

ಹನಗೋಡು: ಅಸರ್ ಸಂಸ್ಥೆ, ಗ್ರಾಮವಿಕಾಸ ಸಂಸ್ಥೆ ಹಾಗೂ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಹವಾಮಾನ ಕ್ರಿಯಾ ಕಾರ್ಯಕರ್ತರಿಗೆ ಒಂದು ದಿನದ ತರಬೇತಿಯನ್ನು ಹನಗೋಡು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ತರಬೇತಿ ಕಾರ್ಯಕ್ರಮದಲ್ಲಿ ಹುಣಸೂರು ರಾಜ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ನಮ್ಮ ಪೂರ್ವಿಕರು ಹಾಗೂ ಪ್ರಕೃತಿ ನಮಗೆ ಬಳುವಳಿಯಾಗಿ ಕೊಟ್ಟಿರುವ ನೀರು, ಮಣ್ಣು, ಅರಣ್ಯ, ಜಾನುವಾರು ಸಂಪತ್ತು ಹಾಗೂ ಜೀವನೋಪಾಯ ಚಟುವಟಿಕೆಗಳ ಮೇಲೆ ಹವಾಮಾನ ಬದಲಾವಣೆಯಿಂದ ಗಂಭೀರ ಪರಿಣಾಮ ಬೀರುತ್ತಿದೆ. ಮಾನವನ ದುರಾಸೆಯಿಂದಾಗಿ ಇತರ ಜೀವರಾಶಿಗಳು ಕೂಡ ಅಪಾಯದ ಅಂಚಿಗೆ ಸಿಲುಕಿವೆ. ಪ್ರಕೃತಿದತ್ತವಾಗಿ ನಮಗೆ ಲಭಿಸಿರುವ ಅರಣ್ಯ, ನೀರು ಜೀವವೈವಿಧ್ಯತೆಯು ನಾಶವಾಗುತ್ತಿವೆ. ಇವುಗಳ ಬಗ್ಗೆ ಸ್ಥಳೀಯ ಮಟ್ಟದಲ್ಲಿ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹನಗೋಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಂಗೀತಾ ಸುರೇಶ್, ಪಿಡಿಒ ಅನಿತಾ, ಸಂಪನ್ಮೂಲ ವ್ಯಕ್ತಿ ಪ್ರದೀಪ್ ಬಳ್ಳೆಕೆರೆ, ತಂಡದ ನಾಯಕಿ ಛಾಯಾ ನಾಗೇಗೌಡ, ಹನಗೋಡು, ನೇರಳಕುಪ್ಪೆ, ದೊಡ್ಡಹೆಜ್ಜೂರು, ಕಿರಂಗೂರು, ಕಡೆಮನುಗನಹಳ್ಳಿ ಗ್ರಾ.ಪಂ. ವ್ಯಾಪ್ತಿಯ 15 ಗ್ರಾಮಗಳ ರೈತರು, ಯುವಕರು, ಮಹಿಳೆಯರು ಕಾಲೇಜು ವಿದ್ಯಾರ್ಥಿಗಳ ಕಾರ್ಯಕರ್ತರ ತಂಡ ಮುಖ್ಯಸ್ಥರು ಭಾಗವಹಿಸಿದ್ದರು.