

ಮೈಸೂರು: ಕೆಲವು ದಿನಗಳಿಂದ ಮಾಜಿ ಸಚಿವರೊಬ್ಬರಿಗೆ ಸಂಬಂಧಿಸಿದ ಸಿ.ಡಿ. ಬಿಡುಗಡೆಯಾಗಿ ಕೊನೆಗೆ ಒಂದು ಹಂತಕ್ಕೆ ಪ್ರಕರಣ ತಣ್ಣಗಾದ ಬೆನ್ನಿಗೇ ಈ ಶಾಸಕರೊಬ್ಬರ ಕುರಿತು ಆಡಿಯೋ-ವಿಡಿಯೋ ಬಿಡುಗಡೆ ಮಾಡಲಾಗಿದ್ದು, ಗಂಭೀರ ಆರೋಪಗಳನ್ನು ಮಾಡಲಾಗಿದೆ. ಆರ್ಟಿಐ ಕಾರ್ಯಕರ್ತರೊಬ್ಬರು ಶಾಸಕರ ಕುರಿತ ಈ ಆಡಿಯೋ-ವಿಡಿಯೋವನ್ನು ಸುದ್ದಿಗೋಷ್ಠಿ ಕರೆದು ಬಿಡುಗಡೆ ಮಾಡಿದ್ದಾರೆ.
ಶಾಸಕ ಸಾ.ರಾ. ಮಹೇಶ್ ಅವರ ವಿರುದ್ಧ ಗಂಭೀರ ಆರೋಪವಿರುವ ಆಡಿಯೋ-ವಿಡಿಯೋ ಇದಾಗಿದ್ದು, ಆರ್ಟಿಐ ಕಾರ್ಯಕರ್ತ ಗಂಗರಾಜು ಎಂಬವರು ಇವುಗಳನ್ನು ಬಿಡುಗಡೆ ಮಾಡಿ ಆರೋಪ ಹೊರಿಸಿದ್ದಾರೆ. ಈ ಮೂಲಕ ಶಾಸಕರ ವಿರುದ್ಧ ಭೂಕಬಳಿಕೆ ಹಾಗೂ ಧಮ್ಕಿ ಆರೋಪ ಕೇಳಿಬಂದಿದೆ. ಸಾ.ರಾ.ಮಹೇಶ್ ಭೂಮಿ ಮಾಲೀಕರು ಎಂದು ಹೇಳಲಾದ ವ್ಯಕ್ತಿಯೊಂದಿಗೆ ಮಾತನಾಡಿರುವ ಆಡಿಯೋ, ಅಲ್ಲದೆ ಜಮೀನಿಗೆ ಕರೆಸಿಕೊಂಡು ಧಮ್ಕಿ ಹಾಕಿರುವ ಸಂಬಂಧ ವಿಡಿಯೋವನ್ನು ಗಂಗರಾಜು ಬಿಡುಗಡೆ ಮಾಡಿದ್ದಾರೆ. ಮೈಸೂರು ತಾಲೂಕು ಕೇರಗಳ್ಳಿ ಸರ್ವೇ ನಂ. 115ರ ಜಾಗ ಈ ಮೂಲಕ ವಿವಾದಕ್ಕೀಡಾಗಿದೆ.
ಸದರಿ ಜಾಗವನ್ನು ಶಾಸಕರು ತಮ್ಮದು ಎಂದು ಹೇಳಿಕೊಂಡಿದ್ದಾರೆ. ಅಲ್ಲಿರುವ 129 ಎಕರೆ ಜಾಗಕ್ಕೆ ಹೆಚ್ಚುವರಿ ಜಾಗವನ್ನು ಸೇರಿಸಿ ಒಟ್ಟು 191 ಎಕರೆಗೆ ಆರ್ಟಿಸಿ ಮಾಡಿಕೊಡಲಾಗಿದೆ. ಅಲ್ಲದೆ 500 ಎಕರೆ ಜಾಗದಲ್ಲಿ ಲೇಔಟ್ ಮಾಡಿದ್ದೇನೆ ಎಂಬುದಾಗಿ ಶಾಸಕರು ಹೇಳಿಕೊಂಡಿರುವುದಾಗಿ ಈ ಆಡಿಯೋ-ವಿಡಿಯೋ ಮೂಲಕ ಆರೋಪಿಸಲಾಗಿದೆ. ಆದರೆ ಅಷ್ಟು ಪ್ರಮಾಣದ ಆಸ್ತಿಯನ್ನು ಶಾಸಕರು ತಮ್ಮ ನಾಮಪತ್ರದ ಅಫಿಡವಿಟ್ನಲ್ಲಿ ತೋರಿಸಿಲ್ಲ. ಪ್ರಶ್ನಿಸಿದರೆ ನೀವು ದಾಖಲೆ ತೆಗೆದುಕೊಂಡು ಬನ್ನಿ ಅಂತ ಧಮ್ಕಿ ಹಾಕಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಬಗ್ಗೆ 5 ತಿಂಗಳ ಹಿಂದೆಯೇ ಪೊಲೀಸರಿಗೆ ದೂರು ನೀಡಿದ್ದೇವೆ ಎಂಬುದಾಗಿ ಗಂಗರಾಜು ಆರೋಪ ಮಾಡಿದ್ದಾರೆ.
ಶಾಸಕರಿಂದ ಧಮ್ಕಿ: ಕೇರಗಳ್ಳಿಯ ಭೂಮಿ ಮಾಲೀಕರು ಎನ್ನಲಾದ ಗಣಪತಿ ರೆಡ್ಡಿ ಅವರು ಶಾಸಕ ಸಾ.ರಾ.ಮಹೇಶ್ ತಮಗೆ ಧಮ್ಕಿ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ನಾನೊಬ್ಬ ಸಾಮಾನ್ಯ ಮನುಷ್ಯ, ಆದರೆ ಶಾಸಕರು ಜನ ಬೆಂಬಲ, ಪ್ರಭಾವ, ಅಧಿಕಾರ ದುರುಪಯೋಗ ಮಾಡಿಕೊಂಡು ದಬ್ಬಾಳಿಕೆ ಮಾಡಿದ್ದಾರೆ. ಆ ಬಗ್ಗೆ ನಾನು ಪೊಲೀಸ್ ಠಾಣೆಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ. ಜಾಗ ನನ್ನದು ಅಂತ ಕೋರ್ಟ್ ಕೂಡ ಆದೇಶ ಮಾಡಿದೆ. ಅದಾಗ್ಯೂ ಶಾಸಕರು ಸಿನಿಮೀಯ ರೀತಿಯಲ್ಲಿ ನಮ್ಮನ್ನು ಖಾಲಿ ಮಾಡಿಸಿದ್ದಾರೆ. ಸುಮಾರು 30 ಜನರು ಬಂದು ನಮ್ಮ ಸೆಕ್ಯುರಿಟಿ ಗಾರ್ಡ್‌ಗಳನ್ನು ಹೆದರಿಸಿ ಹೊರಗೆ ಕಳುಹಿಸಿದ್ದಾರೆ. ನಮ್ಮ ಜಾಗಕ್ಕೆ ಅದೇ ದಿನ ಬೇಲಿ ಹಾಕಿಕೊಂಡಿದ್ದಾರೆ. ಪ್ರಬಲರ ವಿರುದ್ಧ ಹೋರಾಟ ಮಾಡಲು ಸಾಧ್ಯವಾಗದೆ ಮಾಧ್ಯಮಗಳ ಮುಂದೆ ಬಂದಿದ್ದೇನೆ. ದಯವಿಟ್ಟು ನನ್ನ ಜಾಗ ನನಗೆ ಬಿಡಿಸಿಕೊಡಿ ಅಂತ ನಾನು ಮನವಿ ಮಾಡುತ್ತಿದ್ದೇನೆ ಎಂಬುದಾಗಿ ಗಣಪತಿ ರೆಡ್ಡಿ ಮನವಿ ಮಾಡಿಕೊಂಡಿದ್ದಾರೆ.