

ಕಡೂರು: ಗೃಹಲಕ್ಷ್ಮೀ ಯೋಜನೆಗೆ ಮೊದಲ ದಿನ ಗುರುವಾರ ಪಟ್ಟಣದಲ್ಲಿ ಸರ್ವರ್ ಸಮಸ್ಯೆಯಿಂದಾಗಿ ಅರ್ಜಿ ಸಲ್ಲಿಸಲು ಆಗದೆ ವಾಪಸ್ ತೆರಳಿದರು.
ಅರ್ಜಿ ಸಲ್ಲಿಸಲು ಮಹಿಳೆಯರು ನಿಗದಿತ ಕೇಂದ್ರಗಳಿಗೆ ಆಗಮಿಸಿದ್ದರು. ಲಾಗಿನ್ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಮಹಿಳೆಯರು ಬೆಳಗ್ಗೆಯಿಂದ ಸಂಜೆಯವರೆಗೂ ಕಾದರೂ ಸರ್ವರ್ ಸರಿಹೋಗದಿದ್ದರಿಂದ ವಾಪಸ್ ಹೋದರು.
ಅರ್ಜಿ ಸಲ್ಲಿಕೆಗೆ ಪಟ್ಟಣದಲ್ಲಿ 4 ಕೇಂದ್ರ ಗುರುತಿಸಲಾಗಿದೆ. 1-7 ವಾರ್ಡ್‌ಗಳ ನಾಗರಿಕರಿಗೆ ಪಟ್ಟಣದ ಪೇಟೆಯ ಕನಕಭವನ, 8-15 ವಾರ್ಡ್‌ಗಳ ಜನರಿಗೆ ಪುರಸಭೆ ಕಚೇರಿ ಆವರಣದ ಮಳಿಗೆ, 16-23 ವಾರ್ಡ್‌ಗಳ ಜನರಿಗೆ ಸುಭಾಷ್ ನಗರದ ಮೂರ್ತಿಹಾಳ್ ಸಮುದಾಯ ಭವನ ನಿಗದಿಪಡಿಸಲಾಗಿದೆ. ತಾಲೂಕು ಕಚೇರಿಯ ನಾಡಕಚೇರಿ ಮತ್ತು ಗ್ರಾಮಒನ್ ಕೇಂದ್ರದಲ್ಲಿಯೂ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದು ಪುರಸಭಾ ಮುಖ್ಯಾಧಿಕಾರಿ ಕೆ.ರುದ್ರೇಶ್ ವಿಜಯವಾಣಿಗೆ ಮಾಹಿತಿ ನೀಡಿದರು.
ಅರ್ಜಿ ಸಲ್ಲಿಕೆಗೆ ಮೊಬೈಲ್ ನಂಬರ್‌ಗೆ ಮೆಸೇಜ್ ಬರುತ್ತದೆ ಎಂದು ಸರ್ಕಾರ ಹೇಳಿತ್ತು. ಆದರೆ ಮೆಸೇಜ್ ಬರದಿದ್ದರಿಂದ ಮಹಿಳೆಯರು ಗೊಂದಲದಲ್ಲಿದ್ದಾರೆ. ತಾಂತ್ರಿಕ ದೋಷದಿಂದ ಗುರುವಾರ ಯಾವುದೇ ಸಂದೇಶ ರವಾನೆಯಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ತಾಲೂಕಿನ 39 ಗ್ರಾಮಒನ್ ಕೇಂದ್ರಗಳ ಪೈಕಿ 8 ಗ್ರಾಮಒನ್ ಕೇಂದ್ರಗಳಿಂದ 17 ಅರ್ಜಿಗಳು ನೋಂದಣಿಯಾಗಿವೆ. ಇನ್ನು 8 ಗ್ರಾಮ ಒನ್ ಕೇಂದ್ರಗಳಲ್ಲಿ ಲಾಗಿನ್ ಪಡೆದುಕೊಂಡಿಲ್ಲ. ಬಾಕಿ ಉಳಿದ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸುವ ವೇಳೆ ಆಧಾರ್ ಇಕೆವೈಸಿಯಲ್ಲಿ ಒಟಿಪಿ ಜನರೇಟ್ ಸಮಸ್ಯೆ ಕಾಣಿಸಿಕೊಂಡಿದ್ದು, ಜತೆಗೆ ಸರ್ವರ್ ಸಮಸ್ಯೆಯಿಂದಾಗಿ ಅರ್ಜಿಗಳ ಸಲ್ಲಿಕೆಗೆ ವಿಳಂಬವಾಗುತ್ತಿದೆ ಎಂದು ತಹಸೀಲ್ದಾರ್ ಎಂ.ಪಿ.ಕವಿರಾಜ್ ತಿಳಿಸಿದ್ದರೆ.