ನಾಡ ಕಚೇರಿಗಳಲ್ಲಿ ಸರ್ವರ್ ಸಮಸ್ಯೆ‌..; ಸಾರ್ವಜನಿಕರ ಪರದಾಟ

Nada Kacheri
Published on

|ಮಣಿಕಂಠ ಆಲೂರು
ಚಾಮರಾಜನಗರ: ಕಳೆದ ಒಂದು ವಾರಗಳಿಂದ ನಾಡ ಕಚೇರಿ ಹಾಗೂ ಗ್ರಾಮ ಒನ್ ಕೇಂದ್ರಗಳಲ್ಲಿ ಸರ್ವರ್ ಸಮಸ್ಯೆ ಉಂಟಾಗಿದ್ದು, ಸಾರ್ವಜನಿಕರು ವಂಶವೃಕ್ಷ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸೇರಿದಂತೆ ವಿವಿಧ ದೃಢೀಕರಣ ಪತ್ರ ಪಡೆಯಲು ಪರದಾಡುವಂತಾಗಿದೆ.

ಚಾಮರಾಜನಗರದ ತಾಲೂಕು ಕಚೇರಿ ಹಾಗೂ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಎಲ್ಲ ನಾಡ ಕಚೇರಿಗಳಲ್ಲೂ 1 ವಾರದಿಂದ ಸರ್ವರ್ ಸಮಸ್ಯೆ ಉಂಟಾಗಿರುವುದರಿಂದ ಸಾರ್ವಜನಿಕರು ಹಾಗೂ ರೈತರಿಗೆ ಅವಶ್ಯಕತೆ ಇರುವ 38 ಬಗೆಯ ಸೇವೆ ಒದಗಿಸಲು ತೊಡಕು ಉಂಟಾಗಿದೆ.

ನಾಡ ಕಚೇರಿಗಳಲ್ಲಿ ಸರ್ವರ್ ಸಮಸ್ಯೆಯಿಂದಾಗಿ ವಂಶ ವೃಕ್ಷ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಪರಿಶಿಷ್ಟ ಜಾತಿ ಮತ್ತು ಪಂಗಡದ ದೃಢೀಕರಣ ಪತ್ರ, ವಾಸಸ್ಥಳದ ದೃಢೀಕರಣ ಪತ್ರ, ಮೃತ ಸದಸ್ಯರ ದೃಢೀಕರಣ ಪತ್ರ, ಗೇಣಿ ದೃಢೀಕರಣ ಪತ್ರ ಸೇರಿದಂತೆ ವಿವಿಧ ಪ್ರಮಾಣ ಪತ್ರ ಪಡೆಯುವುದಕ್ಕೆ ಸಾಧ್ಯವಾಗದೆ ಸಾರ್ವಜನಿಕರು ಪರಿತಪಿಸುವಂತಾಗಿದೆ.

ಪ್ರತಿ ದಿನ ವಿವಿಧ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಆದರೆ ಯಾರಿಗೂ ಅವರ ಬೇಡಿಕೆಯ ಪ್ರಮಾಣ ಪತ್ರ ನೀಡುವುದಕ್ಕೆ ಸಾಧ್ಯವಾಗದೇ ಸಿಬ್ಬಂದಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಜನರು ನಿತ್ಯವೂ ನಾಡ ಕಚೇರಿಗೆ ತೆರಳಿ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಜಾತಿ ಪ್ರಮಾಣ ಪತ್ರಕ್ಕೆ ಪರದಾಟ: ಈಗಾಗಲೇ ಶಾಲೆಗಳು ಪ್ರಾರಂಭವಾಗಿದ್ದು ಮಕ್ಕಳನ್ನು ಶಾಲೆಗೆ ದಾಖಲು ಮಾಡಲು ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಅಗತ್ಯವಿದೆ. ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ನ್ಯಾಯಬೆಲೆ ಅಂಗಡಿಗಳಲ್ಲಿ ಎಸ್ಸಿ/ಎಸ್ಟಿ ಸಮುದಾಯದ ಪಡಿತರದಾರರಿಂದ ಜಾತಿ ಪ್ರಮಾಣ ಪತ್ರ ನೀಡುವಂತೆ ಆದೇಶ ನೀಡಿರುವುದರಿಂದ ಜಾತಿ ಮತ್ತು ಆದಾಯ ಪ್ರಮಾಣ ಪತ್ರಕ್ಕಾಗಿ ನಾಡ ಕಚೇರಿಗಳಿಗೆ ಜನರು ಹೆಚ್ಚಾಗಿ ಭೇಟಿ ನೀಡುತ್ತಿದ್ದಾರೆ. ಕಂಪ್ಯೂಟರ್ ಕೇಂದ್ರಗಳಲ್ಲೂ ಸರ್ವರ್ ಸಮಸ್ಯೆ ಇರುವುದರಿಂದ ಅರ್ಜಿ ಸಲ್ಲಿಸಲು ಸಮಸ್ಯೆಯಾಗುತ್ತಿದೆ. ಇದರಿಂದಾಗಿ ಸಾರ್ವಜನಿಕರು ನಿತ್ಯವೂ ಪರದಾಡುವಂತ ಪರಿಸ್ಥಿತಿ ಉಂಟಾಗಿದೆ.

ಆಧಾರ್ ಲಿಂಕ್ ನಿಂದಾಗಿಯೇ ಸಮಸ್ಯೆ: ಎಲ್ಲಾ ಪ್ರಮಾಣ ಪತ್ರಗಳನ್ನು ಆಧಾರ್ ಲಿಂಕ್ ಮಾಡಲಾಗುತ್ತಿದೆ. ಅದಲ್ಲದೇ ಯಾವುದೇ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದರೂ ಆಧಾರ್ ಲಿಂಕ್ ಕೇಳುತ್ತದೆ. ಕೆಲವು ಪ್ರಮಾಣ ಪತ್ರಗಳಿಗೆ ಮೊಬೈಲ್ ಲಿಂಕ್ ಅನ್ನು ಕೇಳುತ್ತದೆ. ಇದರಿಂದಾಗಿಯೇ ಹೆಚ್ಚಿನ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಆಧಾರ್ ಪೋರ್ಟಲ್ ಕೂಡ ಓಪನ್ ಆಗಾದೇ ಸಮಸ್ಯೆಯಾಗುತ್ತಿದೆ. ಗ್ರಾಮ ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ಬರುವ ಸಾರ್ವಜನಿಕರು ಅಲ್ಲಿನ ಸಿಬ್ಬಂದಿಗಳ ಮೇಲೆ ಅಸಮಾಧಾನ ಹೊರ ಹಾಕುತ್ತಿದ್ದಾರೆ ಎಂದು ಗ್ರಾಮ ಒನ್ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳು ಬೇಸರ ಹೊರಹಾಕಿದ್ದಾರೆ.

ಇತ್ತೀಚಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಲು ಸಮಸ್ಯೆಯಾಗುತ್ತಿದೆ. ಯಾವಾಗಲೂ ಸರ್ವರ್ ಸಮಸ್ಯೆ ಎಂದು ಬರುತ್ತಿದೆ. ಸಾರ್ವಜನಿಕರಿಂದ ಅರ್ಜಿಗಳನ್ನು ಪಡೆದುಕೊಂಡಾದ್ದು, ಅಪ್ಲೋಡ್ ಮಾಡಲು ಆಗುತ್ತಿಲ್ಲ.

|ರಮೇಶ್, ಗ್ರಾಮ ಒನ್ ಕೇಂದ್ರ, ಆಲೂರು, ಚಾಮರಾಜನಗರ

ರಾಜ್ಯ ಮಟ್ಟದಲ್ಲೇ ಸರ್ವರ್ ಸಮಸ್ಯೆ ಕಂಡುಬರುತ್ತಿದೆ. ಆದರೆ ಸಾರ್ವಜನಿಕರಿಗೆ ಯಾವುದೇ ಸಮಸ್ಯೆ ಆಗಿಲ್ಲ. ಜಾತಿ ಪ್ರಮಾಣ ಪತ್ರ ಪಡೆದುಕೊಳ್ಳಲು ನಾಡ ಕಚೇರಿ ಅಲ್ಲದೇ, ಸೇವಾ ಕೇಂದ್ರಗಳಲ್ಲೂ ಅರ್ಜಿ ಸಲ್ಲಿಸಬಹುದಾಗಿದೆ. ಸರ್ವರ್ ಸಮಸ್ಯೆ ಸಂಬಂಧ ತಂತ್ರಜ್ಞರ ಜತೆ ಮಾತನಾಡಿ ಬಗೆಹರಿಸಲಾಗುವುದು.

|ಬಸವರಾಜು, ತಹಸೀಲ್ದಾರ್, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net