ವಿಶ್ವಾಸ ಗಳಿಸಲು ಸೇವೆ ಸಹಕಾರಿ ಎಂದ ಸಚಿವಾಲಯ ಸಹಕಾರ ಸಂಘದ ಅಧ್ಯಕ್ಷ ರಾಜಕುಮಾರ್

12 tmk sunshine
Published on

ತುಮಕೂರು: ಸಹಕಾರಿ ಸಂಸ್ಥೆಗಳು ಲಾಭಾಂಶಕ್ಕಿಂತ ಗ್ರಾಹಕರು, ಜನರಲ್ಲಿ ದೃಢತೆ, ನಂಬಿಕೆ ಕಾಪಾಡಿಕೊಳ್ಳುವುದು ಮುಖ್ಯ ಎಂದು ರಾಜ್ಯ ಸರ್ಕಾರ ಸಚಿವಾಲಯದ ಸಹಕಾರ ಸಂಘದ ಅಧ್ಯಕ್ಷ ಎಚ್.ರಾಜಕುಮಾರ್ ಹೇಳಿದರು.

ಕ್ಯಾತಸಂದ್ರದ ಸನ್‌ರೈಸ್ ಸೌಹಾರ್ದ ಸಹಕಾರಿ ಸಂಸ್ಥೆ ಭಾನುವಾರ ಆಯೋಜಿಸಿದ್ದ ಸಹಕಾರಿ ದಿನಾಚರಣೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಹಕಾರಿ ಕ್ಷೇತ್ರದಲ್ಲಿ ಸೇವೆ ಮಾಡಲು ದೊಡ್ಡಮಟ್ಟದ ಅವಕಾಶಗಳಿವೆ. ಜನರ ವಿಶ್ವಾಸಗಳಿಸಲು ಸಾಮಾಜಿಕ ಸೇವೆ ಸಹಕಾರಿಯಾಗಲಿದೆ ಎಂದರು.

24 ವರ್ಷಗಳಿಂದ ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದೇನೆ. ಸಚಿವಾಲಯದ ಸಹಕಾರಿ ಸಂಸ್ಥೆ ಸರ್ ಮಿರ್ಜಾ ಇಸ್ಮಾಯಿಲ್ ಸ್ಥಾಪಿಸಿದ ಸಂಸ್ಥೆ. ಈ ಸಂಸ್ಥೆಯೀಗ 100 ಕೋಟಿ ರೂ., ವ್ಯವಹಾರ ಮಾಡುತ್ತಿದ್ದು, ಇತ್ತೀಚೆಗೆ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಉತ್ತಮ ಸಹಕಾರಿ ಸಂಸ್ಥೆ ಪ್ರಶಸ್ತಿ ಪಡೆದಿದೆ. ಅಧ್ಯಕ್ಷನಾಗಿ ಪ್ರಶಸ್ತಿ ಸ್ವೀಕರಿಸಿದ್ದು ಮತ್ತಷ್ಟು ಸೇವೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆಯಾಗಿದೆ ಎಂದು ಹೇಳಿದರು.

ಸಹಕಾರ ಕ್ಷೇತ್ರದಲ್ಲಿ ಸರ್ಕಾರದ ಹಸ್ತಕ್ಷೇಪ ಹಿನ್ನೆಲೆಯಲ್ಲಿ 2002ರ ಜನವರಿಯಲ್ಲಿ ಸೌಹಾರ್ದ ಕಾಯ್ದೆ ಜಾರಿಗೆ ಬಂದಿದ್ದು ಆಡಳಿತ ಮಂಡಳಿ ಹಾಗೂ ಸರ್ವಸದಸ್ಯರನ್ನೊಳಗೊಂಡ ಮಹಾಸಭೆ ಕೈಗೊಳ್ಳುವ ನಿರ್ಧಾರಗಳೇ ಇಲ್ಲಿ ಅಂತಿಮ. ಸೌಹಾರ್ದ ಸಹಕಾರಿಗಳಿಗೆ ಸರ್ಕಾರ ಯಾವುದೇ ರೀತಿಯ ಹಣಕಾಸು ನೆರವು ನೀಡುವುದಿಲ್ಲ. ಜತೆಗೆ ಹಸ್ತಕ್ಷೇಪಕ್ಕೆ ಅವಕಾಶವು ಇರುವುದಿಲ್ಲ ಎಂದು ಸಹಕಾರಿ ಸಲಹೆಗಾರ ಶಂಕರಹೆಗಡೆ ತಿಳಿಸಿದರು. ಸಹಕಾರಿ ಉಪಾಧ್ಯಕ್ಷ ಕೆ.ಚಂದ್ರಮೋಹನ್ ರೆಡ್ಡಿ, ನಿರ್ದೇಶಕರಾದ ಕೆ.ಎನ್.ರವೀಶ್ ಕುಮಾರ್, ಆನಂದ್, ಪ್ರಮೋದ್ ಕುರಬೆಟ್ಟು, ಕೆ.ಸಿ.ಶಾಂತರಾಜ್, ಕೆ.ಎ.ವಿಜಯ್, ಸಿಇಒ ಕೃಷ್ಣಾಚಾರ್, ಉದಯಗ್ರೂಪ್‌ನ ಸಿ.ಜಗದೀಶ್, ಧನಂಜಯ್ ಮತ್ತಿತರರು ಇದ್ದರು.

3 ಲಕ್ಷ ಮೂಲ ಬಂಡವಾಳದೊಂದಿಗೆ ಆರಂಭವಾದ ಸಂಸ್ಥೆ ಈಗ 20 ಕೋಟಿ ರೂ., ವ್ಯವಹಾರ ನಡೆಸುತ್ತಿದ್ದು, ಗ್ರಾಹಕರ ಜತೆಗಿನ ಉತ್ತಮ ಒಡನಾಟ ಇದಕ್ಕೆ ಕಾರಣವಾಗಿದೆ. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುವುದು, ಸದಸ್ಯರಿಗೆ ಆರೋಗ್ಯ ತಪಾಸಣೆ ಸೇರಿದಂತೆ ಹಲವಾರು ಸಾಮಾಜಿಕ ಕಾರ್ಯದಲ್ಲೂ ಸಂಸ್ಥೆ ತೊಡಗಿಸಿಕೊಂಡಿದೆ. ಸಿ.ಪಿ.ವಿಜಯ್, ಸನ್‌ರೈಸ್ ಸೌಹಾರ್ದ ಸಹಕಾರಿ ಸಂಸ್ಥೆ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net