

ಹೊಸಪೇಟೆಯಲ್ಲಿ ಸಿನಿಮೀಯ ರೀತಿಯಲ್ಲಿ ಗಲಾಟೆ
ಹೊಸಪೇಟೆ: ಕ್ಷುಲ್ಲಕ ಕಾರಣಕ್ಕೆ ಸೈನ್ ಬೋರ್ಡ್ ನಿಂದ ಯುವಕನೊಬ್ಬನ ಮೇಲೆ ಸಿನಿಮೀಯ ರೀತಿಯಲ್ಲಿ ಹಲ್ಲೆ ನಡೆಸಿರುವ ಘಟನೆ ನಗರದ ಜೈ ಭೀಮ್ ಸರ್ಕಲ್‌ನಲ್ಲಿ ಮಂಗಳವಾರ ಸಂಜೆ ನಡೆದಿದೆ.
ನಗರದ ಚಿತ್ತವಾಡಗಿಯ ಹೊರಕೇರಿ ನಿವಾಸಿ ಪರಶುರಾಮ(೨೬) ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಇಲ್ಲಿನ ೧೦೦ ಬೆಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು., ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಗೆ ರವಾನಿಸಲಾಗಿದೆ. ಘಟನೆಯಿಂದ ಜನರು ಗುಂಪುಗೂಡುತ್ತಿದ್ದಂತೆ ಆರೋಪಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ ಎಂದು ತಿಳಿದು ಬಂದಿದೆ.
ಘಟನೆಗೆ ಕಾರಣವೇನು?
ಮಂಗಳವಾರ ಸಂಜೆ ೫.೩೦ರ ಸುಮಾರಿಗೆ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಎರಡು ಬೈಕ್‌ಗಳು ಮುಖಾಮುಖಿಯಾಗಿ ಡಿಕ್ಕಿಯಾಗಿವೆ. ಬೈಕ್ ಸವಾರರ ಮಧ್ಯೆ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ತೀವ್ರ ಸಿಟ್ಟಿಗೆದ್ದಿದ್ದ ಆರೋಪಿ ನೋಡ ನೋಡುತ್ತಿದ್ದಂತೆ ರಸ್ತೆ ಬದಿಗೆ ಇರಿಸಿದ್ದ ಮಾರ್ಗಸೂಚಿ ಫಲಕದ ಕಬ್ಬಿಣದ ಪೈಪ್‌ನಿಂದ ತಲೆಗೆ ಬಲವಾಗಿ ಹೊಡೆದಿದ್ದಾನೆ. ಇದರಿಂದ ಪರಶುರಾಮ ತಲೆಗೆ ಗಂಭೀರ ಗಾಯವಾಗಿದೆ. ತಲೆಯಿಂದ ರಕ್ತ ಸ್ರಾವಗೊಂಡು, ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ.
ಸ್ಥಳದಲ್ಲಿ ಜನರು ಗುಂಪು ಗೂಡುತ್ತಿದ್ದಂತೆ ಆರೋಪಿ ಕಾಲ್ಕಿತ್ತಿದ್ದಾನೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
ಬಳಿಕ ಗಾಯಾಳುನನ್ನು ಹೊಸಪೇಟೆ ಉಪ ವಿಭಾಗದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಮಾಹಿತಿ ತಿಖಿಯುತ್ತಿದ್ದಂತೆ ಚಿತ್ತವಾಡಗಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಮಾಹಿತಿ ಸಂಗ್ರಹಿಸಿದರು.