ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸರ್ವರ್ ಸಮಸ್ಯೆ * ಆತಂಕದಲ್ಲಿ ಗಣತಿದಾರರು - ತಲುಪದ ಕೈಪಿಡಿ

raichur
raichur
Published on

ರಾಯಚೂರು ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಸೆ.22 ರಿಂದ ಆರಂಭ ಆಗಿದ್ದು, ಪ್ರಕ್ರಿಯೆಗೆ ಕಳೆದ ಮೂರು ದಿನಗಳಿಂದ ನಾನಾ ಸಮಸ್ಯೆಗಳು ಎದುರಾಗಿವೆ. ಸಮೀಕ್ಷೆಗೆ ರೂಪಿಸಿದ್ದ ಆ್ಯಪ್‌ನ ತಾಂತ್ರಿಕ ದೋಷ, ಸಮೀಕ್ಷಕರನ್ನು ತಲುಪದ ಕೈಪಿಡಿ, ಸರ್ವರ್ ಸಮಸ್ಯೆಗಳು ಕಾಡಿವೆ.

ನೆಟ್‌ವರ್ಕ್ ದೊರೆಯುತ್ತಿಲ್ಲ , ಮೊಬೈಲ್ ಸಾಫ್ಟವೇರ್ ಸಪೋರ್ಟ್ ಮಾಡುತ್ತಿಲ್ಲ , ಲೀಸ್ಟ್‌ನಲ್ಲಿದ್ದ ಮನೆ ಸಿಗುತ್ತಿಲ್ಲ. ಹೀಗೆ ನಾನಾ ಸಮಸ್ಯೆಗಳಿಂದಾಗಿ ಗಣತಿ ಸೇವೆಗೆ ನಿಯೋಜನೆಗೊಂಡ ಶಿಕ್ಷಕರು ತಲೆ ಬಿಸಿ ಮಾಡಿಕೊಂಡು ಗಣತಿ ಬಿಟ್ಟು ಬುಧವಾರ ತಹಸೀಲ್ದಾರ್‌ರ ಕಚೇರಿಗೆ ದೌಡಾಯಿಸಿದ್ದರಿಂದ ಕಚೇರಿಯಲ್ಲಿ ಜನಸಂದಣಿ ಹೆಚ್ಚಾಗಿ ಕಂಡುಬಂದಿತು.

ಸರ್ವರ್ ಸಮಸ್ಯೆ

ಜಿಲ್ಲೆಯಲ್ಲಿ ಒಬ್ಬ ಗಣತಿದಾರರಿಗೆ ಬ್ಲಾಕ್ ಗುರುತಿಸಿ ಸುಮಾರು 150 ಮನೆ ಸಮೀಕ್ಷೆ ವಹಿಸಲಾಗಿದೆ. ಅಕಸ್ಮಾತ್ ಕುಟುಂಬ ಸದಸ್ಯರು ಇರದಿದ್ದರೆ ಮತ್ತೆ ಎರಡು ಬಾರಿ ಭೇಟಿ ನೀಡಬೇಕು. ಕೊನೆಗೆ ಮೇಲ್ವಿಚಾರಕರು ಬಂದು ಡೋರ್ ಲಾಕ್ ಎಂದು ದಾಖಲಿಸುತ್ತಾರೆ. ಇಷ್ಟೆಲ್ಲ ತೊಂದರೆಗಳ ಮಧ್ಯೆ ಸರ್ವರ್ ಸಮಸ್ಯೆ ಕಾಡುತ್ತದೆ. ಗಣತಿ ಪೂರ್ಣಗೊಳಿಸಿ ಮಾಲೀಕರ ಫೋಟೊದೊಂದಿಗೆ ದೃಢೀಕರಣ ಪತ್ರ ಅಪ್‌ಲೋಡ್ ಮಾಡಬೇಕು. ಹೀಗೆ ಮಾಡಿದ ನಂತರ ಗಣತಿ ಪೂರ್ಣ, ಆದರೆ ಕೊನೆಯ ಹಂತದಲ್ಲಿ ಅಪ್‌ಲೋಡ್ ಕೈ ಕೊಡುತ್ತಿದೆ. ಹೀಗಾಗಿ 15 ದಿನಗಳಲ್ಲಿ ಸಮೀಕ್ಷೆ ಪೂರ್ಣಗೊಳ್ಳುವುದು ಸದ್ಯಕ್ಕೆ ಅನುಮಾನವಾಗಿದೆ.

ಹಳ್ಳಿಗಳಲ್ಲಿ ನೆಟ್‌ವರ್ಕ್‌ಕಾಟ

ಗ್ರಾಮೀಣ ಪ್ರದೇಶಗಳಲ್ಲಿ ಗಣತಿದಾರರು ನೆಟ್‌ವರ್ಕ್ ಸಮಸ್ಯೆ ಎದುರಿಸುತ್ತಿದ್ದಾರೆ. ಒಂದು ಮನೆಯ ಪೂರ್ಣ ವಿವರ ದಾಖಲಿಸಿ ಅಪ್‌ಲೋಡ್ ಮಾಡಿದ ನಂತರ ಮತ್ತೊಂದು ಮನೆ ಗಣತಿ ನಡೆಸಬೇಕು. ದಾಖಲೆ ಅಪ್‌ಲೋಡ್ ಆಗದೇ ಗಣತಿದಾರರು ಪರದಾಡುತ್ತಿದ್ದಾರೆ. 4ಜಿ ಮೊಬೈಲ್‌ಗಳಿರುವ ಗಣತಿದಾರರು ಆ್ಯಪ್‌ಡೌನ್‌ಲೋಡ್‌ಸಮಸ್ಯೆಯಿಂದ ಕಂಗೆಟ್ಟಿದ್ದಾರೆ.

ಜಿಲ್ಲೆಯಲ್ಲಿ ಎಷ್ಟು ಗಣತಿದಾರರು ನೇಮಕ ಜಿಲ್ಲೆಯಲ್ಲಿ ಸೆ.22ರಿಂದ ಆರಂಭವಾದ ಮನೆ ಮನೆ ಭೇಟಿಯ ಸಮೀಕ್ಷೆಗೆ ಒಟ್ಟು 3178 ಶಿಕ್ಷಕರು ಸೇರಿ ಒಟ್ಟು 3586 ಸಿಬ್ಬಂದಿಗಳ ನೇಮಕ ಮಾಡಲಾಗಿದೆ. ಗಣತಿಗೆ ನೇಮಕವಾದ ಬಹುತೇಕರು 1ರಿಂದ 8ನೇ ತರಗತಿಯ ಶಿಕ್ಷಕರಾಗಿದ್ದು, ಒಬ್ಬ ಶಿಕ್ಷಕನಿಗೆ 150 ಮನೆಗಳಿಗೆ ಒಂದು ವಲಯ ಮಾಡಿ ಹತ್ತು ವಲಯಗಳಿಗೆ ಒಬ್ಬ ಮೇಲ್ವಿಚಾರಕರ ನೇಮಿಸಲಾಗಿದೆ. ಸುಮಾರು 60 ಅಂಶಗಳ ಸಮೀಕ್ಷೆ ಮಾಡಲು 3178 ಜನ ಶಿಕ್ಷಕರು ಗಣತಿದಾರರಾಗಿ, 340 ಮೇಲ್ವಿಚಾರಕರು, 68 ಜನ ಮಾಸ್ಟರ್ ತರಬೇತುದಾರರಾಗಿ ನೇಮಿಸಲಾಗಿದೆ.

ಈ ಪೈಕಿ ರಾಯಚೂರು ತಾಲೂಕಿನಲ್ಲಿ 860 ಜನ ಶಿಕ್ಷಕರು ಗಣತಿದಾರರಾಗಿಕಾರ್ಯ ನಿರ್ವಹಿಸಲಿದ್ದು, ಮಾನ್ವಿಯಲ್ಲಿ 310, ಸಿಂಧನೂರಲ್ಲಿ 563 , ದೇವದುರ್ಗದಲ್ಲಿ 425, ಲಿಂಗಸುಗೂರಿಲ್ಲಿ 470, ಮಸ್ಕಿಯಲ್ಲಿ 310 ಹಾಗೂ ಸಿರವಾರ ತಾಲೂಕಿನಲ್ಲಿ 240 ಜನ ಶಿಕ್ಷಕರು ಗಣತಿ ಕಾರ್ಯಕ್ಕೆ ನಿಯುಕ್ತಿಗೊಂಡಿದ್ದಾರೆ. ಇದರ ಜತೆಗೆ ಹೆಚ್ಚುವರಿಯಾಗಿ 80 ಜನರ ನೇಮಕ ಮಾಡಲು ಆಯಾ ತಾಲೂಕಿನ ಬಿಇಓಗಳು ಡಿಡಿಪಿಐಗೆ ಮನವಿ ಮಾಡಿದ್ದಾರೆ.

ಗಣಿತಿದಾರರ ಪ್ರಶ್ನೆಗೆ ಉತ್ತರ ನೀಡಲು ಹಿಂದೇಟು

ಸಮೀಕ್ಷೆಯಲ್ಲಿ ಗಣತಿದಾರರು ಕೇಳಲಾಗುವ ಕೆಲವು ಪ್ರಶ್ನೆಗಳು ಮುಜುಗರಕ್ಕೆ ಕಾರಣವಾಗುತ್ತಿವೆ. ನಿಮ್ಮ ಮನೆಯಲ್ಲಿರುವ ಆಭರಣಗಳ ಸಂಖ್ಯೆ ಎಷ್ಟು ಎಂಬ ಪ್ರಶ್ನೆಗೆ ಕುಟುಂಬ ಸದಸ್ಯರು ಹತ್ತು ಬಾರಿ ವಿಚಾರ ಮಾಡುತ್ತಾರೆ. ಈ ಮಾಹಿತಿ ಕೊಟ್ಟರೆ ಸಮಸ್ಯೆ ಏನಾದರೂ ಆಗಬಹುದೇ ಎಂಬ ಪ್ರಶ್ನೆ ಮೂಡುತ್ತವೆ. ನೀವು ಮದುವೆಯಾದಾಗಿನ ವಯಸ್ಸು ಎಷ್ಟು ಎಂಬ ಪ್ರಶ್ನೆ ಕೂಡ ಗೊಂದಲಕ್ಕೆ ಕಾರಣ. ಈ ಪ್ರಶ್ನೆ ಮೂಲಕ ಬಾಲ್ಯವಿವಾಹದ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆಯಾ ಎಂಬ ಅನುಮಾನ ಮೂಡಿತು. ಸಮೀಕ್ಷೆ ಪ್ರಕಾರ ಪ್ರತಿ ಕುಟುಂಬ ಸದಸ್ಯರಿಗೆ 40, ಇಡೀ ಕುಟುಂಬಕ್ಕೆ 20 ಪ್ರಶ್ನೆ ಕೇಳಬೇಕಾಗುತ್ತದೆ. ಹತ್ತು ಜನರಿರುವ ಕುಟುಂಬದ ಸಮೀಕ್ಷೆ ಪೂರ್ಣಗೊಳಿಸಬೇಕಾದರೆ ಗಣತಿದಾರರಿಗೆ ಭರ್ತಿ ನಾಲ್ಕು ಗಂಟೆ ಬೇಕು.ಈ ಎಲ್ಲಾ ಪ್ರಶ್ನೆಗಳನ್ನು ತುಂಬುವಷ್ಟರಲ್ಲಿ ಸರ್ವರ್ ಸಮಸ್ಯೆ ಎದುರಾಗಿದ್ದರಿಂದ ಹಿಂತಿರುಗಿ ಬರುವಂತ ಸ್ಥಿತಿ ಗಣತಿದಾರರಿಗೆ ಎದುರಾಗಿದೆ.

ಗಣತಿ ಸಮೀಕ್ಷೆಗೆ ಕೇವಲ ಜಿಲ್ಲೆ ಮಾತ್ರವಲ್ಲದೆ ರಾಜ್ಯಾದ್ಯಂತ ನೆಟ್‌ವಕ್ ಸೇರಿದಂತೆ ಲೀಸ್ಟ್‌ನಲ್ಲಿದ್ದ ಮನೆ ಸಿಗುತ್ತಿಲ್ಲ ಎಬುವುದು ಸೇರಿದಂತೆ ಹಲವು ಸಮಸ್ಯೆ ಕಂಡು ಬಂದಿದ್ದು, ಈ ಕುರಿತು ಸರ್ಕಾರದ ಹಿರಿಯ ಅಧಿಕಾರಿಗಳ ಜತೆಗೆ ಮಾತನಾಡಿರುವೆ. ಶೀಘ್ರವಾಗಿ ಸಮಸ್ಯೆ ಬಗೆಹರಿಸಲಾಗುತ್ತದೆಂದು ಹೇಳಿದ್ದಾರೆ. ಶಿವಾನಂದ ಭಜಂತ್ರಿ ಎಡಿಸಿ ರಾಯಚೂರು

in panic - manual not reached

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net