ರಸ್ತೆ ಬದಿ ಚರಂಡಿ ಸ್ವಚ್ಛಗೊಳಿಸಿ ಮಾದರಿಯಾದ ಕಾರ್ಮಿಕ

service
Published on

ಮಡಿಕೇರಿ:

ದಿನದ ಶ್ರಮಪೂರಿತ ದುಡಿಮೆ ಮಧ್ಯೆಯೂ ನಿಟ್ಟೂರು ಕಾರ್ಮಾಡು ಗ್ರಾಮದಲ್ಲಿ ಕಾರ್ಮಿಕರೊಬ್ಬರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ರಸ್ತೆ ಬದಿಯ ಚರಂಡಿ ಸ್ವಚ್ಛಗೊಳಿಸಿ ಗಮನ ಸೆಳೆದಿದ್ದಾರೆ. ಸ್ಥಳೀಯ ಬೆಂಡೆಕುತ್ತಿ ಕಾಲೋನಿ ನಿವಾಸಿ ಮೋಹನ ಎಂಬವರೇ ಶ್ರಮದಾನ ಮಾಡುವ ಮೂಲಕ ಮಾದರಿ ಆಗಿರುವ ಕಾರ್ಮಿಕ.

ಪೋನ್ನಂಪೇಟೆ ತಾಲೂಕು ನಿಟ್ಟೂರು ಕಾರ್ಮಾಡು ಬೆಂಡೆಕುತ್ತಿ ಗಿರಿಜನ ಹಾಡಿಗೆ ಮುಖ್ಯ ರಸ್ತೆಯಿಂದ ಸುಸಜ್ಜಿತ ಸಿಮಂಟ್ ರಸ್ತೆಯನ್ನು ನಿಟ್ಟೂರು ಗ್ರಾಮ ಪಂಚಾಯತ್ ಹಾಲಿ ಅಡಳಿತ ಮಂಡಳಿ ಪ್ರಯತ್ನದಿಂದ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಕಳೆದ ನಾಲ್ಕು ವರ್ಷಗಳ ಹಿಂದೆ ನಿರ್ಮಿಸಿ ಕೊಡಲಾಗಿತ್ತು. ಈ ರಸ್ತೆಯ ಪಕ್ಕದಲ್ಲಿ ಇರುವ ಸಣ್ಣ ತೋಡಿನಲ್ಲಿ ಹುಲ್ಲು ಬೆಳೆದು ರಸ್ತೆಯ ಮೇಲೆ ನೀರು ಹರಿದು ಮಳೆ ಮುಂದುವರಿಯುತ್ತಿದ್ದAತೆ ಶೀತ ಹೆಚ್ಚಾಗಿ ವಾಹನ ಸಂಚರಿಸುವಾಗ ರಸ್ತೆ ಶಿಥಿಲಗೊಂಡು ಜಗ್ಗುವ ಸಾಧ್ಯತೆ ಇದ್ದುದನ್ನು ಮನಗಂಡ ಕಾರ್ಮಿಕ ಮೋಹನ ತೋಡನ್ನು ಶುಚಿ ಮಾಡಿದ್ದಾರೆ. ಕೂಲಿಕೆಲಸ ಮುಗಿಸಿಕೊಂಡು ಪ್ರತಿ ದಿನ ಸಂಜೆ ಹೊತ್ತಿನಲ್ಲಿ ಅಂದಾಜು 900ಮೀಟರ್ ತೋಡನ್ನು ಸ್ವಯಂಪ್ರೇರಿತರಾಗಿ ಯಾವುದೇ ಫಲಾಪೇಕ್ಷೆ ಇಲ್ಲದೆ ಸ್ವಚ್ಛಮಾಡಿದ್ದಾರೆ.

ತಾನು ವಾಸ ಮಾಡುವ ಪರಿಸರದ ಸ್ವಚ್ಛತೆಗೆ ಗಮನ ಕೊಡುವ ಮೂಲವೂ ಮೋಹನ್ ಈ ವ್ಯಾಪ್ತಿಯಲ್ಲಿ ಮಾದರಿ ಆಗಿದ್ದಾರೆ. ಅಲ್ಲಲ್ಲಿ ಎಸೆಯಲಾಗಿರುವ ಪ್ಲಾಸ್ಟಿಕ್ ವಸ್ತುಗಳನ್ನು ಆಯ್ದು ನಿಗದಿತ ಸ್ಥಳದಲ್ಲಿ ವಿಲೇವಾರಿ ಮಾಡುವ ಹವ್ಯಾಸ ರೂಢಿಸಿಕೊಂಡಿದ್ದಾರೆ. ನಮ್ಮ ಗ್ರಾಮವನ್ನು ನಾವೇ ಸ್ವಚ್ಚವಾಗಿ ಇಟ್ಟುಕೊಳ್ಳಬೇಕು ಮತ್ತು ಮಕ್ಕಳಿಗೂ ಇದನ್ನೇ ಕಲಿಬೇಕು ಎಂದು ಹೇಳುವ ಮೋಹನ ಗಿರಿಜನರು ಮದ್ಯವ್ಯಸನದಿಂದ ದೂರ ಉಳಿದು ಸದಾ ಚಟುವಟಿಕೆಗಳಿಂದ ಇದ್ದರೆ ಅರೋಗ್ಯ ವಂತರಾಗಿರಬಹುದು ಎನ್ನುತ್ತಾರೆ. ಮೋಹನ ಅವರ ಈ ಕಾರ್ಯ ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net