ಅಧಿಕಾರ ಇದ್ದಾಗ ಸಮಾಜ ಸೇವೆ ಮಾಡಿ

ಚನ್ನರಾಯಪಟ್ಟಣದಲ್ಲಿ ಆಯೋಜಿಸಿದ್ದ ಜನ ಜಾಗೃತಿ ಸಮಾರಂಭದಲ್ಲಿ ವಿಜಯ್ ಕುಮಾರ್ ಕುಟುಂಬದವರನ್ನು ಸುತ್ತೂರುಶ್ರೀ ಸನ್ಮಾನಿಸಿದರು. ಪುಟ್ಟೇಗೌಡ, ರಾಜಣ್ಣ, ಶಶಿಧರ್, ಕೃಷ್ಣೇಗೌಡ, ವಸಂತಮ್ಮ, ಕಿಶನ್, ರಾಜೀವ್ ಇದ್ದರು.
ಚನ್ನರಾಯಪಟ್ಟಣದಲ್ಲಿ ಆಯೋಜಿಸಿದ್ದ ಜನ ಜಾಗೃತಿ ಸಮಾರಂಭದಲ್ಲಿ ವಿಜಯ್ ಕುಮಾರ್ ಕುಟುಂಬದವರನ್ನು ಸುತ್ತೂರುಶ್ರೀ ಸನ್ಮಾನಿಸಿದರು. ಪುಟ್ಟೇಗೌಡ, ರಾಜಣ್ಣ, ಶಶಿಧರ್, ಕೃಷ್ಣೇಗೌಡ, ವಸಂತಮ್ಮ, ಕಿಶನ್, ರಾಜೀವ್ ಇದ್ದರು.
Published on

ಚನ್ನರಾಯಪಟ್ಟಣ: ದೇವರು, ಗುರು-ಹಿರಿಯರ ಆಶೀರ್ವಾದವಿದ್ದರೆ ಸಂಪತ್ತು ಕೂಡ ತನ್ನಷ್ಟಕ್ಕೆ ತಾನೇ ಹರಿದು ಬರುತ್ತದೆ ಎಂದು ಮೈಸೂರಿನ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ಪಟ್ಟಣದ ಗಾಂಧಿ ವೃತ್ತದಲ್ಲಿರುವ ಮಾಜಿ ಸಚಿವ ದಿ.ಶ್ರೀಕಂಠಯ್ಯ ಅವರ ಮನೆಯ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಜನಜಾಗೃತಿ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಭಗವಂತನ ಕೃಪೆ ಇದ್ದಾಗ ಶ್ರೀಮಂತಿಕೆ ತನ್ನಷ್ಟಕ್ಕೆ ತಾನೆ ನೀರಿನಂತೆ ಹರಿದು ಬರುತ್ತದೆ. ದೇವರ ಇಚ್ಛೆ ಇದ್ದಾಗ ಎಲ್ಲ ಕೆಲಸ ಸುಗಮವಾಗಿ ನಡೆಯುತ್ತದೆ. ದೇವರನ್ನು ಮರೆತರೆ ಹುಲ್ಲು ಕಡ್ಡಿಯೂ ಅಲುಗಾಡುವುದಿಲ್ಲ ಎಂಬ ಮಾತು ಸತ್ಯ ಎಂದರು.

ಅಧಿಕಾರ ಇದ್ದಾಗ ಸಮಾಜ ಸೇವೆ ಮಾಡುವುದನ್ನು ಮರೆಯಬಾರದು ಪ್ರಾಮಾಣಿಕತೆಯಿಂದ ನಡೆದುಕೊಂಡರೆ ಮನುಷ್ಯನ ಮನಸ್ಸಿಗೆ ಶಾಂತಿ, ನೆಮ್ಮದಿ ದೊರೆಯುತ್ತದೆ. ಮಾಜಿ ಸಚಿವ ದಿ.ಶ್ರೀಕಂಠಯ್ಯ ಚನ್ನರಾಯಪಟ್ಟಣದಲ್ಲಿ ಹುಲಿಯಂತೆ ರಾಜಕಾರಣ ಮಾಡುತ್ತಿದ್ದರು. ಅವರ ಬೀಗರಾದ ಮಾಜಿ ಸಚಿವ ಜಿ.ಪುಟ್ಟಸ್ವಾಮಿಗೌಡರೂ ಅಂದಿನ ದಿನಮಾನಗಳಲ್ಲಿ ರಾಜ್ಯದಲ್ಲಿ ಕೀರ್ತಿಗಳಿಸಿದ್ದನ್ನು ಮರೆಯುವಂತಿಲ್ಲ ಎಂದರು.

ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಸುತ್ತೂರು ಮಠ ಮಾಡಿರುವ ಸೇವೆ ಅನನ್ಯ. ಗುರುಗಳ ಅವಧಿಯಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಮಠ ಮುನ್ನಡೆಯುತ್ತಿರುವುದು ಶ್ಲಾಘನೀಯ ಎಂದರು.

ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಸಂತೆ ಶಿವರ ರಾಜಣ್ಣ ಮಾತನಾಡಿ, ಸುತ್ತೂರು ಮಠ ವಿವಿಧೆಡೆ ಶಿಕ್ಷಣ ಸಂಸ್ಥೆಗಳನ್ನು ತೆರೆದು ಲಕ್ಷಾಂತರ ಮಕ್ಕಳಿಗೆ ಶಿಕ್ಷಣ, ವಸತಿ, ಊಟ, ವಸ್ತ್ರ ನೀಡಿ ಸನ್ಮಾರ್ಗದಲ್ಲಿ ಮುನ್ನಡೆಸುತ್ತಿರುವುದು ದೇಶಕ್ಕೆ ಮಾದರಿಯಾಗಿದೆ ಎಂದರು.

ಸಮಾರಂಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಚ್.ಎಸ್.ವಿಜಯ್ ಕುಮಾರ್, ಕಾಂಗ್ರೆಸ್ ಮುಖಂಡರಾದ ರಾಜೇಶ್ವರಿ, ಕರ್ನಾಟಕ ವಿದ್ಯುತ್ ಕಾರ್ಖಾನೆ ಅಧ್ಯಕ್ಷ ಲಲಿತ್‌ರಾಘವ್, ಜಿಂದಾಲ್ ಸಂಸ್ಥೆ ಮಾಜಿ ವ್ಯವಸ್ಥಾಪಕ ಕೃಷ್ಣೇಗೌಡ, ಪುರಸಭಾ ಮಾಜಿ ಅಧ್ಯಕ್ಷ ಶಶಿಧರ್, ವಸಂತಮ್ಮ, ಮಂಗಳ ಚಂದ್ರು, ಶಿವಲಿಂಗಯ್ಯ, ಇಂದ್ರ ಜಯರಾಮ್, ಸುಧಾ ಮಂಜೇಗೌಡ, ಸುಮಾ ಶ್ರೀಕಂಠಯ್ಯ, ಕಿಶನ್, ನಿಶಾ, ರಾಜೀವ್ ಯಶಸ್ವಿನಿ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net