ಷದಂತೆ ಶ್ರೀಗುರು ಮೂಕೇಶ್ವರ ಸೇವಾ ಸಮ್ಮಾನ ಪ್ರಶಸ್ತಿಯನ್ನು ಗಣ್ಯ ವರ್ತಕ ಬ್ಯಾಡಗಿ ನಗರದ ಕುಮಾರಗೌಡ್ರ ಪಾಟೀಲ ಅವರಿಗೆ ಪ್ರದಾನ ಮಾಡಲಾಯಿತು.
ಶ್ರೀ ಮಹಾಂತ ಸ್ವಾಮೀಜಿ, ಶ್ರೀ ಡಾ.ಗುರುಬಸವ ಸ್ವಾಮೀಜಿ, ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಚನ್ನಬಸವ ಸ್ವಾಮೀಜಿ, ಶ್ರೀ ಗುರುಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಾಹಿತಿ ಡಾ. ನಿಂಗಪ್ಪ ಚಳಗೇರಿ, ಕೆಎಂಎಫ್ ಮಾಜಿ ನಿರ್ದೇಶಕ ಹನಮಂತಗೌಡ ಭರಮಣ್ಣನವರ, ಪ್ರಕಾಶ ಬಾರಂದೂರ, ಫಾಲಾಕ್ಷಗೌಡ್ರ ಪಾಟೀಲ, ಮಂಜುನಾಥ ತಂಬಾಕದ, ಮಾಜಿ ಶಾಸಕ ಎಚ್.ಎಸ್. ಶಿವಶಂಕರ, ವಿ.ಡಿ. ಹಂಪಾಳಿ, ಎನ್.ವಿ. ಈರೇಶ, ಕಿರಣಕುಮಾರ ಚೌಡಣ್ಣನವರ, ಷಣ್ಮುಖಪ್ಪ ಚಳಗೇರಿ ಇತರರು ಉಪಸ್ಥಿತರಿದ್ದರು. ಸಮನ್ವಯ ಕಾಶಿ, ಚನ್ನಬಸಯ್ಯ ವಿರಕ್ತಮಠ ನಿರ್ವಹಿಸಿದರು.