

ಕೊಪ್ಪ: ರೈತರು ತಮ್ಮ ಪಹಣಿಗಳನ್ನು ಆಧಾರ್‌ಕಾರ್ಡ್ ಜತೆ ಲಿಂಕ್ ಮಾಡಿಸಲು ಸರ್ಕಾರ ಜೂನ್ ಅಂತ್ಯದವರೆಗೆ ಗಡುವು ನೀಡಿದೆ. ಆದರೇ, ಸರ್ವರ್ ಸಮಸ್ಯೆಯಿಂದ ಕೃಷಿಕರು ತಮ್ಮ ಕೃಷಿ ಕಾರ್ಯಗಳನ್ನು ಬಿಟ್ಟು ನಾಡಕಚೇರಿ ಎದುರು ಸರತಿ ಸಾಲಿನಲ್ಲಿ ನಿಲ್ಲುವಂತಾಗಿದೆ.
ಆಧಾರ್ ಜತೆಗೆ ಪಹಣಿ ಜೋಡಣೆಗೆ ಜಿಲ್ಲಾದ್ಯಂತ ಸರ್ವರ್ ಸಮಸ್ಯೆ ಇರುವುದರಿಂದ ಪ್ರತಿ ತಾಲೂಕುಗಳಲ್ಲಿ ನಾಡಕಚೇರಿ ಹಾಗೂ ಗ್ರಾಮ ಪಂಚಾಯಿತಿಗಳ ಮುಂದೆ ಸಾಲಿನಲ್ಲಿ ನಿಲ್ಲುವಂತಾಗಿದೆ. ಕೆಲವು ಗ್ರಾಪಂಗಳಲ್ಲಿ ಪಿಡಿಒಗಳು ಆಧಾರ್ ಪಹಣಿ ಜೋಡಣೆಗೆ ಮುಂದಾದರೂ ಸರ್ವರ್ ಸಮಸ್ಯೆಯಿಂದ ಸಕಾಲದಲ್ಲಿ ಒಟಿಪಿ ಬಾರದೆ ಪಹಣಿ ಲಿಂಕ್‌ಆಗುತ್ತಿಲ್ಲ. ಜಿಲ್ಲೆಯಲ್ಲಿ ಪಹಣಿ ಹೊಂದಿರುವ 8,41,080 ರೈತರಿದ್ದಾರೆ. ಈ ಪೈಕಿ ಕೇವಲ 2,35,017 ರೈತರ ಪಹಣಿ ಮಾತ್ರ ಆಧಾರ್ ಕಾರ್ಡ್‌ಗೆ ಲಿಂಕ್‌ಆಗಿದೆ. ಉಳಿದವರು ಲಿಂಕ್ ಮಾಡಿಸಲು ಸರ್ವರ್ ಸಮಸ್ಯೆ ಎದುರಿಸುತ್ತಿದ್ದಾರೆ.
ಬೆಳೆ ಪರಿಹಾರ, ಬ್ಯಾಂಕ್ ಸಾಲ ಹಾಗೂ ಇನ್ನಿತರ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್‌ಲಿಂಕ್ ಮಾಡಿಸುವುದು ಕಡ್ಡಾಯವಾಗಿದೆ. ಬೆಳೆ ಪರಿಹಾರ, ಬೆಳೆ ವಿಮೆಯಲ್ಲಿ ರೈತರಿಗೆ ಅನ್ಯಾಯವಾಗುವುದು ಹಾಗೂ ದುರುಪಯೋಗ ತಡೆಯಲು ಸರ್ಕಾರ ಆಧಾರ್‌ಕಾರ್ಡ್ ಜತೆಗೆ ಪಹಣಿ ಜೋಡಿಸಲು ಮುಂದಾಗಿದೆ. ಸರ್ಕಾರದಿಂದ ನೀಡುವ ಪರಿಹಾರದ ಹಣ ಆಧಾರ್‌ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಹೋಗುವುದರಿಂದ ಪಹಣಿಗೆ ಆಧಾರ್ ಜೋಡಣೆ ಅವಶ್ಯಕವಾಗಿದೆ.
ಕಳೆದ ಎರಡು ತಿಂಗಳಿನಿಂದ ರಾಜ್ಯ ಸರ್ಕಾರ ಆಧಾರ್ ಪಹಣಿ ಜೋಡಣೆಗೆ ಅವಕಾಶ ನೀಡಿದ್ದರೂ ಸಹ ಲೋಕಸಭೆ ಚುನಾವಣೆ ಇನ್ನಿತರ ಕೆಲಸಗಳಲ್ಲಿ ಕಂದಾಯ ಹಾಗೂ ಇತರ ಗ್ರಾಪಂ ಸಿಬ್ಬಂದಿ,ಅಧಿಕಾರಿಗಳು ತೊಡಗಿಸಿಕೊಂಡಿದ್ದರಿಂದ ಆಧಾರ್ ಜೋಡಣೆಗೆ ಹಿನ್ನಡೆಯಾಗಿದೆ ಎನ್ನಲಾಗಿದೆ. ಜೋಡಣೆಗೆ ಒಂದು ತಿಂಗಳು ಮಾತ್ರ ಅವಕಾಶ ಇರುವುದರಿಂದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ನಾಡ ಕಚೇರಿ, ಗ್ರಾಪಂಗಳ ಮುಂದೆ ಜಮಾಯಿಸುತ್ತಿದ್ದಾರೆ.
ಸರ್ಕಾರದ ಯಾವುದೇ ಯೋಜನೆಗಳು ಬಂದಾಗ ಸರ್ವರ್ ಸಮಸ್ಯೆ ಎದುರಾಗುತ್ತದೆ. ಆಧಾರ್‌ಗೆ ಪಹಣಿ ಜೋಡಣೆ ಮಾಡುವಾಗಲೂ ಸಹ ಸರ್ವರ್ ಸಮಸ್ಯೆ ಎದುರಾಗಿದೆ. ಇದರಿಂದ ರೈತರು ಪರದಾಡುವಂತಾಗಿದೆ. ಈ ವೇಳೆಗೆ ಮಳೆಯಾಗುತ್ತಿರುವುದರಿಂದ ಮುಂಗಾರು ಪೂರ್ವ ಕೆಲಸಗಳಿಗೂ ಸಮಸ್ಯೆಯಾಗುತ್ತದೆ.