

ಮುಳಬಾಗಿಲು: ಬಿಪಿಎಲ್ ಪಡಿತರ ಚೀಟಿ ಪಡೆಯಲು ಸಾರ್ವಜನಿಕರು ನಿತ್ಯ ಸರ್ಕಾರಿ ಕಚೇರಿಗೆ ಅಲೆಯುವುದೇ ಕಾಯಕವಾಗಿದೆ. 2 ವರ್ಷಗಳಿಂದ ಹೊಸ ಕಾರ್ಡ್ ಸಿಗದೆ ಅನೇಕರಿಗೆ ಪರಿತರ ಪಡೆಯುವುದಿರಲಿ ತುರ್ತು ವೈದ್ಯಕಿಯ ಸೇವೆ ಪಡೆಯಲೂ ಪರದಾಡುವಂತಾಗಿದೆ. ಕಳೆದ ಕೆಲವು ದಿನಗಳಿಂದ ಬೆಳಗ್ಗೆಯಿಂದ ಸಂಜೆಯವರೆಗೆ ಸೇವಾ ಕೇಂದ್ರಗಳ ಮುಂದೆ ಹೊಸ ಕಾರ್ಡ್ಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಕೆ ಮಾಡಲು ಸಾರ್ವಜನಿಕರು ಪರದಾಡುತ್ತಿರುವ ದೃಶ್ಯ ಹೇಳತೀರದಾಗಿದೆ.
ಜು.2, 3 ರಂದು ಬೆಳಗ್ಗೆ 10 ರಿಂದ 12 ಮತ್ತು ಸಂಜೆ 4 ರಿಂದ 6 ರವರೆಗೂ ಬಿಪಿಎಲ್ ಕಾರ್ಡ್ಗೆ ಹೊಸ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂಬ ಆಹಾರ ಇಲಾಖೆ ಸಂದೇಶ ಹರಿದಾಡಿದ ಬೆನ್ನಲ್ಲೇ ಗ್ರಾಮಒನ್ ಮತ್ತು ಕರ್ನಾಟಕ ಒನ್ ಸೇವಾ ಕೇಂದ್ರಗಳ ಮುಂದೆ ಜನರ ದಂಡೇ ನೆರೆದಿತ್ತು. ಆದರೆ, ಅರ್ಜಿ ಹಾಕಲು ಸರ್ವರ್ ಪ್ರಾಬ್ಲಂ ಎದುರಾಗಿ ಬರಿಗೈಲಿ ವಾಪಸ್ ಆಗುವಂತಾಗಿದೆ. ತಾಲೂಕಿನಲ್ಲಿ ಗ್ರಾಮ ಒನ್ 40 ಕೇಂದ್ರಗಳಿದ್ದು, ಕರ್ನಾಟಕ ಒನ್ 2 ಕೇಂದ್ರಗಳಿವೆ. ಈ ಎಲ್ಲ ಕೇಂದ್ರಗಳಲ್ಲಿ ಎರಡು ದಿನಗಳಿಂದ ಹೊಸ ಬಿಪಿಎಲ್ ಕಾರ್ಡ್ಗೆ ಅರ್ಜಿ ಸಲ್ಲಿಸಲು ದುಂಬಾಲು ಬೀಳುತ್ತಿದ್ದರೂ ಆನ್ಲೈನ್ ಸರ್ವರ್ ಪಾಬ್ಲಂ ಸರಿ ಹೋಗಲಿಲ್ಲ. ಇದರಿಂದ ಫಲಾನುಭವಿಗಳು ಸರ್ಕಾರಕ್ಕೆ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಶಾಪ ಹಾಕುತ್ತಿದ್ದಾರೆ.
ಪ್ರತಿದಿನವೂ ಸುತ್ತುವುದೇ ಕಾಯಕ: 2023ರ ಸೆಪ್ಟೆಂಬರ್ನಿಂದ ಡಿಸೆಂಬರ್ನಲ್ಲಿ ಮುಳಬಾಗಿಲು ತಾಲೂಕಿನಲ್ಲಿ ತಿದ್ದುಪಡಿಗೆ 815 ಅರ್ಜಿ ಸಲ್ಲಿಕೆಯಾಗಿದ್ದು, ಇದುವರೆಗೂ ಒಂದೇ ಒಂದು ಪಡಿತರ ಚೀಟಿ ತಿದ್ದುಪಡಿ ಮಾಡಲು ಅವಕಾಶ ಲಭಿಸಿಲ.್ಲ ಇದರಿಂದ ಫಲಾನುಭವಿಗಳು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಹೊಸ ಕಾರ್ಡ್ಗೆ ಅರ್ಜಿ ಪಡೆಯಲಿದ್ದಾರೆ ಎಂಬ ಮಾಹಿತಿಯಿಂದ ಬಹುತೇಕ ಕುಟುಂಬ ಸದಸ್ಯರ ಆಧಾರ್ಕಾರ್ಡ್, ಆದಾಯ ಪ್ರಮಾಣ ಪತ್ರದೊಂದಿಗೆ ವರ್ಷದಿಂದ ಅಲೆಯುತ್ತಿದ್ದಾರೆ. ಪ್ರತಿ ತಿಂಗಳು 2 ದಿನ ಆನ್ಲೈನ್ ಮೂಲಕ ಅವಕಾಶ ಕಲ್ಪಿಸಲಾಗುತ್ತದೆ ಎಂಬ ಮಾಹಿತಿ ಮನಗಂಡು ಸೇವಾ ಕೇಂದ್ರಗಳಿಗೆ ಮುಗಿಬೀಳುತ್ತಿದ್ದರೂ ಕೆಲಸ ಮಾತ್ರ ಆಗುತ್ತಿಲ್ಲ. ಕೂಲಿನಾಲಿ ಬಿಟ್ಟು ಬಿಪಿಎಲ್ ಕಾರ್ಡ್ಗಾಗಿ ತಿರುಗಾಡುವುದೇ ಕಾಯಕವಾಗಿದೆ.
ಪೂರ್ಣಗೊಳ್ಳದ ನೋಂದಣಿ ಪ್ರಕ್ರಿಯೆ: ತಾಲೂಕಿನಲ್ಲಿ ಎಎವೈ (ಅಂತ್ಯೋದಯ) 4,976 ಕಾರ್ಡ್ಗಳು, ಬಿಪಿಎಲ್ 58,867, ಎಪಿಎಲ್ 1,768 ಸೇರಿ ಒಟ್ಟು 63,843 ಕಾರ್ಡ್ಗಳು ಇವೆ. ನಗರದಲ್ಲಿ 25, ಗ್ರಾಮಾಂತರದಲ್ಲಿ 94 ನ್ಯಾಯಬೆಲೆ ಅಂಗಡಿಗಳು ಸೇರಿ ಒಟ್ಟು 119 ನ್ಯಾಯಬೆಲೆ ಅಂಗಡಿಗಳಲ್ಲಿ ಎಸ್ಸಿ, ಎಸ್ಟಿ ಫಲಾನುಭವಿಗಳು ಇರುವ ಬಿಪಿಎಲ್ ಮತ್ತು ಎಎವೈ ಕಾರ್ಡ್ಗಳ ಪ್ರತ್ಯೇಕ ನೋಂದಣಿ ಕಳೆದ ಜನವರಿಯಿಂದ ಇದುವರೆಗೂ ನಡೆಯುತ್ತಲೇ ಇದೆ. ಆದರೂ ಇನ್ನೂ ಪೂರ್ಣಗೊಂಡಿಲ್ಲ. ಈ ವರ್ಗದ ಫಲಾನುಭವಿಗಳ ಕುಟುಂಬ ಸದಸ್ಯರ ಜಾತಿ ಆದಾಯ ಪ್ರಮಾಣ ಪತ್ರಗಳನ್ನು ನ್ಯಾಯಬೆಲೆ ಅಂಗಡಿಗಳಲ್ಲಿ ಆನ್ಲೈನ್ ಮೂಲಕ ದಾಖಲೀಕರಣ ಮಾಡಲಾಗುತ್ತಿದ್ದು, ಇದಕ್ಕೂ ಸರ್ವರ್ ಸಮಸ್ಯೆ ಕಾಡುತ್ತಿದೆ.
ಸೇವಾ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ಸರಿಯಾದ ತಿಳಿವಳಿಕೆ ನೀಡುತ್ತಿಲ್ಲ, ತುರ್ತು ವೈದ್ಯಕಿಯ ಸೇವೆ ಇರುವ ಫಲಾನುಭವಿಗಳಿಗೆ ಬಿಪಿಎಲ್ ಕಾರ್ಡ್ ಮಾಡಿಸಿಕೊಳ್ಳಲು ರಾಜ್ಯಾದ್ಯಂತ ಪ್ರತಿ ತಿಂಗಳು ದಿನದ ಎರಡು ಅವಧಿ ನೀಡಲಾಗುತ್ತಿದೆ. 7 ಸರ್ವರ್ಗಳು ಕಾರ್ಯನಿರ್ವಹಿಸುತ್ತವೆ. ಜನರು ಹೆಚ್ಚಾಗಿ ಎಲ್ಲ ಸೇವಾ ಕೇಂದ್ರಗಳಲ್ಲಿ ಕಾರ್ಯನಿರ್ವಹಣೆ ನಡೆಯುತ್ತಿರುವುದರಿಂದ ಸಮಸ್ಯೆ ಉಂಟಾಗುತ್ತದೆ.
ಲತಾ ಉಪನಿರ್ದೇಶಕಿ, ಆಹಾರ ಇಲಾಖೆ, ಕೋಲಾರ.