

ಕಂಪ್ಲಿ: ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷ ಹನುಮಂತಪ್ಪ ಮತ್ತು ಪದಾಧಿಕಾರಿಗಳು ಮಂಗಳವಾರ ಶಿಕ್ಷಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಎಂ, ಡಿಸಿಎಂ ಮತ್ತು ಶಿಕ್ಷಣ ಸಚಿವರಿಗೆ ಬರೆದ ಮನವಿಯನ್ನು ಶಾಸಕ ಜೆ.ಎನ್.ಗಣೇಶ್ ಅವರಿಗೆ ಸಲ್ಲಿಸಿದರು.
ತಾಲೂಕು ಅಧ್ಯಕ್ಷ ಹನುಮಂತಪ್ಪ ಮಾತನಾಡಿ, ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರೆಂದು ಪರಿಗಣಿಸಿ, 6ರಿಂದ 8ನೇತರಗತಿಗೆ ಸೇವಾ ಜೇಷ್ಠತೆಯೊಂದಿಗೆ ವಿಲೀನಗೊಳಿಸಿ ಆರ್ಥಿಕ ಸೌಲಭ್ಯಗಳನ್ನು ಕಲ್ಪಿಸಬೇಕು.
ಪ್ರಾಥಮಿಕ ಶಾಲಾ ಸಹ ಶಿಕ್ಷಕ ವೃಂದದಿಂದ ಪ್ರೌಢಶಾಲಾ ಸಹ ಶಿಕ್ಷಕ ಗ್ರೇಡ್-2 ವೃಂದಕ್ಕೆ ಬಡ್ತಿ ನೀಡುವಾಗ 2016ಕ್ಕಿಂತ ಮುಂಚೆ 1ರಿಂದ 7ಮತ್ತು 1ರಿಂದ 8ಕ್ಕೆ ನೇಮಕಾತಿಗೊಂಡ ಪ್ರಾಥಮಿಕ ಶಾಲಾ ಶಿಕ್ಷಕರಲ್ಲಿ ಪದವಿ, ಬಿ.ಇಡಿ ವಿದ್ಯಾರ್ಹತೆಯುಳ್ಳ ಶಿಕ್ಷಕರಿಗೆ ಶೇ.50 ಬಡ್ತಿಗೆ ಪರಿಗಣಿಸಬೇಕು. ರಾಜ್ಯದಲ್ಲಿ ಎನ್‌ಇಪಿ ರದ್ದುಗೊಳಿಸುವ ನಿಲುವಿನಲ್ಲಿ 1ರಿಂದ 7ನೇತರಗತಿಯನ್ನು ಪ್ರಾಥಮಿಕ, 8ರಿಂದ 10ನೇತರಗತಿಯನ್ನು ಪ್ರೌಢಹಂತ, 11ಮತ್ತು 12ನೇತರಗತಿಗಳನ್ನು ಕಾಲೇಜು ಹಂತಗಳಾಗಿ ಮುಂದುವರೆಸುವ ಕುರಿತು ಸಂಘಟನೆಯೊಂದಿಗೆ ಚರ್ಚಿಸಬೇಕು. ಶಿಕ್ಷಕರ ನಾನಾ ಬೇಡಿಕೆಗಳನ್ನು ಒಂದು ತಿಂಗಳ ಕಾಲದೊಳಗೆ ಪರಿಹರಿಸದಿದ್ದಲ್ಲಿ ಎಲ್ಲ ಶಿಕ್ಷಕರು 6ರಿಂದ 8ನೇತರಗತಿ ಬೋಧನೆಯನ್ನು ಅನಿರ್ದಿಷ್ಟಾವಧಿತನಕ ಬಹಿಷ್ಕರಿಸುವ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.
ಬಿಇಒ ಸಿದ್ದಲಿಂಗಮೂರ್ತಿ, ಇಸಿಒ ಜಿ.ವೀರೇಶ, ಉಪಪ್ರಾಚಾರ್ಯ ಬಸವರಾಜ ಪಾಟೀಲ್, ಶಿಕ್ಷಕ ಸಂಘಟನೆಗಳ ಪದಾಧಿಕಾರಿಗಳಾದ ಎಂ.ಎ.ನಾಗನಗೌಡ, ಸಿ.ನಿಂಗಪ್ಪ,ಶಿವಕುಮಾರ್ ಇತರರಿದ್ದರು.